Rishabh Pant Health: ರಿಷಬ್ ಪಂತ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಚೇತರಿಸಿಕೊಳ್ಳಲು ಎಷ್ಟು ವಾರ ಬೇಕು?
Rishabh Pant Health: ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಜನವರಿ 6 ಶುಕ್ರವಾರದಂದು ಪಂತ್ ಅವರಿಗೆ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಡೆಹ್ರಾಡೂನ್‌ನ ಮ್ಯಾಕ್ಸ್ (Max Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಪಂತ್ (Rishabh Pant) ಅವರನ್ನು ಜ.4ರಂದು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನಿಂದ ಮುಂಬೈಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಜನವರಿ 6 ಶುಕ್ರವಾರದಂದು ಪಂತ್ ಅವರಿಗೆ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಕಳೆದ ಬುಧವಾರ, ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ (Kokilaben Ambani Hospital in Mumbai) ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಈ ಹಿಂದೆಯೇ ತಿಳಿಸಿತ್ತು.
ಕಳೆದ ಡಿಸೆಂಬರ್ 30 ರಂದು ರಿಷಬ್ ಪಂತ್ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಎದುರು ರಸ್ತೆಯಲ್ಲಿ ಪಲ್ಟಿಯಾಗಿದ್ದ ಕಾರಿನಿಂದ ಅದೇಗೋ ಹೊರಬಂದು ಜೀವ ಉಳಿಸಿಕೊಂಡಿದ್ದ ಪಂತ್ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆರು ದಿನಗಳ ಕಾಲ ಚಿಕಿತ್ಸೆ ಪಡೆದ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನಿಂದ ಮುಂಬೈಗೆ ವಿಮಾನದ ಮೂಲಕ ಕರೆತರಲಾಗಿತ್ತು.
Rishabh Pant: ಬಿಟ್ಟೂ ಬಿಡದೆ ರಿಷಭ್ ಪಂತ್ ಹಿಂದೆ ಬಿದ್ದ ಊರ್ವಶಿ ರೌಟೇಲಾ; ನಟಿಗೆ ಛೀಮಾರಿ
ಯಶಸ್ವಿ ಶಸ್ತ್ರಚಿಕಿತ್ಸೆ
ಮಿಡ್ ಡೇ ವರದಿಯ ಪ್ರಕಾರ, ಅಪಘಾತದ ವೇಳೆ ಪಂತ್ ಅವರ ಬಲ ಮೊಣಕಾಲಿಗೆ ತೀವ್ರ ಬಿಟ್ಟಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಅವಶ್ಯಕವಾಗಿತ್ತು. ಹೀಗಾಗಿ ರಿಷಬ್ ಪಂತ್ ಅವರಿಗೆ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಈ ಆಸ್ಪತ್ರೆಯಲ್ಲಿ ಕ್ರೀಡಾ ಔಷಧ ಕೇಂದ್ರದ ಮುಖ್ಯಸ್ಥರಾಗಿರುವ ಡಾ.ದಿನ್ಶಾ ಪರ್ದಿವಾಲಾ ಅವರು ಪಂತ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವರದಿಯ ಪ್ರಕಾರ ಶುಕ್ರವಾರ ಬೆಳಗ್ಗೆ 10.30ಕ್ಕೆ ಶಸ್ತ್ರ ಚಿಕಿತ್ಸೆ ಆರಂಭಗೊಂಡಿದ್ದು, ಮೂರು ಗಂಟೆಗಳ ಕಾಲ ನಡೆದಿದೆ. ಬಿಸಿಸಿಐ ಆದೇಶದಿಂದಾಗಿ ವೈದ್ಯರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಶಸ್ತ್ರಚಿಕಿತ್ಸೆಗೆ ಮುನ್ನ ಕಳೆದ ಮೂರು ದಿನಗಳಲ್ಲಿ ಪಂತ್ಗೆ ಹಲವಾರು ತಪಾಸಣೆಗಳನ್ನು ಮಾಡಲಾಗಿತ್ತು. ಈಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಂತ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳು ಬೇಕಾಗಲಿದೆ ಎಂಬ ಸುದ್ದಿ ಇದೆ. ಬಿಸಿಸಿಐ ಈಗಾಗಲೇ ತಿಳಿಸಿದಂತೆ ಶಸ್ತ್ರಚಿಕಿತ್ಸೆಯ ನಂತರ ಪಂತ್ ಈಗ ಅವರದೇ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರಲಿದ್ದಾರೆ. ಹಾಗೆಯೇ ಪಂತ್ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಮಂಡಳಿಯೇ ಭರಿಸಲಿದೆ .
ಇನ್ನೂ ಕೆಲ ವಾ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ ಪಂತ್
ಅಸ್ಥಿರಜ್ಜು ಶಸ್ತ್ರಚಿಕಿತ್ಸೆಯ ನಂತರ ರಿಷಬ್ ಪಂತ್ ಅವರಿಗೆ ನಿಯಮಿತವಾಗಿ ಮೊಣಕಾಲು ವ್ಯಾಯಾಮ ಮತ್ತು ಫಿಸಿಯೋಥೆರಪಿ ಅಗತ್ಯವಿರುತ್ತದೆ ಎಂದು ಹಿರಿಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಅಖಿಲೇಶ್ ಟಿವಿ9 ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಡಾ.ಅಖಿಲೇಶ್, ಅಸ್ಥಿರಜ್ಜು ಶಸ್ತ್ರಚಿಕಿತ್ಸೆಯ ನಂತರ, ಯಾರಾದರೂ ಎದ್ದು ಕುಳಿತು ತಮ್ಮ ಕೆಲಸವನ್ನು ಸ್ವತಃ ತಾವೇ ಮಾಡಿಕೊಳ್ಳಲು ಆರರಿಂದ ಎಂಟು ವಾರಗಳವರೆಗೆ ತೆಗೆದುಕೊಳ್ಳುತ್ತದೆ. ಅಲ್ಲದೆ ಈ ಶಸ್ತ್ರಚಿಕಿತ್ಸೆಯ ನಂತರವೂ ಹಲವು ಬಾರಿ ಮೊಣಕಾಲು ನೋವು ಅಥವಾ ಸೋಂಕಿಗೆ ತುತ್ತಾಗುವ ಅಪಾಯವಿದೆ. ಈ ಕಾರಣಕ್ಕಾಗಿ, ಪಂತ್ ಇನ್ನೂ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಕಳೆಯಬೇಕಾಗುತ್ತದೆ ಎಂದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Sat, 7 January 23