
ಐಪಿಎಲ್ 2025 (IPL 2025) ರ ಲೀಗ್ ಹಂತದ 70 ನೇ ಮತ್ತು ಕೊನೆಯ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ, ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ (Rishabh Pant) ಅದ್ಭುತ ಪ್ರದರ್ಶನ ನೀಡಿ ಈ ಸೀಸನ್ನ ಮೊದಲ ಶತಕ ಬಾರಿಸಿದರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಎರಡನೇ ಶತಕ ಸಿಡಿಸಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಲ್ಲದೆ, ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು. ಇಡೀ ಸೀಸನ್‌ನಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ರಿಷಬ್ ಪಂತ್ ಆರ್‌ಸಿಬಿ ವಿರುದ್ಧ ಲೀಲಾ ಜಾಲವಾಗಿ ಬ್ಯಾಟ್ ಬೀಸಿದರು. ಇತ್ತ ಕಳೆದೆರಡು ಪಂದ್ಯಗಳಿಂದ ಅತ್ಯಂತ ಕೆಟ್ಟದಾಗಿ ಬೌಲಿಂಗ್ ಮಾಡುತ್ತಿರುವ ಆರ್‌ಸಿಬಿ ಬೌಲರ್ಗಳು ರಿಷಬ್ ಪಂತ್ ಫಾರ್ಮ್ ಕಂಡುಕೊಳ್ಳಲು ಸಹಾಯ ಮಾಡಿದರು.
ಪಂದ್ಯದಲ್ಲಿ, ಆರ್‌ಸಿಬಿ ನಾಯಕ ಜಿತೇಶ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಎಲ್‌ಎಸ್‌ಜಿ ಉತ್ತಮ ಆರಂಭ ಪಡೆಯಿತು. ಮೂರನೇ ಕ್ರಮಾಂಕದಲ್ಲಿ ಬಂದ ರಿಷಬ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ಮಿಚೆಲ್ ಮಾರ್ಷ್ ಅವರೊಂದಿಗೆ ಎರಡನೇ ವಿಕೆಟ್‌ಗೆ 150 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದು ಎಲ್‌ಎಸ್‌ಜಿಯನ್ನು ಬೃಹತ್ ಸ್ಕೋರ್‌ನತ್ತ ಕೊಂಡೊಯ್ದಿತು. ಇಡೀ ಸೀಸನ್‌ನಲ್ಲಿ ಇಲ್ಲದ ಶಾಟ್ ಆಡಲು ಹೋಗಿ ವಿಕೆಟ್ ಒಪ್ಪಿಸುತ್ತಿದ್ದ ಪಂತ್, ಈ ಪಂದ್ಯದಲ್ಲಿ ಭಿನ್ನವಿಭಿನ್ನವಾದ ಶಾಟ್ಗಳನ್ನು ಆಡುವಲ್ಲಿ ಯಶಸ್ವಿಯಾದರು. ಆರ್‌ಸಿಬಿ ಬೌಲರ್ಗಳ ಕಳಪೆ ಬೌಲಿಂಗ್ನ ಲಾಭ ಪಡೆದ ಪಂತ್ ಕೇವಲ 54 ಎಸೆತಗಳಲ್ಲಿ ಶತಕ ಪೂರೈಸಿದರು.
ಇದರೊಂದಿಗೆ, ಅವರು ಐಪಿಎಲ್‌ನಲ್ಲಿ ಶತಕ ಗಳಿಸಿದ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸನ್‌ರೈಸರ್ಸ್ ಹೈದರಾಬಾದ್‌ನ ಹೆನ್ರಿಕ್ ಕ್ಲಾಸೆನ್ ಹೆಸರಿನಲ್ಲಿತ್ತು. ಈ ವರ್ಷ 23 ಕೋಟಿ ರೂ.ಗೆ ಎಸ್‌ಆರ್‌ಎಚ್ ತಂಡದಲ್ಲೇ ಉಳಿದಿದ್ದ ಕ್ಲಾಸೆನ್ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಈಗ ಈ ದಾಖಲೆ ಈ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ರಿಷಭ್ ಪಂತ್ ಪಾಲಾಗಿದೆ. ಅದೇ ಸಮಯದಲ್ಲಿ, ಪಂತ್ ತಮ್ಮ ಮೊದಲ ಐಪಿಎಲ್ ಶತಕವನ್ನು 2018 ರಲ್ಲಿ ಬಾರಿಸಿದ್ದರು. ಅಂದರೆ 7 ವರ್ಷಗಳ ನಂತರ ಐಪಿಎಲ್‌ನಲ್ಲಿ ಶತಕ ಗಳಿಸಿದ್ದಾರೆ.
IPL 2025: ಹೇಜಲ್‌ವುಡ್ ಕೊನೆಯ ಲೀಗ್ ಪಂದ್ಯವನ್ನು ಆಡದಂತೆ ತಡೆದ ಕ್ರಿಕೆಟ್ ಆಸ್ಟ್ರೇಲಿಯಾ..!
ಈ ಶತಕ ಪಂತ್‌ಗೆ ಬಹಳ ವಿಶೇಷವಾಗಿತ್ತು, ಏಕೆಂದರೆ ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೂ ಮೊದಲು ಆಡಿದ 12 ಇನ್ನಿಂಗ್ಸ್‌ಗಳಲ್ಲಿ ಕೇವಲ 151 ರನ್ ಗಳಿಸಿದ್ದ ಪಂತ್, 13.73 ರ ಸರಾಸರಿ ಮತ್ತು 107.09 ರ ಸ್ಟ್ರೈಕ್ ರೇಟ್ ಹೊಂದಿದ್ದರು, ಇದು ಅವರನ್ನು ಒತ್ತಡಕ್ಕೆ ತಳ್ಳಿತ್ತು. ಹೀಗಾಗಿ ಅಭಿಮಾನಿಗಳು ಮತ್ತು ಅನುಭವಿಗಳು ಪಂತ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ವಿಶೇಷವಾಗಿ ಈ ಸೀಸನ್‌ನಲ್ಲಿ 27 ಕೋಟಿ ರೂ ಪಡೆದು ಅತ್ಯಂತ ದುಬಾರಿ ಆಟಗಾರನಾಗಿದ್ದ ಪಂತ್ ಅವರ ಪ್ರತಿ ಇನ್ನಿಂಗ್ಸ್ ಮೇಲೆ ಕಣ್ಣಿಟ್ಟಿದ್ದರು. ಆದರೆ ಈ ಪಂದ್ಯದಲ್ಲಿ, ಪಂತ್ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದು, ಈ ಲೀಗ್‌ನ ಪ್ರಮುಖ ಆಟಗಾರರಲ್ಲಿ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Tue, 27 May 25