
ಲೆಜೆಂಡ್ಸ್ ಪ್ರೊ ಟಿ20 ಲೀಗ್ ತನ್ನ ಮೊದಲ ಸೀಸನ್‌ನಲ್ಲಿ ಕ್ರಿಸ್ ಗೇಲ್, ಜಾಕ್ಸ್ ಕಾಲಿಸ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ಸ್ಟುವರ್ಟ್ ಬಿನ್ನಿ ಸೇರಿದಂತೆ ಹಲವು ಕ್ರಿಕೆಟ್ ತಾರೆಯಾರನ್ನು ಒಂದುಗೂಡಿಸುತ್ತಿದೆ. ವರ್ಷಗಳ ಕಾಲ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದವರು, ಪೈಪೋಟಿ ನಡೆಸಿದ್ದವರು, ಅನೇಕ ನೆನಪುಗಳನ್ನು ನಿರ್ಮಿಸಿದ್ದವರು ಈ ಬಾರಿ ಎಲ್ಲರೂ ಒಂದೇ ವೇದಿಕೆಯಲ್ಲಿ ಪುನರ್ಮಿಲನಗೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ರಿಸ್ ಗೇಲ್, “ನನ್ನ ಅತ್ಯುತ್ತಮ ಕ್ರಿಕೆಟ್ ದಿನಗಳು ಮತ್ತೆ ನೆನಪಾಗುತ್ತಿವೆ. ಕಾಲಿಸ್ ವಿರುದ್ಧ ಆಡಿದಾಗ ಅವರನ್ನು ಮೀರಿಸುವುದು ಅಸಾಧ್ಯ ಎನಿಸುತ್ತಿತ್ತು. ಉತ್ತಪ್ಪ ಜೊತೆ ಬ್ಯಾಟಿಂಗ್ ಬಗ್ಗೆ ಅನೇಕ ಸಲ ಮಾತುಕತೆ ನಡೆಸಿದ್ದೇನೆ, ರಾಯುಡು ಜೊತೆ ತುಂಬಾ ತಮಾಷೆ ಮಾಡಿಕೊಂಡಿದ್ದೇನೆ. ಈಗ ಧವನ್, ವಾಟ್ಸನ್ ಜೊತೆ ಮತ್ತೆ ಆಡಲು ಈ ಲೆಜೆಂಡ್ಸ್ ಪ್ರೊ T20 ಲೀಗ್ ಅವಕಾಶ ನೀಡುತ್ತಿದೆ,” ಎಂದರು.
ಇನ್ನು ಜಾಕ್ಸ್ ಕಾಲಿಸ್, ಕ್ರಿಕೆಟ್‌ನಿಂದ ಸ್ವಲ್ಪ ದೂರವಾದ ಮೇಲೆ ಕೈಯಲ್ಲಿ ಬ್ಯಾಟ್ ಹಿಡಿಯುವ ಅನುಭವ ನನಗೆ ಬಹಳ ಮಿಸ್ ಆಗುತ್ತಿತ್ತು. ಈಗ ಈ ಲೀಗ್ ಮೂಲಕ ಪುನಃ ಬ್ಯಾಟ್ ಬೀಸುವುದು, ಬಾಲ್ ಹೊಡೆಯುವುದು, ಟೈಮಿಂಗ್ ಹುಡುಕುವುದು ಮತ್ತೆ ಆಟಗಾರನಂತೆ ಭಾಸವಾಗುವುದು ಇವೆಲ್ಲವೂ ಮರಳಿ ಬರುವುದಕ್ಕೆ ಸಂತಸವಾಗಿದೆ ಎಂದರು.
ನಾನು ರಾಯುಡು ಅವರನ್ನು ಎದುರಾಳಿಯಾಗಿ ಎದುರಿಸಿದ್ದೇನೆ, ನಂತರ ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೇನೆ. ದಿನೇಶ್ ಕಾರ್ತಿಕ್ ಜೊತೆ ಪಂದ್ಯ ಮುಗಿಸುವ ತಂತ್ರಗಳ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೇವೆ. ಅಂಡರ್-19 ದಿನಗಳಿಂದ ಇರುವ ನಮ್ಮ ಸ್ನೇಹವೂ ವಿಶೇಷ ಎಂದು ರಾಬಿನ್ ಉತ್ತಪ್ಪ ಹಳೆಯ ನೆನಪುಗಳನ್ನು ಸ್ಮರಿಸಿಕೊಂಡರು.
ಇನ್ನು ಹೊಸ ಲೀಗ್ ಬಗ್ಗೆ ಮಾತನಾಡಿದ ಅಂಬಟಿ ರಾಯುಡು, ಒಟ್ಟಿಗೆ ಪಂದ್ಯಗಳನ್ನು ಆಡಿದ್ದ, ಟ್ರೋಫಿ ಗೆದ್ದಿದ್ದ ಆಟಗಾರರನ್ನು ಮತ್ತೆ ನೋಡಿದಾಗ ಹಳೆಯ ದಿನಗಳು ಕಣ್ಣ ಮುಂದೆ ಬರುತ್ತವೆ. ಬಿನ್ನಿ ಜೊತೆಗಿನ ಆಟ, ಗೇಲ್ ವಿರುದ್ಧ ಮರೆಯಲಾಗದ ಪಂದ್ಯಗಳು, ವಾಟ್ಸನ್ ಜೊತೆಗಿನ ಕ್ಷಣಗಳು ತುಂಬಾ ವಿಶೇಷ. ಈ ಲೀಗ್ ಇವೆಲ್ಲವನ್ನೂ ಮತ್ತೆ ನೀಡುತ್ತಿರುವುದು ತುಂಬಾ ಸಂತೋಷ ಎಂದರು.
ಇದನ್ನೂ ಓದಿ: ವಿಶ್ವಕಪ್ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಭಾರತೀಯ ಮೂಲದ ಇಬ್ಬರಿಗೆ ಸ್ಥಾನ
ನನಗೆ ಕ್ರಿಕೆಟ್ ಮಾತ್ರವಲ್ಲ, ಈ ತಂಡವೂ ರೋಮಾಂಚನಕಾರಿಯಾಗಿದೆ. ನಾವು ಪ್ರಪಂಚದಾದ್ಯಂತ ಆಡಿದ್ದೇವೆ, ಸ್ಕೋರ್‌ಕಾರ್ಡ್ ಮೀರಿದ ಅನೇಕ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಅವನ್ನೆಲ್ಲ ಮತ್ತೆ ಅನುಭವಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷ ಎಂದು ಸ್ಟುವರ್ಟ್ ಬಿನ್ನಿ ಹೇಳಿದರು.