IND vs AUS: ‘ಈ ಇಬ್ಬರನ್ನು ತಂಡದಿಂದ ಹೊರಗಿಟ್ಟ ನಿರ್ಧಾರ ಸರಿಯಾಗಿತ್ತು’; ರೋಹಿತ್ ಶರ್ಮಾ

Rohit Sharma: ಪರ್ತ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ ತಂಡದಿಂದ ಹೊರಗಿಡುವ ಬಗ್ಗೆ ರೋಹಿತ್ ಶರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ವಾಷಿಂಗ್ಟನ್ ಸುಂದರ್ ಅವರನ್ನು ರೋಹಿತ್ ಶ್ಲಾಘಿಸಿದ್ದಾರೆ.

IND vs AUS: ‘ಈ ಇಬ್ಬರನ್ನು ತಂಡದಿಂದ ಹೊರಗಿಟ್ಟ ನಿರ್ಧಾರ ಸರಿಯಾಗಿತ್ತು’; ರೋಹಿತ್ ಶರ್ಮಾ
ರೋಹಿತ್ ಶರ್ಮಾ

Updated on: Dec 05, 2024 | 6:13 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6 ರಿಂದ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿರಲಿದೆ. ರೋಹಿತ್ ಈ ಸರಣಿಯ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೀಗ ಎರಡನೇ ಟೆಸ್ಟ್​ಗೆ ರೋಹಿತ್ ತಂಡವನ್ನು ಸೇರಿಕೊಂಡಿದ್ದು, ಇಂಜುರಿಯಿಂದ ಮೊದಲ ಟೆಸ್ಟ್​ಗೆ ಅಲಭ್ಯರಾಗಿದ್ದ ಶುಭ್​ಮನ್ ಗಿಲ್ ಕೂಡ ಎರಡನೇ ಟೆಸ್ಟ್​ಗೆ ಲಭ್ಯರಾಗಿದ್ದಾರೆ. ಹೀಗಾಗಿ ಈ ಇಬ್ಬರ ವಾಪಸ್ಸಾತಿಯ ಬಳಿಕ ತಂಡದಲ್ಲಿ ಕೆಲ ಬದಲಾವಣೆಗಳು ಆಗುವುದು ನಿಶ್ಚಿತ. ಆದರೆ ಅದಕ್ಕೂ ಮುನ್ನ ಅಡಿಲೇಡ್ ಟೆಸ್ಟ್‌ಗೆ ಒಂದು ದಿನ ಮೊದಲು ರೋಹಿತ್ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಅವರು ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಇದು ಸರಿಯಾದ ನಿರ್ಧಾರವಾಗಿತ್ತು

ವಾಸ್ತವವಾಗಿ ಭಾರತ ಹಾಗೂ ಆಸೀಸ್ ನಡುವೆ ನಡೆದ ಮೊದಲ ಪರ್ತ್ ಟೆಸ್ಟ್‌ನಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರವೀಂದ್ರ ಜಡೇಜಾ-ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿತ್ತು. ಇದರ ಜೊತೆಗೆ ಹರ್ಷಿತ್ ರಾಣಾ ಮತ್ತು ನಿತೀಶ್ ರೆಡ್ಡಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿತ್ತು. ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರ ಸರಿ ಎಂದು ಸಾಬೀತಾಗಿದ್ದು, ತಂಡವೂ ಪಂದ್ಯವನ್ನು ಗೆದ್ದುಕೊಂಡಿತು. ಇದೀಗ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರದ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಬೆಂಬಲಿಸಿದ್ದು, ಇದು ಸರಿಯಾದ ನಿರ್ಧಾರವಾಗಿತ್ತು ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೋಹಿತ್ ಹೇಳಿದ್ದೇನು?

ಎರಡನೇ ಟೆಸ್ಟ್‌ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ‘ದುರದೃಷ್ಟವಶಾತ್ ಜಡೇಜಾ ಹಾಗೂ ಅಶ್ವಿನ್ ಮೊದಲ ಪಂದ್ಯ ಆಡುತ್ತಿಲ್ಲ ಎಂಬ ಸುದ್ದಿ ನೀಡಲು ನಾನು ಅಲ್ಲಿ ಇರಲಿಲ್ಲ. ಜಡೇಜಾ ಮತ್ತು ಅಶ್ವಿನ್ ಅವರಂತಹ ಅನುಭವಿ ಆಟಗಾರರನ್ನು ಹೊರಗಿಡುವುದು ಯಾವಾಗಲೂ ಕಷ್ಟ, ಅದು ಎಂದಿಗೂ ಸುಲಭವಲ್ಲ. ಆದರೆ ಆ ಸಮಯದಲ್ಲಿ ತಂಡಕ್ಕೆ ಯಾವುದು ಉತ್ತಮ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಸರಣಿಯ ಉಳಿದ ಪಂದ್ಯಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ರೋಹಿತ್ ಹೇಳಿದ್ದಾರೆ.

ಸುಂದರ್​ರನ್ನು ಹೊಗಳಿದ ರೋಹಿತ್

ಇನ್ನು ಮೊದಲ ಟೆಸ್ಟ್​ನಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ ವಾಷಿಂಗ್ಟನ್ ಸುಂದರ್ ಅವರನ್ನು ಹೊಗಳಿದ ರೋಹಿತ್ ಶರ್ಮಾ, ‘ವಾಷಿಂಗ್ಟನ್‌ಗೆ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಉತ್ತಮ ಆಲ್ ರೌಂಡರ್. ಚೆಂಡು ಮತ್ತು ಬ್ಯಾಟಿಂಗ್‌ನಲ್ಲಿ ಅವರು ಏನು ಮಾಡಬಹುದು ಎಂಬುದನ್ನು ನಾವು ನೋಡಿದ್ದೇವೆ. ಅವರು ವಿಶ್ವದ ಎಲ್ಲಿಯಾದರೂ ಆಡುವ ತಂತ್ರವನ್ನು ಹೊಂದಿದ್ದಾರೆ. ಅವರಂತಹ ಆಟಗಾರ ಯಾವಾಗಲೂ ನಮ್ಮ ತಂಡಕ್ಕೆ ಮುಖ್ಯವಾಗಿದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Thu, 5 December 24