- Kannada News Photo gallery Cricket photos Bhuvneshwar Kumar's Hat-trick: Syed Mushtaq Ali Trophy Stunner
ಚೊಚ್ಚಲ ಹ್ಯಾಟ್ರಿಕ್ ವಿಕೆಟ್..! ಆರ್‌ಸಿಬಿ ಸೇರಿದ ತಕ್ಷಣ ಫಾರ್ಮ್‌ಗೆ ಮರಳಿದ ಭುವನೇಶ್ವರ್ ಕುಮಾರ್
Bhuvneshwar Kumar's Hat-trick: ಭಾರತ ತಂಡದಿಂದ ಹೊರಗಿರುವ ಭುವನೇಶ್ವರ್ ಕುಮಾರ್, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಚಲನ ಮೂಡಿಸಿದ್ದಾರೆ. ಇದು ಅವರ ಟಿ20 ಕ್ರಿಕೆಟ್‌ನ ಮೊದಲ ಹ್ಯಾಟ್ರಿಕ್. ಈ ಸಾಧನೆಯು ಆರ್‌ಸಿಬಿ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದು, ಭುವಿ ಟೀಂ ಇಂಡಿಯಾಗೆ ಮರಳುವ ಸಾಧ್ಯತೆಗಳನ್ನೂ ಹೆಚ್ಚಿಸಿದೆ.
Updated on: Dec 05, 2024 | 4:42 PM

ಟೀಂ ಇಂಡಿಯಾದಿಂದ ಹೊರಗುಳಿದಿರುವ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅದ್ಭುತ ಸಾಧನೆ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಡೆದ ಐಪಿಎಲ್ ಹರಾಜಿನ ವೇಳೆ ಭಾರೀ ಬೆಲೆಗೆ ಮಾರಾಟವಾಗಿದ್ದ ಭುವಿ ಇದೀಗ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಭಾರತ ತಂಡದಿಂದ ಹೊರಗಿರುವ ಕಾರಣ ಭುವನೇಶ್ವರ್ ಕುಮಾರ್ ಅವರ ಈ ಸಾಧನೆ ಇನ್ನಷ್ಟು ವಿಶೇಷವಾಗಿದೆ. ಇದು ಟಿ20 ಕ್ರಿಕೆಟ್‌ನಲ್ಲಿ ಭುವಿಯ ಮೊದಲ ಹ್ಯಾಟ್ರಿಕ್ ಆಗಿದೆ. ಈ ಹ್ಯಾಟ್ರಿಕ್‌ನೊಂದಿಗೆ, ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳುವ ಸಿಗ್ನಲ್ ನೀಡಿರುವುದರ ಜೊತೆಗೆ ಆರ್‌ಸಿಬಿ ಅಭಿಮಾನಿಗಳ ಕಪ್ ಬಯಕೆಗೆ ಮತ್ತಷ್ಟು ಬಲ ತುಂಬಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ಪರ ಆಡುತ್ತಿರುವ ಭುವನೇಶ್ವರ್ ಕುಮಾರ್ ಅವರು ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. 17ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಈ ಸಾಧನೆ ಮಾಡಿದರು. ಭುವನೇಶ್ವರ್ ಕುಮಾರ್ ಈ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಬಳಿಸಿದರು.

ಪಂದ್ಯದ 17ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಮಾಡಲು ಬರುವ ವೇಳೆಗೆ ಜಾರ್ಖಂಡ್ ತಂಡ 116 ರನ್ ಗಳಿಸಿತ್ತು. ಓವರ್‌ನ ಮೊದಲ ಎಸೆತದಲ್ಲಿ 11 ರನ್ ಗಳಿಸಿದ್ದ ರಾಬಿನ್ ಮಿಂಜ್ ಅವರನ್ನು ಔಟ್ ಮಾಡಿದ ಭುವಿ ಅದೇ ಓವರ್‌ನ ಎರಡನೇ ಎಸೆತದಲ್ಲಿ ಬಾಲಕೃಷ್ಣ ಅವರನ್ನು ಔಟ್ ಮಾಡಿದರು. ಇದಾದ ಬಳಿಕ ಮೂರನೇ ಎಸೆತದಲ್ಲಿ ವಿವೇಕಾನಂದ ತಿವಾರಿ ಅವರನ್ನು ಔಟ್ ಮಾಡಿದರು.

ವಾಸ್ತವವಾಗಿ ಭುವಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿರುವುದು ಆರ್‌ಸಿಬಿಗೆ ಆನೆಬಲ ತಂದಿದೆ. ಏಕೆಂದರೆ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂಪಾಯಿ ಬೆಲೆ ನೀಡಿ ಭುವನೇಶ್ವರ್ ಕುಮಾರ್ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದು ಐಪಿಎಲ್ ಇತಿಹಾಸದಲ್ಲಿ ಭುವನೇಶ್ವರ್ ಅವರ ಅತಿದೊಡ್ಡ ಸಂಭಾವನೆಯಾಗಿದೆ.

ಈ ಹಿಂದೆ ಅವರು ಹೈದರಾಬಾದ್‌ನಲ್ಲಿ 4.2 ಕೋಟಿ ರೂ. ವೇತನ ಪಡೆಯುತ್ತಿದ್ದರು. ಆರ್‌ಸಿಬಿಗೆ ಸೇರಿದ ತಕ್ಷಣ ಭುವನೇಶ್ವರ್ ತಮ್ಮ ಹಳೆಯ ಲಯದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇದುವರೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 7 ಪಂದ್ಯಗಳನ್ನಾಡಿರುವ ಭುವಿ 9 ವಿಕೆಟ್ ಪಡೆದಿದ್ದಾರೆ.



















