
ಬೆಂಗಳೂರು (ಜು. 10): ಎಡ್ಜ್‌ಬಾಸ್ಟನ್‌ನಲ್ಲಿ ದೊಡ್ಡ ಜಯ ಸಾಧಿಸಿದ ನಂತರ, ಟೀಮ್ ಇಂಡಿಯಾ (Indian Cricket Team) ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಸದ್ಯ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಶಯವನ್ನು ಹೊಂದಿದೆ. ಇದೆಲ್ಲದರ ನಡುವೆ, ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಇಂಗ್ಲೆಂಡ್ ತಲುಪಿದ್ದಾರೆ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ರೋಹಿತ್ ದಿಢೀರ್ ಇಂಗ್ಲೆಂಡ್ ತಲುಪಿದ್ದು ಏಕೆ ಎಂಬ ಪ್ರಶ್ನೆ ಉದ್ಬವಿಸಿದೆ.
ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಮೂರನೇ ಪಂದ್ಯ ಗುರುವಾರ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಆರಂಭವಾಗಿದೆ. ಎಲ್ಲರ ಕಣ್ಣುಗಳು ಮೈದಾನದತ್ತ ಇರುವಾಗ, ಇದ್ದಕ್ಕಿದ್ದಂತೆ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿತು. ಈ ಫೋಟೋ ಟೀಮ್ ಇಂಡಿಯಾದ ಮಾಜಿ ಟೆಸ್ಟ್ ನಾಯಕ ರೋಹಿತ್ ಶರ್ಮಾ ಅವರದ್ದಾಗಿದ್ದು, ಬಾಲಿವುಡ್ ತಾರೆ ಬಾಬಿ ಡಿಯೋಲ್ ಕೂಡ ಅವರೊಂದಿಗೆ ಇದ್ದರು. ಈ ಫೋಟೋವನ್ನು ಸ್ವತಃ ಬಾಬಿ ಡಿಯೋಲ್ ಪೋಸ್ಟ್ ಮಾಡಿದ್ದಾರೆ ಮತ್ತು ಲಂಡನ್‌ನಲ್ಲಿ ಟೀಮ್ ಇಂಡಿಯಾವನ್ನು ಬೆಂಬಲಿಸುತ್ತಿರುವುದಾಗಿಯೂ ಬರೆದಿದ್ದಾರೆ.
ರೋಹಿತ್ ಶರ್ಮಾ ಮೇ 7 ರಂದು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಅಂದಿನಿಂದ ಅವರು ಮೈದಾನಕ್ಕೆ ಹಿಂತಿರುಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ರೋಹಿತ್ ಶರ್ಮಾ ಪ್ರಸ್ತುತ ರಜಾದಿನಗಳನ್ನು ಆನಂದಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಹಿಟ್‌ಮ್ಯಾನ್ ತನ್ನ ಕುಟುಂಬದೊಂದಿಗೆ ಯುರೋಪ್‌ನಲ್ಲಿ ರಜಾದಿನಗಳನ್ನು ಆನಂದಿಸುತ್ತಿದ್ದರು. ಇದೀಗ ಅವರು ಅಲ್ಲಿಂದ ಇದ್ದಕ್ಕಿದ್ದಂತೆ ಇಂಗ್ಲೆಂಡ್ ತಲುಪಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ರೋಹಿತ್ ಲಾರ್ಡ್ಸ್ ಮೈದಾನಕ್ಕೆ ಬರುತ್ತಾರೊ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಲಾರ್ಡ್ಸ್ ಟೆಸ್ಟ್ ಹೊರತುಪಡಿಸಿ, ಈ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಕೂಡ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ರೋಹಿತ್ ಈ ಪಂದ್ಯಾವಳಿಯ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಭಾಗವಹಿಸಬಹುದು. ಈಗಾಗಲೇ ವಿಂಬಲ್ಡನ್ನಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಸೂರ್ಯ ಕುಮಾರ್ ಯಾದವ್ ಹಾಗೂ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ.
IND VS ENG: ಲಾರ್ಡ್ಸ್‌ನಲ್ಲಿ ಹೆಚ್ಚು ಕಹಿಯನ್ನೇ ಉಂಡಿರುವ ಭಾರತ: ಈ ಬಾರಿ ಕಥೆ ಬದಲಾಗುತ್ತಾ?
ಇನ್ನು ಸದ್ಯ ಸಾಗುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಇದರಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲ ಗಂಟೆ, ಆರಂಭಿಕರು ಕ್ಯಾಪ್ಟನ್ ನಿರ್ಧಾರವನ್ನು ಸಮರ್ಥಿಸಿ ಆಡಿದರು. ಆದರೆ ನಂತರ ನಿತೀಶ್ ಕುಮಾರ್ ರೆಡ್ಡಿ ಕೇವಲ ಒಂದು ಓವರ್‌ನಲ್ಲಿ ಬಂದು ಪಂದ್ಯವನ್ನು ತಿರುಗಿಸಿದರು.
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನ 14 ನೇ ಓವರ್ ಅನ್ನು ನಿತೀಶ್ ಕುಮಾರ್ ರೆಡ್ಡಿ ಬೌಲ್ ಮಾಡಿದರು. ಈ ಓವರ್‌ನ ಮೂರನೇ ಎಸೆತದಲ್ಲಿ ಅವರು ಶಾರ್ಟ್ ಬಾಲ್ ಎಸೆದರು. ಬೆನ್ ಡಕೆಟ್ ಈ ಚೆಂಡಿನ ಮೇಲೆ ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಚೆಂಡು ಅವರ ಗ್ಲೌಸ್‌ನ ಅಂಚನ್ನು ತೆಗೆದುಕೊಂಡು ನೇರವಾಗಿ ಹಿಂದೆ ನಿಂತಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಸೇರಿ ಔಟ್ ಆದರು. ಇದಾದ ನಂತರ ಕೇವಲ ಎರಡು ಎಸೆತಗಳಲ್ಲಿ ಎರಡನೇ ಆರಂಭಿಕ ಬ್ಯಾಟ್ಸ್‌ಮನ್ ಜ್ಯಾಕ್ ಕ್ರೌಲಿಯನ್ನು ಕೂಡ ಔಟ್ ಮಾಡಿದರು. ಈ ಮೂಲಕ ಆಂಗ್ಲರಿಗೆ ಆರಂಭಿಕ ಆಘಾತ ಉಂಟಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Thu, 10 July 25