ದೇವದತ್ ಪಡಿಕ್ಕಲ್ಗೆ ಕೇವಲ 2.6 ಲಕ್ಷ ರೂ..!
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟಕ್ಕೇರುಲ್ಲಿ ಪ್ರಮುಖ ಪಾತ್ರವಹಿಸಿದ್ದ ದೇವದತ್ ಪಡಿಕ್ಕಲ್ ಇದೀಗ ರಾಜ್ಯದ ಟಿ20 ಲೀಗ್ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆದರೆ ಈ ಟೂರ್ನಿಗಾಗಿ ನಡೆದ ಹರಾಜಿನಲ್ಲಿ ಅವರು ಕಡಿಮೆ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ‘ಇಂಡಿಯನ್ ಪ್ರೀಮಿಯರ್ ಲೀಗ್’ (IPL) ಮುಕ್ತಾಯದ ಬೆನ್ನಲ್ಲೇ, ಕರ್ನಾಟಕದಲ್ಲಿ ‘ಮಹಾರಾಜ ಟ್ರೋಫಿ ಟಿ20’ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ 6 ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಮಾರಾಟವಾಗಿದ್ದು ಕೇವಲ 2.6 ಲಕ್ಷ ರೂ.ಗೆ ಎಂದರೆ ನಂಬಲೇಬೇಕು!
ಮಹಾರಾಜ ಟ್ರೋಫಿ ಟಿ20 ಟೂರ್ನಿಯ ನಿಯಮಗಳ ಪ್ರಕಾರ, ಭಾರತ ತಂಡವನ್ನು ಅಥವಾ ಐಪಿಎಲ್ (IPL) ಪ್ರತಿನಿಧಿಸಿರುವ ಸ್ಟಾರ್ ಆಟಗಾರರನ್ನು ‘ಪೂಲ್ ಎ’ (Pool A) ವಿಭಾಗದಲ್ಲಿ ಸೇರಿಸಲಾಗಿತ್ತು. ಈ ವಿಭಾಗದ ಎಲ್ಲಾ ಆಟಗಾರರ ಕನಿಷ್ಠ ಮೂಲ ಬೆಲೆಯನ್ನು 2 ಲಕ್ಷ ರೂ. ಎಂದು ನಿಗದಿಪಡಿಸಲಾಗಿತ್ತು.
ಅದರಂತೆ 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಮಾರಾಟವಾಗಿದ್ದು ಕೇವಲ 2.6 ಲಕ್ಷಕ್ಕೆ. ಇದರ ಬೆನ್ನಲ್ಲೇ ಇಷ್ಟೊಂದು ಕಡಿಮೆ ಮೊತ್ತಕ್ಕೆ ಬಿಡ್ ಆಗಲು ಕಾರಣವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…
ಟೀಮ್ ಇಂಡಿಯಾ ಆಟಗಾರ:
2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ದೇವದತ್ಬ ಪಡಿಕ್ಕಲ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ 2.6 ಲಕ್ಷ ರೂ.ಗೆ ಖರೀದಿಸಿದ್ದರು. ಅಂದರೆ ಪಡಿಕ್ಕಲ್ ಅವರ ಖರೀದಿಗಾಗಿ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿಯೇ ತೋರಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಆಟಗಾರ.
ಅಂತರರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯಿಂದಾಗಿ ದೇವದತ್ ಪಡಿಕ್ಕಲ್ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬುದು ಫ್ರಾಂಚೈಸಿಗಳಿಗೆ ಮೊದಲೇ ತಿಳಿದಿತ್ತು. ಮುಂಬರುವ ಭಾರತ ತಂಡದ ಸರಣಿಗಳಲ್ಲಿ ಭಾಗವಹಿಸಬೇಕಿರುವುದರಿಂದ, ಅವರು ಎಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎಂಬ ಅನಿಶ್ಚಿತತೆ ಇತ್ತು. ಇದೇ ಕಾರಣಕ್ಕೆ ಹರಾಜಿನಲ್ಲಿ ಬೇರೆ ಯಾವುದೇ ತಂಡಗಳು ಇವರ ಮೇಲೆ ಭಾರಿ ಮೊತ್ತದ ಬಿಡ್ ಮಾಡಲು ಮುಂದಾಗಲಿಲ್ಲ.
ಪರಿಣಾಮವಾಗಿ, ಮೈಸೂರು ವಾರಿಯರ್ಸ್ ತಂಡವು ಕೇವಲ ತಲಾ 2.6 ಲಕ್ಷ ರೂ. ಮೂಲ ಬೆಲೆಗೆ ದೇವದತ್ ಪಡಿಕ್ಕಲ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ.
- 2025 ಮಹಾರಾಜ ಟಿ20 ಟೂರ್ನಿಯ ಹರಾಜಿನಲ್ಲಿ ದೇವದತ್ ಪಡಿಕ್ಕಲ್ ಬರೋಬ್ಬರಿ 13.20 ಲಕ್ಷ ರೂ.ಗೆ ಮಾರಾಟವಾಗಿದ್ದರು.
- ಕಳೆದ ಸೀಸನ್ನಲ್ಲಿ ದೇವದತ್ ಪಡಿಕ್ಕಲ್ ಹುಬ್ಬಳ್ಳಿ ಟೈಗರ್ಸ್ ಪರ ಕಣಕ್ಕಿಳಿದಿದ್ದರು.
- ಈ ಬಾರಿ ಮೈಸೂರು ವಾರಿಯರ್ಸ್ ಪರ ಆರ್ಸಿಬಿ ದಾಂಡಿಗ ಬ್ಯಾಟ್ ಬೀಸಲಿದ್ದಾರೆ.
ಇತ್ತ ಮಹಾರಾಜ ಟ್ರೋಫಿ ಸೀಸನ್-5 ಜೂನ್ 20 ರಿಂದ ಜುಲೈ 12, 2026 ರವರೆಗೆ ನಡೆಯಲಿದೆ. ಪಂದ್ಯಗಳು ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿವೆ. ಇದೇ ವೇಳೆ ದೇವದತ್ ಪಡಿಕ್ಕಲ್ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಗೆದ್ದರೂ ಸೋತರೂ ನೋ ಪ್ರಾಬ್ಲಮ್… ಯಾಕೆ ಗೊತ್ತಾ?
ಅಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರು ಆಯ್ಕೆಯಾದರೆ ಮಾತ್ರ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇಲ್ಲದಿದ್ದರೆ ಮೈಸೂರು ವಾರಿಯರ್ಸ್ ಪರ ಎಲ್ಲಾ ಮ್ಯಾಚ್ಗಳಲ್ಲೂ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.




