Rohit Sharma: ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು ರೋಹಿತ್ ಶರ್ಮಾ ತೆಗೆದುಕೊಂಡ 2 ನಿರ್ಧಾರ
India vs Pakistan, Asia Cup: ಏಷ್ಯಾಕಪ್ 2022 ರಲ್ಲಿ ಪಾಕಿಸ್ತಾನ ವಿರುದ್ಧದ ರೋಚಕ ಕಾದಾಟದಲ್ಲಿ ಭಾರತ ಗೆಲುವು ಸಾಧಿಸಲು ನಾಯಕ ರೋಹಿತ್ ಶರ್ಮಾ (Rohit Sharma) ತೆಗೆದುಕೊಂಡ ಈ ಎರಡು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾಕಪ್ನ (Asia Cup 2022) ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 5 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು. ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ 2022 ರ ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ಆಲ್ರೌಂಡ್ ಆಟ ಇಡೀ ಪಂದ್ಯದ ಪ್ರಮುಖ ಹೈಲೇಟ್ ಆಯಿತು. ಅದರಲ್ಲೂ ಕೊನೆಯ ಓವರ್ನಲ್ಲಿ ಸಿಕ್ಸ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದ್ದು ಅಮೋಘವಾಗಿತ್ತು. ಈ ರೋಚಕ ಕಾದಾಟದಲ್ಲಿ ಭಾರತ ಗೆಲುವು ಸಾಧಿಸಲು ನಾಯಕ ರೋಹಿತ್ ಶರ್ಮಾ (Rohit Sharma) ತೆಗೆದುಕೊಂಡ ಎರಡು ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.
ಮೊದಲನೆಯದಾಗಿ, ಹೆಚ್ಚು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವ ಸೂರ್ಯಕುಮಾರ್ ಯಾದವ್ ಈ ಬಾರಿ ಆ ಸ್ಥಾನದಲ್ಲಿ ಆಡಲಿಲ್ಲ. ಸೂರ್ಯ ಬದಲು 4ನೇ ಕ್ರಮಾಂಕದಲ್ಲಿ ರೋಹಿತ್ ಅವರು ರವೀಂದ್ರ ಜಡೇಜಾ ಅವರನ್ನು ಕಣಕ್ಕಿಳಿಸಿದರು. ಈ ನಿರ್ಧಾರ ಆರಂಭದಲ್ಲಿ ಅನೇಕರಿಗೆ ಅಚ್ಚರಿಯುಂಟು ಮಾಡಿದ್ದು ನಿಜ. ಆದರೆ, ತಂಡದ ರನ್ ಗತಿ ಹೆಚ್ಚಿಸುವಲ್ಲಿ ಜಡೇಜಾ ಮುಖ್ಯ ಪಾತ್ರವಹಿಸಿದರು. ರೋಹಿತ್, ರಾಹುಲ್ ಔಟಾದ ಬಳಿಕ ಕೊಂಚ ನೆಮ್ಮದಿಯಲ್ಲಿದ್ದ ಪಾಕಿಸ್ತಾನ ಬೌಲರ್ಗಳಿಗೆ ಜಡೇಜಾ ಊಹಿಸಲಾಗದ ರೀತಿಯಲ್ಲಿ ರನ್ ಕಲೆಹಾಕಿ ತಂಡಕ್ಕೆ ನೆರವಾಗಿ ಕೊನೆಯ ಓವರ್ ವರೆಗೂ ಆಡಿದರು.
ಹಾರ್ದಿಕ್ ಪಾಂಡ್ಯ ಜೊತೆಗೂಡಿ ಜಡೇಜಾ ಕೇವಲ 29 ಎಸೆತಗಳಲ್ಲಿ 52 ರನ್ಗಳ ಕಾಣಿಕೆ ನೀಡಿದರು. ಅಲ್ಲೆ ಭಾರತದ ಜಯ ಖಚಿತವಾಯಿತು. ಇವರ ವಿಕೆಟ್ಗೆ ಅನೇಕ ಬಾರಿ ಪಾಕ್ ಬೌಲರ್‌ಗಳು ಗಾಳ ಹಾಕಿದರೂ ಅದು ಫಲಸಿಗಲಿಲ್ಲ. 29 ಎಸೆತಗಳನ್ನು ಎದುರಿಸಿದ ಜಡ್ಡು ತಲಾ 2 ಫೋರ್, ಸಿಕ್ಸರ್ ಸಿಡಿಸಿ 35 ರನ್ ಗಳಿಸಿದರು.
ಇನ್ನು ರೋಹಿತ್ ಶರ್ಮಾ ತೆಗೆದುಕೊಂಡ ಎರಡನೇ ನಿರ್ಧಾರ ಬೌಲರ್ಗಳ ಮೇಲಿನ ನಂಬಿಕೆ. ಈ ಪಂದ್ಯದಲ್ಲಿ ಕ್ಯಾಪ್ಟನ್ ವೇಗಿಗಳನ್ನು ಅದ್ಭುತವಾಗಿ ಉಪಯೋಗಿಸಿಕೊಂಡರು. ಭುವನೇಶ್ವರ್ಗೆ ಪವರ್ ಪ್ಲೇಯಲ್ಲಿ ಎರಡು ಓವರ್ ಮಾತ್ರ ನೀಡಿ ನಂತರ ಡೆತ್ ಓವರ್ ಹಾಕಲೆಂದು ಆಯ್ಕೆ ಇಟ್ಟಿದ್ದರು. ದುಬಾರಿಯಾದ ಆವೇಶ್ ಖಾನ್ಗೆ ಕೇವಲ 2 ಓವರ್ ಅಷ್ಟೇ ನೀಡಿದರು. ಶಾರ್ಟ್ ಬಾಲ್ ಮೂಲಕ ಪರಿಣಾಮ ಬೀರಿದ ಹಾರ್ದಿಕ್ ಪಾಂಡ್ಯ ಮತ್ತು ಅರ್ಶ್ದೀಪ್ ಸಿಂಗ್ ಅವರನ್ನ ಕೂಡ ರೋಹಿತ್ ಚೆನ್ನಾಗಿ ಬಳಸಿಕೊಂಡರು.
ವಿಶೇಷ ಎಂದರೆ ಟಿ20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಭಾರತದ ವೇಗದ ಬೌಲರ್‌ಗಳು ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ್ದು ಇದೇ ಮೊದಲು. ಭಾರತ ತಂಡ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಇದರಲ್ಲಿ ಭುವಿ 4 ವಿಕೆಟ್, ಹಾರ್ದಿಕ್ 3, ಅರ್ಶ್ದೀಪ್ 2 ಹಾಗೂ ಆವೇಶ್ 1 ವಿಕೆಟ್ ಪಡೆದರು. ಯುಜ್ವೇಂದ್ರ ಚಹಲ್ 4 ಓವರ್ ಹಾಗೂ ಜಡೇಜಾ 2 ಓವರ್ ಬೌಲಿಂಗ್ ಮಾಡಿದರೂ ಒಂದು ವಿಕೆಟ್ ಸಿಗಲಿಲ್ಲ.
Published On - 1:55 pm, Mon, 29 August 22