ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ. ಏಕೆಂದರೆ ಶಮಿ ಇನ್ನೂ ಸಹ ಸಂಪೂರ್ಣ ಫಿಟ್ನೆಸ್ ಸಾಧಿಸಿಲ್ಲ. ಹೀಗಾಗಿ ಅವರ ಪುನರಾಗಮನ ಮತ್ತಷ್ಟು ವಿಳಂಬವಾಗಲಿದೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಕುರಿತಾದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯೊಂದಿಗೆ ಅವರು ಮುಂಬರುವ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆಸ್ಟ್ರೇಲಿಯಾ ಸರಣಿಗೆ ಶಮಿ ಅವರನ್ನು ಕರೆಯುವುದು ಕಷ್ಟಸಾಧ್ಯ. ಏಕೆಂದರೆ ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಇದೇ ಈಗ ಅವರಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಈ ಹಿಂದೆಯೇ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಬೇಕಿತ್ತು. ಆದರೆ ಮೊಣಕಾಲಿನಲ್ಲಿ ಕಾಣಿಸಿಕೊಂಡ ಊತದ ಪರಿಣಾಮ ಇದೀಗ ಮತ್ತೆ ಆರಂಭದಿಂದಲೇ ಅವರ ರಿಹ್ಯಾಬ್ ಶುರು ಮಾಡಬೇಕು. ಹೀಗಾಗಿ ಅವರ ಮರಳುವಿಕೆ ಮತ್ತಷ್ಟು ವಿಳಂಬವಾಗಬಹುದು ಎಂದು ಟೀಮ್ ಇಂಡಿಯಾ ನಾಯಕ ತಿಳಿಸಿದ್ದಾರೆ.
ನಾವೆಲ್ಲರೂ ಮೊಹಮ್ಮದ್ ಶಮಿ ಆದಷ್ಟು ಬೇಗ 100% ಫಿಟ್ ಆಗಲಿ ಎಂದು ಬಯಸುತ್ತಿದ್ದೇವೆ. ಆದರೆ ಸಂಪೂರ್ಣ ಫಿಟ್ನೆಸ್ ಸಾಧಿಸದೇ ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಇದೀಗ ಶಮಿ ಅವರ ಫಿಟ್ನೆಸ್ಗಾಗಿ ಫಿಸಿಯೋಗಳು, ತರಬೇತುದಾರರು, ವೈದ್ಯರು ಕೆಲ ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ.
ಇನ್ನು ಫಿಟ್ನೆಸ್ ಸಾಧಿಸಿದರೂ ಮೊಹಮ್ಮದ್ ಶಮಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಮುನ್ನ ಒಂದೆರಡು (ಅಭ್ಯಾಸ) ಪಂದ್ಯಗಳನ್ನಾಡಬೇಕಿದೆ. ಹೀಗಾಗಿ ಅವರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಮೊಹಮ್ಮದ್ ಶಮಿ ಭಾರತದ ಪರ 64 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ವೇಳೆ 27.71 ಸರಾಸರಿಯಲ್ಲಿ 229 ವಿಕೆಟ್ ಪಡೆದಿದ್ದಾರೆ. ಇದೀಗ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಅವರು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯಿಂದ ಹೊರಗುಳಿದರೆ, ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಬಹುದು.
ಏಕದಿನ ವಿಶ್ವಕಪ್ 2023 ರ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್ಗೆ ಗೇಟ್ ಪಾಸ್..!
ಇತ್ತೀಚೆಗಷ್ಟೇ ಬೌಲಿಂಗ್ ಅಭ್ಯಾಸ ಆರಂಭಿಸಿದ್ದ ಶಮಿಗೆ ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ಅವರು ಇದೀಗ ಮತ್ತೆ ಫಿಟ್ನೆಸ್ನತ್ತ ಹೆಚ್ಚಿನ ಒತ್ತು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿಯೇ ಅವರು ನವೆಂಬರ್ 22 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ.