IPL 2022: ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR) ವಿರುದ್ದ ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಈ ಪಂದ್ಯವು ಉಭಯ ತಂಡಗಳಿಗೂ ತುಂಬಾ ಮಹತ್ವದ ಪಂದ್ಯವಾಗಿದೆ. ಇತ್ತ ಸತತ ಎರಡು ಗೆಲುವು ದಾಖಲಿಸಿರುವ ಆರ್ಸಿಬಿ ತಂಡವು ಇಂದು ಕೂಡ ಗೆಲ್ಲುವ ಮೂಲಕ 4ನೇ ಬಾರಿಗೆ ಫೈನಲ್ ಪ್ರವೇಶಿಸುವ ಇರಾದೆಯಲ್ಲಿದೆ. ಅತ್ತ 2ನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಡುವ ತವಕದಲ್ಲಿದೆ ರಾಜಸ್ಥಾನ್ ರಾಯಲ್ಸ್. ಹೀಗಾಗಿ ಎರಡೂ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆಡಿದ ನಿರ್ಣಾಯಕ ಪಂದ್ಯದಲ್ಲಿ ಆರ್ಸಿಬಿ ಪರ ರಜತ್ ಪಾಟಿದಾರ್ ಅದ್ಭುತ ಶತಕ ಬಾರಿಸಿದರೆ, ದಿನೇಶ್ ಕಾರ್ತಿಕ್ ಫಿನಿಶರ್ ಆಗಿ ಮಿಂಚಿದ್ದರು. ಆದರೆ ಈ ವೇಳೆ ಡಿಕೆ ಮಾಡಿದ ತಪ್ಪಿನಿಂದಾಗಿ ಇದೀಗ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಪಂದ್ಯದ ಬ್ಯಾಟಿಂಗ್ ವೇಳೆ ದಿನೇಶ್ ಕಾರ್ತಿಕ್ ಬಳಸಿದ ಅಶ್ಲೀಲ ಪದವೊಂದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಇದನ್ನು ಮ್ಯಾಚ್ ರೆಫರಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಕಾರ್ತಿಕ್ ಆರ್ಟಿಕಲ್ 2.3 ರ ಹಂತ 1 ಅನ್ನು ಉಲ್ಲಂಘಿಸಿದ್ದು, ಈ ತಪ್ಪನ್ನು ಡಿಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಲೆವೆಲ್-1 ಅಪರಾಧಗಳಲ್ಲಿ ಮ್ಯಾಚ್ ರೆಫರಿಯ ತೀರ್ಮಾನವೇ ಅಂತಿಮವಾಗಿದ್ದು, ಹೀಗಾಗಿ ಕಾರ್ತಿಕ್ಗೆ ವಾಗ್ದಂಡನೆ ಶಿಕ್ಷೆ ನೀಡಲಾಗಿದೆ ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ದಿನೇಶ್ ಕಾರ್ತಿಕ್ ಅವರು ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಇದು ಮೊದಲ ಹಂತದ ನಿಯಮ ಉಲ್ಲಂಘನೆಯಾಗಿದ್ದು, ಹೀಗಾಗಿ ದಿನೇಶ್ ಕಾರ್ತಿಕ್ ಅವರಿಗೆ ಯಾವುದೇ ನಿಷೇಧ ಹೇರಲಾಗಿಲ್ಲ. ಅಷ್ಟೇ ಅಲ್ಲದೆ ಇಂದಿನ ಪಂದ್ಯದಿಂದ ಹೊರಗುಳಿಯುವಂತಿಲ್ಲ ಸೂಚಿಸಿಲ್ಲ. ಹಾಗಾಗಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್ -2 ಪಂದ್ಯದಲ್ಲಿ ಡಿಕೆ ಕಣಕ್ಕಿಳಿಯಲಿದ್ದಾರೆ.
ಆದರೆ ಇದೇ ತಪ್ಪು ಮುಂದಿನ ಪಂದ್ಯದಲ್ಲಿ ಮರುಕಳಿಸಿದರೆ ಡಿಮೆರಿಟ್ ಪಾಯಿಂಟ್ ನೀಡಿ ದಿನೇಶ್ ಕಾರ್ತಿಕ್ ಅವರನ್ನು ಕೆಲ ಪಂದ್ಯಗಳಿಗೆ ನಿಷೇಧಿಸಬಹುದು. ಹಾಗಾಗಿ ಇಂದಿನ ಪಂದ್ಯದಲ್ಲಿ ಯಾವುದೇ ತಪ್ಪುಗಳು ಆಗದಂತೆ ಎಚ್ಚರಿವಹಿಸಬೇಕಾಗುತ್ತದೆ. ಇನ್ನು ಈ ಬಾರಿ ದಿನೇಶ್ ಕಾರ್ತಿಕ್ ಭರ್ಜರಿ ಫಾರ್ಮ್ನಲ್ಲಿದ್ದು, RCB ಪರ ಫಿನಿಶರ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಇದುವರೆಗೆ 64.80 ರ ಸರಾಸರಿಯಲ್ಲಿ 324 ರನ್ ಗಳಿಸಿ ಆರ್ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.