
ಭಾರತ ಮತ್ತು ಪಾಕಿಸ್ತಾನ (India- Pakistan) ನಡುವಿನ ಸಂಬಂಧ ಹದಗೆಟ್ಟ ಕಾರಣದಿಂದಾಗಿ ಈ ಮೊದಲು ಈ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಐಸಿಸಿ (ICC) ಈವೆಂಟ್‌ಗಳು ಮತ್ತು ಏಷ್ಯಾಕಪ್‌ನಲ್ಲಿ (Asia Cup) ಮಾತ್ರ ಮುಖಾಮುಖಿಯಾಗುತ್ತಿದ್ದವು. ಇದನ್ನು ಹೊರತುಪಡಿಸಿ, ಎರಡೂ ದೇಶಗಳ ನಡುವೆ ಯಾವುದೇ ಸರಣಿಯನ್ನು ಆಡಲಾಗುತ್ತಿಲ್ಲ. ಇದರ ಜೊತೆಗೆ ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಿಂದಲೂ ನಿಷೇಧಿಸಲಾಗಿತ್ತು. ಇತ್ತೀಚೆಗೆ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವೆ ಎಲ್ಲಾ ರೀತಿಯ ಸಂಬಂಧ ಮುರಿದು ಬಿದ್ದಿದೆ. ಹೀಗಾಗಿ ಬಿಸಿಸಿಐ ಕೂಡ ಏಷ್ಯಾಕಪ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಐಸಿಸಿ ಈವೆಂಟ್ನಲ್ಲೂ ಎರಡು ತಂಡಗಳನ್ನು ಒಂದೇ ಗುಂಪಿನಲ್ಲಿ ಇರಿಸಬಾರದು ಎಂದು ಐಸಿಸಿ ಬಳಿ ಮನವಿ ಮಾಡಿದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಉಭಯ ದೇಶಗಳ ಆಟಗಾರರು ಒಂದೇ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇದೀಗ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ವಾಸ್ತವವಾಗಿ, ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಅಬ್ದುಲ್ಲಾ ಶಫೀಕ್ ಅವರನ್ನು ತಂಡಕ್ಕೆ ಸೇರಿಸಿಕೊಂರುವುದಾಗಿ ಘೋಷಿಸಿದೆ. 25 ವರ್ಷದ ಅಬ್ದುಲ್ಲಾ ಶಫೀಕ್ ಮುಂದಿನ ವಾರ ಇಂಗ್ಲೆಂಡ್‌ಗೆ ಆಗಮಿಸಲಿದ್ದು, ರೋಥೆಸೆ ಕೌಂಟಿ ಚಾಂಪಿಯನ್‌ಶಿಪ್‌ನ ಎರಡು ಪ್ರಮುಖ ಪಂದ್ಯಗಳಿಗೆ ಲಭ್ಯವಿರಲಿದ್ದಾರೆ. ಇದಲ್ಲದೆ, ಅವರು ಟಿ20 ಬ್ಲಾಸ್ಟ್‌ನ ಕೊನೆಯ ನಾಲ್ಕು ಗುಂಪು ಹಂತದ ಪಂದ್ಯಗಳಲ್ಲಿ ಯಾರ್ಕ್‌ಷೈರ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದ ಮ್ಯಾನೇಜ್ಮೆಂಟ್ ಮಾಹಿತಿ ನೀಡಿದೆ. ಇಲ್ಲಿ ವಿಶೇಷವೆಂದರೆ ಕಳೆದ ವಾರವಷ್ಟೇ ಈ ತಂಡಕ್ಕೆ ಭಾರತದ ರುತುರಾಜ್ ಗಾಯಕ್ವಾಡ್ ಕೂಡ ಸೇರಿಕೊಂಡಿದ್ದಾರೆ.
ಕೌಂಟಿ ಚಾಂಪಿಯನ್‌ಶಿಪ್ ವಿಭಾಗ 1 ರಲ್ಲಿ ರುತುರಾಜ್ ಗಾಯಕ್ವಾಡ್ ಯಾರ್ಕ್‌ಷೈರ್ ತಂಡದ ಪರ ಆಡಲಿದ್ದಾರೆ. ಐದು ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಿಗೆ ರುತುರಾಜ್ ಲಭ್ಯರಿರುವ ನಿರೀಕ್ಷೆಯಿದೆ. ಆಗಸ್ಟ್ 5 ರಿಂದ ಪ್ರಾರಂಭವಾಗಲಿರುವ ಮತ್ತು ಸೆಪ್ಟೆಂಬರ್ 20 ರವರೆಗೆ ನಡೆಯಲಿರುವ ಏಕದಿನ ಕಪ್‌ನಲ್ಲಿಯೂ ರುತುರಾಜ್ ಯಾರ್ಕ್‌ಷೈರ್ ಪರ ಆಡಲಿದ್ದಾರೆ. ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನದ ಈ ಇಬ್ಬರು ಆಟಗಾರರು ಒಟ್ಟಿಗೆ ಆಡುವುದನ್ನು ನೋಡಲಾಗುವುದಿಲ್ಲ. ಈ ಇಬ್ಬರೂ ಆಟಗಾರರನ್ನು ವಿಭಿನ್ನ ಪಂದ್ಯಗಳಿಗೆ ತಂಡದಲ್ಲಿ ಸೇರಿಸಲಾಗಿದೆ.
IPL 2025: 2025 ರ ಐಪಿಎಲ್ನಿಂದ ಹೊರಬಿದ್ದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
ಯಾರ್ಕ್‌ಷೈರ್ ತಂಡದಲ್ಲಿ ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಲು ಎದುರು ನೋಡುತ್ತಿದ್ದೇನೆ. ಹೆಡಿಂಗ್ಲೆ ನಾನು ಯಾವಾಗಲೂ ಆಡಲು ಬಯಸುವ ಸ್ಥಳ. ಈ ಕ್ಲಬ್‌ನಲ್ಲಿ ಬಹಳಷ್ಟು ಇತಿಹಾಸವಿದೆ, ಮತ್ತು ಸೀಸನ್ನ ಪ್ರಮುಖ ಹಂತದಲ್ಲಿ ತಂಡಕ್ಕಾಗಿ ಮೈದಾನದಲ್ಲಿ ಕೊಡುಗೆ ನೀಡಲು ನನಗೆ ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅಬ್ದುಲ್ಲಾ ಶಫೀಕ್ ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ