ಐಸಿಸಿ ಟಿ20 ವಿಶ್ವಕಪ್ 2024ರ (T20 World Cup 2024) 21ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕರಾರುವಕ್ಕಾದ ದಾಳಿಗೆ ಬಾಂಗ್ಲಾದೇಶ ತಂಡ (South Africa vs Bangladesh) ತಲೆಬಾಗಿದೆ. ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮತ್ತೊಂದು ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಆಫ್ರಿಕಾ ತಂಡ, ಬಾಂಗ್ಲಾ ತಂಡವನ್ನು 4 ರನ್ಗಳಿಂದ ಮಣಿಸಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಸ್ಕೋರ್ ದಾಖಲಿಸಿದ ಬೇಡದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಬರೆಯಿತು. ಗೆಲುವಿಗೆ ಅಲ್ಪ ಗುರಿ ಪಡೆದ ಬಾಂಗ್ಲಾದೇಶ ತಂಡ ಕೊನೆಯಲ್ಲಿ ಮಾಡಿಕೊಂಡ ತನ್ನದೇ ತಪ್ಪುಗಳಿಂದ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ಪರ ಕೇವಲ ಮೂರು ಬ್ಯಾಟ್ಸ್ಮನ್ಗಳಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಉಳಿದವರಲ್ಲಿ ಇಬ್ಬರು ಖಾತೆ ತೆರೆಯದೆ ನಿರ್ಗಮಿಸಿದರೆ. ಮೂವರೂ ಒಂದೇ ರನ್‌ಗೆ ತೃಪ್ತಿಪಟ್ಟರು. ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ ಕ್ಲಾಸೆನ್ ಅತ್ಯಧಿಕ 46 ರನ್ ಗಳಿಸಿದರು. ಕ್ಲಾಸೆನ್ ಅವರ ಇನ್ನಿಂಗ್ಸ್ 3 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಒಳಗೊಂಡಿತ್ತು. ಡೇವಿಡ್ ಮಿಲ್ಲರ್ 29 ರನ್ ಕೊಡುಗೆ ನೀಡಿದರು. ಕ್ಲಾಸೆನ್ ಮತ್ತು ಮಿಲ್ಲರ್ ಇಬ್ಬರೂ ಐದನೇ ವಿಕೆಟ್‌ಗೆ 80 ಎಸೆತಗಳಲ್ಲಿ 79 ರನ್‌ಗಳ ಜೊತೆಯಾಟ ನೀಡಿದರು. ಹಾಗಾಗಿ ದಕ್ಷಿಣ ಆಫ್ರಿಕಾ 100 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.
🇿🇦 win a thriller in New York 🔥
A skilful bowling display against Bangladesh helps them defend the lowest total in Men's #T20WorldCup history 👏#T20WorldCup | #SAvBAN | 📝: https://t.co/XCZhIYVOHi pic.twitter.com/Kak9T5Jq0S
— ICC (@ICC) June 10, 2024
ಉಳಿದಂತೆ ತಂಡದ ಪರ ಕ್ವಿಟ್ಟನ್ ಡಿ ಕಾಕ್ 11 ಎಸೆತಗಳಲ್ಲಿ 18 ರನ್ ಗಳಿಸಿದರು. ರಿಜಾ ಹೆಂಡ್ರಿಕ್ಸ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ನಾಯಕ ಏಡನ್ ಮಾರ್ಕ್ರಾಮ್ 4 ರನ್ ಗಳಿಸಿದರೆ, ಮಾರ್ಕೊ ಯಾನ್ಸೆನ್ 5 ರನ್ ಮತ್ತು ಕೇಶವ್ ಮಹಾರಾಜ್ 4 ರನ್ ಬಾರಿಸಿ ಅಜೇಯರಾಗಿ ಮರಳಿದರು. ಬಾಂಗ್ಲಾದೇಶ ಪರ ತಂಜಿಮ್ ಹಸನ್ ಸಾಕಿಬ್ ಅತಿ ಹೆಚ್ಚು 3 ವಿಕೆಟ್ ಕಬಳಿಸಿದರೆ, ತಸ್ಕಿಮ್ ಅಹ್ಮದ್ 2 ವಿಕೆಟ್, ರಿಶಾದ್ ಹೌಸೈನ್ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ತಂಡ 50 ರನ್ ಕಲೆಹಾಕುವುದರೊಳಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಒಂದಾದ ತೌಹಿದ್ ಹೃದಯೊಯ್ ಹಾಗೂ ಮಹಮ್ಮದುಲ್ಲಾ ಉತ್ತಮ ಜೊತೆಯಾಟವಾಡುವ ಮೂಲಕ ತಂಡವನ್ನು ನೂರರ ಸನಿಹಕ್ಕೆ ತಂದರು. ಈ ವೇಳೆ ಹೃದಯೊಯ್ 37 ರನ್ ಬಾರಿಸಿ ವಿಕೆಟ್ ಕೈಚೆಲ್ಲುವುದರೊಂದಿಗೆ ಬಾಂಗ್ಲಾ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ಈ ಜೋಡಿಯ ಜೊತೆಯಾಟ ಮುರಿದು ಬೀಳುವುದರೊಂದಿಗೆ ಬಾಂಗ್ಲಾ ತಂಡದ ಗೆಲುವಿನ ಆಸೆಯೂ ಕಮರಿತು. ಕೊನೆಯಲ್ಲಿ ಮಹಮ್ಮದುಲ್ಲಾ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡ 4 ರನ್ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:46 pm, Mon, 10 June 24