ಎಟಿಪಿ ಶ್ರೇಯಾಂಕದಲ್ಲಿ 77ನೇ ಸ್ಥಾನ: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸುಮಿತ್ ನಾಗಲ್

ಭಾನುವಾರ ನಡೆದ ಮೂರು ಸೆಟ್‌ಗಳ ಫೈನಲ್‌ನಲ್ಲಿ ನಾಗಲ್ ಅವರು ಸ್ವಿಟ್ಜರ್ಲೆಂಡ್‌ನ ಅಲೆಕ್ಸಾಂಡರ್ ರಿಚರ್ಡ್ ಅವರನ್ನು 6-1 6(5)-7 6-3 ರಿಂದ ಸೋಲಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಮಾನದಂಡದ ಪ್ರಕಾರ, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರ 56 ಆಟಗಾರರು ಸ್ವಯಂಚಾಲಿತವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಪ್ರತಿ ದೇಶದಿಂದ ಗರಿಷ್ಠ 4 ಆಟಗಾರರು ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ.

ಎಟಿಪಿ ಶ್ರೇಯಾಂಕದಲ್ಲಿ 77ನೇ ಸ್ಥಾನ: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸುಮಿತ್ ನಾಗಲ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 12, 2024 | 2:28 PM

ಭಾರತದ ಟೆನಿಸ್ ಆಟಗಾರ ಸುಮಿತ್ ನಗಾಲ್ ಸೋಮವಾರ ಬಿಡುಗಡೆ ಮಾಡಿರುವ ಎಟಿಪಿ ಶ್ರೇಯಾಂಕದಲ್ಲಿ 18 ಸ್ಥಾನಗಳ ಜಿಗಿದು 77ನೇ ಸ್ಥಾನಕ್ಕೆ ತಲುಪಿದ್ದು, ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ಡ್ರಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ನಾಗಲ್ ಇದೀಗ 713 ಎಟಿಪಿ ಪಾಯಿಂಟ್ಸ್ ಹೊಂದಿದ್ದಾರೆ. ಭಾನುವಾರ ಜರ್ಮನಿಯಲ್ಲಿ ನಡೆದ ಹೀಲ್‌ಬ್ರಾನ್ ನೆಕರ್‌ಕಪ್ 2024 ಚಾಲೆಂಜರ್ ಪಂದ್ಯಾವಳಿಯಲ್ಲಿ ನಾಗಲ್ ಅವರು ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಕಾರಣ ಶ್ರೇಯಾಂಕದಲ್ಲಿ ಭರ್ಜರಿ ಜಿಗಿತ ಕಂಡರು. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಭಾನುವಾರ ನಡೆದ ಮೂರು ಸೆಟ್‌ಗಳ ಫೈನಲ್‌ನಲ್ಲಿ ನಾಗಲ್ ಅವರು ಸ್ವಿಟ್ಜರ್ಲೆಂಡ್‌ನ ಅಲೆಕ್ಸಾಂಡರ್ ರಿಚರ್ಡ್ ಅವರನ್ನು 6-1 6(5)-7 6-3 ರಿಂದ ಸೋಲಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಮಾನದಂಡದ ಪ್ರಕಾರ, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರ 56 ಆಟಗಾರರು ಸ್ವಯಂಚಾಲಿತವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಪ್ರತಿ ದೇಶದಿಂದ ಗರಿಷ್ಠ 4 ಆಟಗಾರರು ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಮತ್ತು ಈ ನಿಯಮದೊಂದಿಗೆ, ಕಡಿಮೆ ಶ್ರೇಯಾಂಕದ ಆಟಗಾರರು ಡ್ರಾಗೆ ಪ್ರವೇಶಿಸಲು ಅವಕಾಶವನ್ನು ಪಡೆಯುತ್ತಾರೆ.

ಡ್ರಾದಲ್ಲಿ ಲಭ್ಯವಿರುವ ಕೊನೆಯ ಶ್ರೇಯಾಂಕದ ಸ್ಥಾನವನ್ನು ಪಡೆದುಕೊಳ್ಳಲು ನಾಗಲ್ ಯಶಸ್ವಿಯಾಗಿದ್ದಾರೆ. 2012ರ ಒಲಿಂಪಿಕ್ಸ್‌ನಲ್ಲಿ ವೈಲ್ಡ್‌ಕಾರ್ಡ್‌ನಿಂದಾಗಿ ಸೋಮದೇವ್ ದೇವವರ್ಮನ್ ಅವರು ಒಲಿಂಪಿಕ್ಸ್‌ನ ಪ್ರಧಾನ ಸುತ್ತಿಗೆ ಪ್ರವೇಶಿಸಿದ ಕೊನೆಯ ಆಟಗಾರನಾಗಿದ್ದರು.

ಫೈನಲ್‌ನಲ್ಲಿ ಗೆದ್ದ ನಂತರ ‘X’ ನಲ್ಲಿ ಪೋಸ್ಟ್ ಮಾಡಿದ ನಾಗಲ್, ”ಈ ವಾರ ಹೀಲ್‌ಬ್ರಾನ್‌ನಲ್ಲಿ ಪ್ರಶಸ್ತಿ ಗೆದ್ದಿರುವುದು ನನಗೆ ತುಂಬಾ ಸಂತೋಷವಾಗಿದೆ. ಇದು ನನಗೆ ಪ್ರಮುಖ ವಾರವಾಗಿತ್ತು. ಪಂದ್ಯವು ಸವಾಲಿನದ್ದಾಗಿತ್ತು. ಉತ್ತಮ ಟೆನಿಸ್ ಆಡುವುದು ಮೊದಲ ಗುರಿ, ನಂತರ ಶ್ರೇಯಾಂಕದ ಸ್ಥಾನ ತಾನಾಗಿಯೆ ಬರುತ್ತದೆ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸೂಪರ್-8 ತಲುಪಲು ಪಾಕಿಸ್ತಾನಕ್ಕೆ ಬೇಕು ಭಾರತದ ಸಹಾಯ: ಬಾಬರ್ ಪಡೆಯ ಭವಿಷ್ಯ ಇಲ್ಲಿದೆ ನೋಡಿ

ಇದೀಗ 26ರ ಹರೆಯದ ಆಟಗಾರ ಪ್ಯಾರಿಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದು ನಾಗಲ್ ಅವರ ಆರನೇ ಎಟಿಪಿ ಚಾಲೆಂಜರ್ ಪ್ರಶಸ್ತಿಯಾಗಿದೆ. ಈ ವರ್ಷದ ಆರಂಭದಲ್ಲಿ ತವರು ನೆಲದಲ್ಲಿ ಚೆನ್ನೈ ಓಪನ್ ಟ್ರೋಫಿ ಗೆದ್ದ ನಂತರ ಇದು ಅವರ ವರ್ಷದ ಎರಡನೇ ಟ್ರೋಫಿಯಾಗಿದೆ.

ನಾಗಲ್ ಪ್ರಸ್ತುತ ಸಿಂಗಲ್ಸ್ ಆಟಗಾರರಲ್ಲಿ ಅತ್ಯುತ್ತಮ ಶ್ರೇಯಾಂಕದ ಭಾರತೀಯರಾಗಿದ್ದಾರೆ. ಅವರು 2023 ರ ನಂತರ ನಾಲ್ಕು ATP ಚಾಲೆಂಜರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಹೀಲ್‌ಬ್ರಾನ್‌ನಲ್ಲಿನ ಈ ಗೆಲುವು ಕ್ಲೇ ಕೋರ್ಟ್‌ನಲ್ಲಿ ಅವರ ನಾಲ್ಕನೇ ಪ್ರಶಸ್ತಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Tue, 11 June 24