SA20: ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ ಚಾಂಪಿಯನ್ಸ್

| Updated By: ಝಾಹಿರ್ ಯೂಸುಫ್

Updated on: Feb 11, 2024 | 7:04 AM

Sunrisers Eastern Cape: 2023 ರಲ್ಲಿ ನಡೆದ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಮಾಲೀಕತ್ವದ ಸನ್​ರೈರ್ಸಸ್ ಈಸ್ಟರ್ನ್​ ಕೇಪ್ ತಂಡವು ಚಾಂಪಿಯನ್​​ ಪಟ್ಟ ಅಲಂಕರಿಸಿತ್ತು. ಇದೀಗ 2024 ರಲ್ಲೂ ಚಾಂಪಿಯನ್​ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಐಡೆನ್ ಮಾರ್ಕ್ರಾಮ್ ನಾಯಕತ್ವದ ಸನ್​ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಯಶಸ್ವಿಯಾಗಿದೆ.

SA20: ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ ಚಾಂಪಿಯನ್ಸ್
Sunrisers Eastern Cape
Follow us on

ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ (Sunrisers Eastern Cape) ಚಾಂಪಿಯನ್ಸ್​ ಆಗಿ ಹೊರಹೊಮ್ಮಿದೆ. ಕೇಪ್​ಟೌನ್​​ನ ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್​ ವಿರುದ್ಧ 89 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಡೆನ್ ಮಾರ್ಕ್ರಾಮ್ ಪಡೆ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.
ಇನಿಂಗ್ಸ್ ಆರಂಭಿಸಿದ ಜೋರ್ಡನ್ ಹರ್ಮನ್ 26 ಎಸೆತಗಳಲ್ಲಿ 42 ರನ್​ ಬಾರಿಸುವ ಮೂಲಕ ಸನ್​ರೈಸರ್ಸ್​ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಮತ್ತೊಂದೆಡೆ ಡೇವಿಡ್ ಮಲಾನ್ ಕೇವಲ 6 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಈ ವೇಳೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಟಾಮ್ ಅಬೆಲ್ 34 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 55 ರನ್​ ಚಚ್ಚಿದ್ದರು. ಇನ್ನು ನಾಯಕ ಐಡೆನ್ ಮಾರ್ಕ್ರಾಮ್ 26 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 42 ರನ್ ಬಾರಿಸಿದರು.

ಅಂತಿಮ ಹಂತದಲ್ಲಿ ಅಬ್ಬರಿಸಿದ ಯುವ ದಾಂಡಿಗ ಟ್ರಿಸ್ಟನ್ ಸ್ಟಬ್ಸ್ 30 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 56 ರನ್​ ಸಿಡಿಸಿದರು. ಈ ಮೂಲಕ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿತು.

205 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಡರ್ಬನ್ ಸೂಪರ್ ಜೈಂಟ್ಸ್ ತಂಡವು ಯಾವುದೇ ಹಂತದಲ್ಲೂ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ಬೌಲರ್​ಗಳ ವಿರುದ್ಧ ಮೇಲುಗೈ ಸಾಧಿಸಲಾಗಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ 3 ರನ್ ಬಾರಿಸಿ ವಾರೊಲ್​ಗೆ ವಿಕೆಟ್​ ಒಪ್ಪಿಸಿದರೆ, ಮ್ಯಾಥ್ಯೂ ಬ್ರೀಟ್​​ಝ್ಕಿ 18 ರನ್​ಗಳಿಸಲು 27 ಎಸೆತಗಳನ್ನು ತೆಗೆದುಕೊಂಡಿದ್ದರು.

ಈ ಹಂತದಲ್ಲಿ ದಾಳಿಗಿಳಿದ ಮಾರ್ಕೊ ಯಾನ್ಸೆನ್ ಸ್ಮಟ್ಸ್ (1), ಭಾನುಕಾ ರಾಜಪಕ್ಸೆ (0) ವಿಕೆಟ್ ಪಡೆದ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಇನ್ನು ಸ್ಪೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವಲ್ಲಿ ಬಾರ್ಟ್​ಮ್ಯಾನ್ ಯಶಸ್ವಿಯಾದರು. ಕೇವಲ 65 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ಡರ್ಬನ್ ತಂಡವು ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ.

ಅಂತಿಮವಾಗಿ 17 ಓವರ್​ಗಳಲ್ಲಿ 115 ರನ್​ಗಳಿಗೆ ಆಲೌಟ್ ಆಗುವ ಮೂಲಕ ಡರ್ಬನ್ ಸೂಪರ್ ಜೈಂಟ್ಸ್ ತಂಡವು 89 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡವು 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್​:

ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡವು ಸತತ 2ನೇ ಬಾರಿ ಚಾಂಪಿಯನ್ಸ್​ ಆಗಿರುವುದು ವಿಶೇಷ. ಅಂದರೆ 2023 ರಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲೂ ಐಡೆನ್ ಮಾರ್ಕ್ರಾಮ್ ನೇತೃತ್ವದ ಸನ್​ರೈಸರ್ಸ್ ತಂಡ ಟ್ರೋಫಿ ಗೆದ್ದಿತ್ತು. ಇದೀಗ 2ನೇ ಸೀಸನ್​ನಲ್ಲೂ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿ ಮಾಲೀಕತ್ವದ ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ತಂಡ ಯಶಸ್ವಿಯಾಗಿದೆ.

ಸನ್​ರೈಸರ್ಸ್​ ಈಸ್ಟರ್ನ್​ ಕೇಪ್ ಪ್ಲೇಯಿಂಗ್ 11: ಜೋರ್ಡನ್ ಹರ್ಮನ್ , ಡೇವಿಡ್ ಮಲಾನ್ , ಟಾಮ್ ಅಬೆಲ್ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟನ್ ಸ್ಟಬ್ಸ್ (ವಿಕೆಟ್ ಕೀಪರ್) , ಪ್ಯಾಟ್ರಿಕ್ ಕ್ರುಗರ್ , ಮಾರ್ಕೊ ಯಾನ್ಸೆನ್ , ಲಿಯಾಮ್ ಡಾಸನ್ , ಸೈಮನ್ ಹಾರ್ಮರ್ , ಡೇನಿಯಲ್ ವೊರಲ್ , ಒಟ್ನೀಲ್ ಬಾರ್ಟ್​ಮ್ಯಾನ್.

ಇದನ್ನೂ ಓದಿ: Rohit Sharma: ಹೊಸ ತಂಡದ ಪರ ಕಣಕ್ಕಿಳಿಯುತ್ತಾರಾ ರೋಹಿತ್ ಶರ್ಮಾ?

ಡರ್ಬನ್ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ಬ್ರೀಟ್​​ಝ್ಕಿ , ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ಜೆಜೆ ಸ್ಮಟ್ಸ್ , ಭಾನುಕಾ ರಾಜಪಕ್ಸೆ , ಹೆನ್ರಿಕ್ ಕ್ಲಾಸೆನ್ , ವಿಯಾನ್ ಮುಲ್ಡರ್ , ಡ್ವೈನ್ ಪ್ರಿಟೋರಿಯಸ್ , ಕೇಶವ್ ಮಹಾರಾಜ್ (ನಾಯಕ) , ಜೂನಿಯರ್ ಡಾಲಾ , ನವೀನ್-ಉಲ್-ಹಕ್ , ರೀಸ್ ಟೋಪ್ಲಿ.