
ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗುತ್ತಿದೆ. ಇಲ್ಲಿಯವರೆಗೆ ಈ ಸರಣಿಗೆ ಪಟೌಡಿ ಟ್ರೋಫಿ (Pataudi Trophy) ಎಂದು ಕರೆಯಲಾಗುತ್ತಿತ್ತು. ಆದರೆ ಇದೀಗ ಈ ಸರಣಿಗೆ ಆಂಡರ್ಸನ್-ತೆಂಡೂಲ್ಕರ್ (Anderson-Tendulkar Trophy) ಟ್ರೋಫಿ ಎಂದು ಮರುನಾಮಕರಣ ಮಾಡಲಾಗಿದೆ. ಈ ಮೊದಲು ಟ್ರೋಫಿಗೆ ತನ್ನ ಹೆಸರನ್ನು ಇಡಬಾರದೆಂದು ತೆಂಡೂಲ್ಕರ್ ಹೇಳಿದ್ದರು ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ತೆಂಡೂಲ್ಕರ್ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಈ ಬಗ್ಗೆ ಮೌನ ಮುರಿದಿರುವ ಮಾಸ್ಟರ್-ಬ್ಲಾಸ್ಟರ್, ‘ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಟ್ರೋಫಿಯ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂದು ತಿಳಿದ ತಕ್ಷಣ, ನಾನು ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಕುಟುಂಬಕ್ಕೆ ಕರೆ ಮಾಡಿ ಮಾತನಾಡಿದೆ. ಅಲ್ಲದೆ ಈ ಪ್ರತಿಷ್ಠಿತ ಸರಣಿಯಲ್ಲಿ ಪಟೌಡಿ ಅವರ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಾನಾ ಪ್ರಯತ್ನಗಳನ್ನು ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾಗಿ ತಿಳಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಚಿನ್, ‘ಕೆಲವು ತಿಂಗಳ ಹಿಂದೆ ಬಿಸಿಸಿಐ ಮತ್ತು ಇಸಿಬಿ ಪಟೌಡಿ ಟ್ರೋಫಿಯನ್ನು ನಿವೃತ್ತಿಗೊಳಿಸಲು ನಿರ್ಧರಿಸಿವೆ ಎಂಬ ಮಾಹಿತಿ ನನಗೆ ಸಿಕ್ಕಿತು. ಆದರೆ ಆ ಟ್ರೋಫಿಗೆ ನನ್ನ ಮತ್ತು ಜೇಮ್ಸ್ ಆಂಡರ್ಸನ್ ಹೆಸರಿಡಲಾಗುತ್ತಿದೆ ಎಂದು ತಿಳಿದಾಗ ನಾನು ಮೊದಲ ಫೋನ್ ಮಾಡಿದ್ದು ಪಟೌಡಿ ಕುಟುಂಬಕ್ಕೆ. ಆ ಸಮಯದಲ್ಲಿ ನಾನು ಪಟೌಡಿ ಅವರ ಪರಂಪರೆಯನ್ನು ಜೀವಂತವಾಗಿಡಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದೆ. ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡುವಲ್ಲಿ ಟೈಗರ್ ಪಟೌಡಿ ದೊಡ್ಡ ಪಾತ್ರ ವಹಿಸಿದ್ದಾರೆ. ಇದನ್ನು ಎಂದಿಗೂ ಮರೆಯಬಾರದು.
IND vs ENG: ಆಂಡರ್ಸನ್- ತೆಂಡೂಲ್ಕರ್ ಟ್ರೋಫಿ ಅನಾವರಣ; ನೂತನ ಟ್ರೋಫಿ ಹೇಗಿದೆ ನೋಡಿ
ಹೀಗಾಗಿ ಸರಣಿಯ ಜೊತೆಗೆ ಪಟೌಡಿ ಅವರ ಹೆಸರನ್ನು ಜೀವಂತವಾಗಿಡಲು ನನ್ನ ಮತ್ತು ಮಾಜಿ ಬಿಸಿಸಿಐ ಕಾರ್ಯದರ್ಶಿ, ಪ್ರಸ್ತುತ ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಇಸಿಬಿ ಅಧಿಕಾರಿಗಳ ನಡುವೆ ಹಲವಾರು ಬಾರಿ ಚರ್ಚೆ ನಡೆದವು. ನಾನು ಜಯ್ ಶಾ ಮತ್ತು ಇಸಿಬಿ ಅಧಿಕಾರಿಗಳೊಂದಿಗೆ ಮಾತನಾಡಿ ಕೆಲವು ವಿಚಾರಗಳನ್ನು ಹಂಚಿಕೊಂಡೆ. ನಮ್ಮ ಚರ್ಚೆಗಳಿಗೆ ಮನ್ನಣೆ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ. ಅಂತಿಮವಾಗಿ ಪಟೌಡಿ ಅವರ ಗೌರವಾರ್ಥವಾಗಿ ಪದಕ ನೀಡುವ ಆಯ್ಕೆ ಬಂದಿದ್ದು, ಈ ಸರಣಿ ವಿಜೇತ ನಾಯಕನಿಗೆ ಪಟೌಡಿ ಪದಕ ಫಾರ್ ಎಕ್ಸಲೆನ್ಸ್ ನೀಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Thu, 19 June 25