ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಇತಿಹಾಸ ಪುಟ ಸೇರಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ನ ಮೊದಲ ದಿನದಾಟದಲ್ಲೇ ಬರೋಬ್ಬರಿ 23 ವಿಕೆಟ್ಗಳು ಉರುಳಿವೆ. ಇದರೊಂದಿಗೆ 121 ವರ್ಷಗಳ ಬಳಿಕ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್ನ ಮೊದಲ ದಿನವೇ 22 ಕ್ಕಿಂತ ಹೆಚ್ಚಿನ ವಿಕೆಟ್ ಪತನಗೊಂಡಂತಾಗಿದೆ. ಈ ಅಚ್ಚರಿಯಾಟದ ಬಗ್ಗೆ ಖುದ್ದು ಕ್ರಿಕೆಟ್ ದೇವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹೌದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮಾಷೆಯ ಪ್ರಸಂಗವನ್ನು ವಿವರಿಸಿದ್ದಾರೆ. ಸೌತ್ ಆಫ್ರಿಕಾ ತಂಡವು ಆಲೌಟ್ ಆದಾಗ ನಾನು ವಿಮಾನ ಏರಿದೆ. ಆ ಬಳಿಕ ಮನೆಗೆ ಬಂದಾಗ ಮತ್ತೆ ಸೌತ್ ಆಫ್ರಿಕಾ ತಂಡವೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೆಂತಹ ಅಚ್ಚರಿ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಒಂದೇ ದಿನದಲ್ಲಿ 23 ವಿಕೆಟ್ ಪತನವಾಗುವುದರೊಂದಿಗೆ 24ರಲ್ಲಿ (2024) ಕ್ರಿಕೆಟ್ ಆರಂಭವಾಗಿದೆ. ನಿಜಕ್ಕೂ ಪರಮಾಶ್ಚರ್ಯ. ಸೌತ್ ಆಫ್ರಿಕಾ ಆಲೌಟ್ ಆದಾಗ ನಾನು ವಿಮಾನವನ್ನು ಏರಿದ್ದೆ. ಇದೀಗ ನಾನು ಮನೆಯಲ್ಲಿದ್ದೇನೆ. ಟಿವಿಯಲ್ಲಿ ಸೌತ್ ಆಫ್ರಿಕಾ ತಂಡದ 3 ವಿಕೆಟ್ ಪತನ ಎಂದು ಕಾಣಿಸುತ್ತಿದೆ. ಹಾಗಿದ್ರೆ ನಾನು ಏನನ್ನ ಮಿಸ್ ಮಾಡಿಕೊಂಡೆ? ಎಂದು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ನಲ್ಲಿ ಪ್ರಶ್ನಿಸಿದ್ದಾರೆ.
ಈ ಮೂಲಕ ಸೌತ್ ಆಫ್ರಿಕಾ ಆಲೌಟ್ ಆದ ಬೆನ್ನಲ್ಲೇ ಭಾರತ ತಂಡವು ಸರ್ವಪತನ ಕಂಡಿರುವುದನ್ನು ತಾನು ಮಿಸ್ ಮಾಡಿಕೊಂಡಿದ್ದೇನೆ ಎಂದು ಪರೋಕ್ಷವಾಗಿ ಸಚಿನ್ ತೆಂಡೂಲ್ಕರ್ ಪ್ರಸ್ತಾಪಿಸಿದ್ದಾರೆ. ಒಟ್ಟಿನಲ್ಲಿ ಒಂದೇ ದಿನದಲ್ಲಿ 23 ವಿಕೆಟ್ ಕಬಳಿಸುವ ಮೂಲಕ ಭಾರತ-ಸೌತ್ ಆಫ್ರಿಕಾ ಬೌಲರ್ಗಳು ಪರಾಕ್ರಮ ಮೆರೆದರೆ, ಬ್ಯಾಟರ್ಗಳು ಮಾತ್ರ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
ಈ ಪಂದ್ಯದ ಮೊದಲ ದಿನದಾಟದಲ್ಲೇ ಉಭಯ ತಂಡಗಳು ಮೊದಲ ಇನಿಂಗ್ಸ್ ಅಂತ್ಯಗೊಳಿಸಿದೆ. ಅಂದರೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿ ಕೇವಲ 55 ರನ್ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 153 ರನ್ಗಳಿಗೆ ಸರ್ವಪತನ ಕಂಡಿದೆ.
ಇನ್ನು ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 62 ರನ್ ಕಲೆಹಾಕಿದೆ. ಅಂದರೆ ಟೆಸ್ಟ್ ಕ್ರಿಕೆಟ್ನ ಮೊದಲ ದಿನದಾಟದಲ್ಲೇ ಒಟ್ಟು 23 ವಿಕೆಟ್ ಕಬಳಿಸುವಲ್ಲಿ ಉಭಯ ತಂಡಗಳ ಬೌಲರ್ಗಳು ಯಶಸ್ವಿಯಾಗಿರುವುದು ವಿಶೇಷ. ಇದೀಗ 2ನೇ ದಿನದಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಕಾದು ನೋಡಬೇಕಿದೆ.