IND vs SA: ಕೇಪ್​ಟೌನ್​ನಲ್ಲಿ ಸಚಿನ್ ಕಿಂಗ್​: ಯಾರು ಮುರಿಯಲಿದ್ದಾರೆ ಮಾಸ್ಟರ್ ಬ್ಲಾಸ್ಟರ್ ದಾಖಲೆ?

| Updated By: ಝಾಹಿರ್ ಯೂಸುಫ್

Updated on: Jan 08, 2022 | 4:31 PM

Sachin Tendulkar’s Records: 1993 ರಲ್ಲಿ ಸಚಿನ್ ತೆಂಡೂಲ್ಕರ್ ಕೇಪ್ ಟೌನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಸಚಿನ್ ಮೊದಲ ಇನ್ನಿಂಗ್ಸ್‌ನಲ್ಲಿ 73 ರನ್ ಗಳಿಸಿ ಮಿಂಚಿದ್ದರು.

IND vs SA: ಕೇಪ್​ಟೌನ್​ನಲ್ಲಿ ಸಚಿನ್ ಕಿಂಗ್​: ಯಾರು ಮುರಿಯಲಿದ್ದಾರೆ ಮಾಸ್ಟರ್ ಬ್ಲಾಸ್ಟರ್ ದಾಖಲೆ?
Sachin Tendulkar
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa 3rd Test) ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಜನವರಿ 11 ರಿಂದ ಕೇಪ್ ಟೌನ್‌ನಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಭಾರತ ತಂಡವು ಕಳೆದ 30 ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್​ ಸರಣಿ ಗೆದ್ದಿಲ್ಲ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 113 ರನ್​ಗಳ ಭರ್ಜರಿ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕೆ 7 ವಿಕೆಟ್​ಗಳ ಸೋಲಿನ ರುಚಿ ತೋರಿಸಿತ್ತು. ಇದೀಗ ಸರಣಿಯ ಕೊನೆಯ ಪಂದ್ಯವು ಕೇಪ್ ಟೌನ್​ನಲ್ಲಿ ನಡೆಯಲಿದ್ದು, ಈ ಪಂದ್ಯವು ಸರಣಿಯ ಫಲಿತಾಂಶವನ್ನು ನಿರ್ಧರಿಸಲಿದೆ. ಆದರೆ ಇತ್ತ ಕೇಪ್​ ಟೌನ್​ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳ ದಾಖಲೆ ಅತ್ಯಂತ ಕಳಪೆಯಾಗಿದೆ.

ಈ ಹಿಂದಿನ ಅಂಕಿ ಅಂಶಗಳನ್ನು ನೋಡುವಾದರೆ ಕೇಪ್​ ಟೌನ್ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನೆಂದರೆ ಸಚಿನ್ ತೆಂಡೂಲ್ಕರ್ (Sachin Tendulkar) ಮಾತ್ರ. ಇತರೆ ಬ್ಯಾಟರ್​ಗಳ ವೈಫಲ್ಯದಿಂದಾಗಿ ಇದುವರೆಗೆ ಟೀಮ್ ಇಂಡಿಯಾ ಕೇಪ್​ ಟೌನ್ ಮೈದಾನದಲ್ಲಿ ಪಂದ್ಯ ಗೆದ್ದಿಲ್ಲ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಪಿಚ್​. ಏಕೆಂದರೆ ಕೇಪ್ ಟೌನ್‌ನ ಪಿಚ್ ಬೌನ್ಸ್ ಮತ್ತು ವೇಗಕ್ಕೆ ಹೆಸರುವಾಸಿಯಾಗಿದೆ. ಅಲನ್ ಡೊನಾಲ್ಡ್, ಶಾನ್ ಪೊಲಾಕ್, ಮಖಾಯಾ ಆಂಟೋನಿ, ಲ್ಯಾನ್ಸ್ ಕ್ಲೋನ್ಜರ್, ಜಾಕ್ವೆಸ್ ಕಾಲಿಸ್, ಡೇಲ್ ಸ್ಟೇಯ್ನ್ ಮತ್ತು ಮೊರ್ನೆ ಮೊರ್ಕೆಲ್ ಅವರಂತಹ ವೇಗದ ಬೌಲರ್‌ಗಳ ಮುಂದೆ ಸಚಿನ್ ಈ ಮೈದಾನದಲ್ಲಿ ಅದ್ಭುತ ಇನಿಂಗ್ಸ್​ಗಳನ್ನು ಆಡಿದ್ದರು ಎಂಬುದು ವಿಶೇಷ. ಇದಾಗ್ಯೂ ಈ ಮೈದಾನದಲ್ಲಿ ಭಾರತಕ್ಕೆ ಜಯ ತಂದುಕೊಡುವಲ್ಲಿ ಸಚಿನ್ ಅವರಿಗೂ ಸಾಧ್ಯವಾಗಿಲ್ಲ.

ಸಚಿನ್ ತೆಂಡೂಲ್ಕರ್ 1993 ರಲ್ಲಿ ಕೇಪ್ ಟೌನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಸಚಿನ್ ಮೊದಲ ಇನ್ನಿಂಗ್ಸ್‌ನಲ್ಲಿ 73 ರನ್ ಗಳಿಸಿ ಮಿಂಚಿದ್ದರು. ಇನ್ನು ಇದೇ ಪಂದ್ಯದಲ್ಲಿ ಜಾವಗಲ್ ಶ್ರೀನಾಥ್ ಮೊದಲ ಇನಿಂಗ್ಸ್‌ನಲ್ಲಿ ಎರಡು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಸಚಿನ್ ಹಾಗೂ ಶ್ರೀನಾಥ್ ಅವರ ಉತ್ತಮ ಆಟದ ಪರಿಣಾಮ ಈ ಪಂದ್ಯವು ಡ್ರಾ ಆಗಿತ್ತು.

1997 ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಸರಣಿಯ ಎರಡನೇ ಟೆಸ್ಟ್ ಅನ್ನು ಕೇಪ್ ಟೌನ್‌ನಲ್ಲಿ ಆಡಲಾಯಿತು. ಈ ವೇಳೆ ಸಚಿನ್ ಮೊದಲ ಇನ್ನಿಂಗ್ಸ್‌ನಲ್ಲಿ 169 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ರನ್ ಗಳಿಸಿದ್ದರು. ಆದರೆ, ಭಾರತದ ಇತರೆ ಬ್ಯಾಟರ್​ಗಳ ಅತ್ಯಂತ ಕಳಪೆ ಪ್ರದರ್ಶನದಿಂದಾಗಿ ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 282 ರನ್‌ಗಳಿಂದ ಸೋಲನುಭವಿಸಿತು.

ಇನ್ನು 2007 ರಲ್ಲಿ ಈ ಮೈದಾನದಲ್ಲಿ ಮೂರನೇ ಬಾರಿಗೆ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಿತು. ವಾಸಿಫ್ ಜಾಫರ್ (116), ದಿನೇಶ್ ಕಾರ್ತಿಕ್ (63), ಸಚಿನ್ ತೆಂಡೂಲ್ಕರ್ (64) ಮತ್ತು ಸೌರವ್ ಗಂಗೂಲಿ (66) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 414 ರನ್ ಗಳಿಸಿತು. ಆದರೆ, ಭಾರತದ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 169 ರನ್‌ಗಳಿಗೆ ಕುಸಿಯಿತು. ಇದರಿಂದ ಸಾಧಾರಣ ಸವಾಲು ಪಡೆದ ದಕ್ಷಿಣ ಆಫ್ರಿಕಾ ಚೇಸ್ ಮಾಡುವ ಮೂಲಕ ಐದು ವಿಕೆಟ್‌ಗಳಿಂದ ಜಯ ಸಾಧಿಸಿತು.

ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಈ ಮೈದಾನದಲ್ಲಿ ಆಡಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ 146 ರನ್‌ಗಳ ಭರ್ಜರಿ ಇನಿಂಗ್ಸ್​ ಆಡಿದ್ದರು. ಮಾಸ್ಟರ್ ಬ್ಲಾಸ್ಟರ್ ಅವರ ಈ ಶತಕದ ನೆರವನಿಂದ ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಅಂದರೆ ಕೇಪ್​ಟೌನ್ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ನಾಲ್ಕು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2 ಶತಕ ಹಾಗೂ 2 ಅರ್ಧಶತಕದೊಂದಿಗೆ ಒಟ್ಟು 489 ರನ್ ಗಳಿಸಿದ್ದಾರೆ. ಈ ಮೂಲಕ ಕೇಪ್​ ಟೌನ್ ಪಿಚ್​ನಲ್ಲಿ 2 ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಹಾಗೂ ಈ ಮೈದಾನದಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದಾರೆ. ಇದೀಗ ಮೂರನೇ ಟೆಸ್ಟ್ ಪಂದ್ಯದ ಮೂಲಕ ಈ ದಾಖಲೆಯನ್ನು ಟೀಮ್ ಇಂಡಿಯಾದ ಯಾವ ಬ್ಯಾಟರ್ ಮುರಿಯಲಿದ್ದಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Sachin Tendulkar’s South African Safari: 2 Centuries in Cape Town)