Arjun Tendulkar: ಐಪಿಎಲ್ನಲ್ಲಿ ಸಿಕ್ಕಿಲ್ಲ ಚಾನ್ಸ್: ವಿದೇಶಿ ಕ್ಲಬ್ ಪರ ಕಣಕ್ಕಿಳಿದ ಅರ್ಜುನ್ ತೆಂಡೂಲ್ಕರ್
Arjun Tendulkar: ಕೌಂಟಿ ಕ್ರಿಕೆಟ್ ನಲ್ಲಿ ಅಭ್ಯಾಸವನ್ನು ಮುಂದುರೆಸಿರುವ ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್ ತಂಡವೊಂದರ ಪರ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tenudlka) ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ದೇಶೀಯ ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದಾಗ್ಯೂ ಕಳೆದ ಎರಡು ಸೀಸನ್ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಆಯ್ಕೆಯಾದರೂ, ಅರ್ಜುನ್ಗೆ ಪ್ಲೇಯಿಂಗ್ ಇಲೆವೆನ್ ನ ಭಾಗವಾಗುವ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಇತ್ತ ದೇಶೀಯ ತಂಡದಲ್ಲೂ ಇಲ್ಲ, ಅತ್ತ ಐಪಿಎಲ್ ಕೂಡ ನಡೆಯುತ್ತಿಲ್ಲ. ಹೀಗಾಗಿಯೇ ಅರ್ಜುನ್ ತೆಂಡೂಲ್ಕರ್ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ ಅಲ್ಲೇ ತಮ್ಮ ಕ್ರಿಕೆಟ್ ಅಭ್ಯಾಸವನ್ನು ಮುಂದುವರೆಸಿದ್ದಾರೆ.
ಕೌಂಟಿ ಕ್ರಿಕೆಟ್ ನಲ್ಲಿ ಅಭ್ಯಾಸವನ್ನು ಮುಂದುರೆಸಿರುವ ಆಲ್ರೌಂಡರ್ ಅರ್ಜುನ್ ತೆಂಡೂಲ್ಕರ್ ತಂಡವೊಂದರ ಪರ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ. ಕೌಂಟಿ ಕ್ರಿಕೆಟ್ ತಂಡಗಳ ನಡುವೆ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜುನ್ ಮಿಡ್ಲ್‌ಸೆಕ್ಸ್ ತಂಡದ ಪರ ಕಣಕ್ಕಿಳಿದಿದ್ದರು. 50 ಓವರ್ಗಳ ಈ ಪಂದ್ಯದಲ್ಲಿ ಮಿಡ್ಲ್‌ಸೆಕ್ಸ್ ಸೆಕೆಂಡ್ ಇಲೆವೆನ್ ಮತ್ತು ಕ್ಲಬ್ ಕ್ರಿಕೆಟ್ ಕಾನ್ಫರೆನ್ಸ್ ಇಲೆವೆನ್ ಮುಖಾಮುಖಿಯಾಗಿತ್ತು.
ಈ ಪಂದ್ಯದಲ್ಲಿ ಮಿಡ್ಲ್‌ಸೆಕ್ಸ್ ಪರ ಎಡಗೈ ಮಧ್ಯಮ ವೇಗಿಯಾಗಿ ಕಾಣಿಸಿಕೊಂಡ ಅರ್ಜುನ್ ತೆಂಡೂಲ್ಕರ್ 4 ಓವರ್‌ಗಳನ್ನು ಬೌಲ್ ಮಾಡುವ ಅವಕಾಶವನ್ನು ಪಡೆದರು. ಈ ವೇಳೆ ಕೇವಲ 16 ರನ್ ನೀಡಿ ಒಂದು ವಿಕೆಟ್ ಪಡೆದರು. ಅರ್ಜುನ್ ಆಫ್-ಸ್ಟಂಪ್‌ನಲ್ಲಿ ಎಸೆದ ಚೆಂಡನ್ನು ಹೊಡೆಯಲು ಹೋದ ಐರನ್ಸೈಡ್ನ ಬ್ಯಾಟ್ ಸವರಿ ಚೆಂಡು ವಿಕೆಟ್‌ಕೀಪರ್‌ನ ಗ್ಲೌಸ್ ಸೇರಿತು.
ಅರ್ಜುನ್ ಸೇರಿದಂತೆ ತಂಡದ ಇತರೆ ಬೌಲರ್‌ಗಳ ಪ್ರಬಲ ಪ್ರದರ್ಶನದಿಂದಾಗಿ ಕ್ಲಬ್ ಕ್ರಿಕೆಟ್ ಇಲೆವೆನ್ ಕೇವಲ 257 ರನ್ ಗಳಿಸಿತು. ಆದರೆ ಚೇಸಿಂಗ್ ವೇಳೆ ಅರ್ಜುನ್ಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಏಕೆಂದರೆ ಮಿಡ್ಲ್ಸೆಕ್ಸ್ನ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳೇ ತಂಡವನ್ನು ಗೆಲುವಿನತ್ತ ಮುನ್ನಡೆಸಿತು. ತಂಡದ ಪರ ಡೆವಿಯೆಸ್ಟ್ 94 ರನ್ ಮತ್ತು ಡಿ ಒಡ್ರಿಸ್ಕೋಲ್ 79 ರನ್ ಬಾರಿಸುವ ಮೂಲಕ 7 ವಿಕೆಟ್‌ಗಳ ಜಯ ತಂದುಕೊಟ್ಟರು. ಸದ್ಯ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ತೊಡಗಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್ ಮುಂದಿನ ಸೀಸನ್ ಐಪಿಎಲ್ ಮೂಲಕ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ.