Sandeep Lamichhane: ಲೈಂಗಿಕ ದೌರ್ಜನ್ಯ ಆರೋಪದಿಂದ ಸಂದೀಪ್ ಲಮಿಚಾನೆ ಖುಲಾಸೆ
Sandeep Lamichhane: ನೇಪಾಳ ಪರ 30 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ 22 ರ ಹರೆಯದ ಸಂದೀಪ್ ಲಾಮಿಚಾನೆ ಕ್ರಮವಾಗಿ 69 ಮತ್ತು 85 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯಗಳಿಂದ 13 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದಾರೆ.
ಅತ್ಯಾಚಾರ ಆರೋಪದಲ್ಲಿ ಜೈಲು ಪಾಲಾಗಿದ್ದ ನೇಪಾಳ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ (Sandeep Lamichhane) ಅವರನ್ನು ನೇಪಾಳದ ಪಟೇನ್ ಹೈಕೋರ್ಟ್ ನಿರಪರಾಧಿ ಎಂದು ಘೋಷಿಸಿದೆ. ಇದಕ್ಕೂ ಮುನ್ನ ಯುವ ಕ್ರಿಕೆಟಿಗನಿಗೆ ಲೈಂಗಿಕ ದೌರ್ಜನ್ಯದ ಆರೋಪದಡಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯ 8 ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲ್ಲೇರಿದ್ದ ಸಂದೀಪ್ ಲಮಿಚಾನೆ ಇದೀಗ ದೋಷಮುಕ್ತರಾಗಿದ್ದಾರೆ.
ಮಂಗಳವಾರ ಮತ್ತು ಬುಧವಾರ (ಮೇ 14 ಮತ್ತು 15) ನಡೆದ ಕೋರ್ಟ್ ಕಲಾಪದ ನಂತರ, ನ್ಯಾಯಾಲಯವು ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೆ ಹೈಕೋರ್ಟ್ ನ್ಯಾಯಾಧೀಶರಾದ ಸುದರ್ಶನ್ ದೇವ್ ಭಟ್ಟ ಮತ್ತು ಅಂಜು ಉಪೇತ್ರಿ ಅವರು ಲಮಿಚಾನೆ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಇದರೊಂದಿಗೆ ಸಂದೀಪ್ ಲಮಿಚಾನೆ ಅತ್ಯಾಚಾರದ ಆರೋಪದಿಂದ ಬಂಧಮುಕ್ತರಾಗಿದ್ದಾರೆ.
ಏನಿದು ಪ್ರಕರಣ?
2022ರ ಸೆಪ್ಟೆಂಬರ್ 7 ರಂದು ನೇಪಾಳ ತಂಡದ ನಾಯಕರಾಗಿದ್ದ ಸಂದೀಪ್ ಲಮಿಚಾನೆ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ 17 ವರ್ಷ ವಯಸ್ಸಿನ ಯುವತಿ ಕಠ್ಮಂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿದ ಬಳಿಕ ವಿಚಾರಣೆಗೆ ಆಗಮಿಸುವಂತೆ ಸಂದೀಪ್ ಲಮಿಚಾನೆಗೆ ತಿಳಿಸಲಾಗಿತ್ತು.
ಆದರೆ ಈ ವೇಳೆ ಸಂದೀಪ್ ಲಮಿಚಾನೆ ವೆಸ್ಟ್ ಇಂಡೀಸ್ನಲ್ಲಿ ಕೆರಿಬಿಯರ್ ಪ್ರೀಮಿಯರ್ ಲೀಗ್ ಆಡುತ್ತಿದ್ದರು. ಹೀಗಾಗಿ ವಿಚಾರಣೆಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು. ಇದಾದ ಬಳಿಕ ಸಿಪಿಎಲ್ ಟೂರ್ನಿ ಮುಗಿದರೂ ಯುವ ಕ್ರಿಕೆಟಿಗ ಸ್ವದೇಶಕ್ಕೆ ಮರಳಿರಲಿಲ್ಲ. ಹೀಗಾಗಿ ಸಂದೀಪ್ ಲಮಿಚಾನೆ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿತ್ತು. ಆ ಬಳಿಕ ತವರಿಗೆ ಆಗಮಿಸಿದ ಸಂದೀಪ್ ಲಾಮಿಚಾನೆಯನ್ನು ಏರ್ಪೋರ್ಟ್ನಲ್ಲಿ ಬಂಧಿಸಲಾಗಿತ್ತು.
ಇನ್ನು ಅತ್ಯಾಚಾರದ ದೂರು ನೀಡಿದ ಹದಿಹರೆಯದ ಹುಡುಗಿ ತಾನು ಲಮಿಚಾನೆ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಳು. ಅಲ್ಲದೆ ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅವರೊಂದಿಗೆ ಸಂಪರ್ಕದಲ್ಲಿದ್ದೆ ಎಂದು ತಿಳಿಸಿದ್ದಳು. ನೇಪಾಳ ಕ್ರಿಕೆಟ್ ತಂಡದ ಕೀನ್ಯಾಗೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ನನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು.
ರಾತ್ರಿ 8 ಗಂಟೆಗೆ ಗೇಟ್‌ಗಳನ್ನು ಮುಚ್ಚಿದ್ದರಿಂದ ಹಾಸ್ಟೆಲ್ಗೆ ಹಿಂತಿರುಗಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ನನ್ನನ್ನು ಕಠ್ಮಂಡುವಿನ ಹೋಟೆಲ್ನಲ್ಲಿ ಉಳಿಸಿಕೊಂಡಿದ್ದರು. ಅಲ್ಲದೆ ಈ ವೇಳೆ ತನ್ನ ಮೇಲೆ ಅತ್ಯಾಚಾರ ಎಸೆಗಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಳು.
ಈ ಆರೋಪ ಸಾಬೀತಾದ ಹಿನ್ನಲೆ ಕಠ್ಮಂಡು ಜಿಲ್ಲಾ ನ್ಯಾಯಾಲಯದ ಏಕಸದಸ್ಯ ಪೀಠವು ಸಂದೀಪ್ ಲಮಿಚಾನೆ ಅವರಿಗೆ 8 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ 3 ಲಕ್ಷ ರೂ. ದಂಡ ಮತ್ತು ಸಂತ್ರಸ್ತೆಗೆ 2 ಲಕ್ಷ ರೂ. ಪರಿಹಾರವನ್ನು ನೀಡುವಂತೆ ಆದೇಶ ನೀಡಿತ್ತು.
ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದರಂತೆ ಕಳೆದ 4 ತಿಂಗಳುಗಳ ಕಾಲ ನಡೆದ ವಾದ-ಪ್ರತಿವಾದ, ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಲಮಿಚಾನೆ ದೋಷ ಮುಕ್ತರಾಗಿದ್ದಾರೆ. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ನೇಪಾಳ ತಂಡದ ಆಯ್ಕೆಗೆ ಲಭ್ಯರಿರಲಿದ್ದಾರೆ.
ಇದನ್ನೂ ಓದಿ: IPL 2024: ಮತ್ತೆ ಮೈದಾನದಲ್ಲೇ ಕೆಎಲ್ ರಾಹುಲ್ ಜೊತೆ LSG ಮಾಲೀಕನ ಚರ್ಚೆ..!
ಸಂದೀಪ್ ಲಮಿಚಾನೆ ಪ್ರದರ್ಶನ:
ನೇಪಾಳ ಪರ 30 ಏಕದಿನ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ 22 ರ ಹರೆಯದ ಸಂದೀಪ್ ಲಾಮಿಚಾನೆ ಕ್ರಮವಾಗಿ 69 ಮತ್ತು 85 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯಗಳಿಂದ 13 ವಿಕೆಟ್ಗಳನ್ನು ಕಬಳಿಸಿ ಮಿಂಚಿದ್ದರು.
Published On - 5:35 pm, Wed, 15 May 24