RCB VS ಡೆಲ್ಲಿ ಪಂದ್ಯದ ವೇಳೆ ಕಳಪೆ ಅಹಾರ ನೀಡಿದ ಆರೋಪ, ಕೆಎಸ್ಸಿಎ ವಿರುದ್ಧ ಎಫ್ಐಆರ್
17ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಮತ್ತು ಆರ್ಸಿಬಿ ನಡುವೆ ಮೇ 12ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ವೇಳೆ ಪ್ರೇಕ್ಷಕರಿಗೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮ್ಯಾನೇಜ್ ಮೆಂಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು, (ಮೇ 15): ಡೆಲ್ಲಿ ಮತ್ತು ರಾಯಲ್ ಚಾಲೆಂರ್ಜಸ್ ಬೆಂಗಳೂರು (DC vs RCB) ನಡುವಿನ ಪಂದ್ಯದ ವೇಳೆ ಕಳಪೆ ಆಹಾರ ನೀಡಿದ್ದಾರೆ ಎಂದು ರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮ್ಯಾನೇಜ್ ಮೆಂಟ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಮತ್ತು ಆರ್ಸಿಬಿ ನಡುವೆ ಮೇ 12ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M.Chinnaswamy Stadium) ನಡೆದಿದ್ದ ಪಂದ್ಯದ ವೇಳೆ ಪ್ರೇಕ್ಷಕರಿಗೆ ಕಳಪೆ ಆಹಾರ ನೀಡಿದ್ದಾರೆ ಎಂದು ಆರೋಪಿಸಿ ಪ್ರೇಕ್ಷಕ ಚೈತನ್ಯ ಎನ್ನುವರು ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೆಎಸ್ಸಿಎ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೇ 12ರಂದು ಐಪಿಎಲ್ ವೀಕ್ಷಣೆ ಬಂದಿದ್ದ 23 ವರ್ಷದ ಚೈತನ್ಯ ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಟ್ಯಾಂಡಿಗೆ ಕ್ಯಾಂಟಿನ್ ನಿಂದ ಊಟ ಸೇವಿಸಿದ್ದಾರೆ. ನಂತರ ಕೆಲವೇ ನಿಮಿಷಗಳಲ್ಲಿ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕುಳಿತುಕೊಂಡಿದ್ದ ಜಾಗದಲ್ಲಿಯೇ ಕುಸಿದುಬಿದ್ದಿದ್ದಾನೆ. ಕೂಡಲೇ ಸ್ಟೇಡಿಯಂ ಸಿಬ್ಬಂದಿ ಚೈತನ್ಯನನ್ನು ಆ್ಯಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರು ತಪಾಸಣೆ ಮಾಡಿದ್ದು, ಫುಡ್ ಪಾಯಿಸನ್ ಆಗಿದೆ ಎಂದು ದೃಢಡಿಸಿದ್ದಾರೆ.
ಬಳಿಕ ಚೈತನ್ಯ ಅವರು ತಮ್ಮ ಆರೋಗ್ಯ ಹದಗೆಡಲು ಕ್ಯಾಂಟಿನ್ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಕೆಎಸ್ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ವೇಳೆ ಕಳಪೆ ಆಹಾರ ನೀಡುತ್ತಿರುವ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಇಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಇಲ್ಲಿನ ಆಹಾರ ವಿತರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿರುವ ಉದಾಹರಣೆಗಳು ಇವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ