
ಐಪಿಎಲ್ 2025 (IPL 2025) ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಪ್ರದರ್ಶನ ವಿಶೇಷವೇನು ಆಗಿರಲಿಲ್ಲ. ಸತತ ಸೋಲುಗಳ ಫಲವಾಗಿ ತಂಡಕ್ಕೆ ಪ್ಲೇಆಫ್ ತಲುಪಲು ಕೂಡ ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಾಜಸ್ಥಾನ ರಾಯಲ್ಸ್ ತಂಡವು ಮುಂದಿನ ಸೀಸನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಅಖಾಡಕ್ಕಿಳಿಯಲು ಚಿಂತಿಸಿದೆ ಎಂದು ವರದಿಯಾಗಿದೆ. ಇದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ನಾಯಕ ಸಂಜು ಸ್ಯಾಮ್ಸನ್ (Sanju Samson) ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದ್ದು, ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ವರದಿಗಳ ಪ್ರಕಾರ ಸಂಜು ಸ್ಯಾಮ್ಸನ್ ಅವರ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಒಪ್ಪಂದ ಬಹುತೇಕ ದೃಢಪಟ್ಟಿದ್ದು, ಮುಂದಿನ ಸೀಸನ್‌ನಿಂದ ಅವರು ಸಿಎಸ್‌ಕೆ (CSK) ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳುತ್ತಿವೆ. ಆದರೆ ಈ ವರದಿಯಲ್ಲಿ ಎಷ್ಟು ನಿಜಾಂಶವಿದೆ ಎಂಬುದು ಇನ್ನಷ್ಟೇ ಹೊರಬರಬೇಕಿದೆ.
ವಾಸ್ತವವಾಗಿ, ಐಪಿಎಲ್‌ನಲ್ಲಿ ಟ್ರೇಡ್ ವಿಂಡೋ ಪ್ರಸ್ತುತ ಸೀಸನ್ ಅಂತ್ಯವಾದ 7 ದಿನಗಳ ನಂತರದಿಂದ ಮುಂದಿನ ಸೀಸನ್ನ ಹರಾಜಿಗೆ 7 ದಿನಗಳ ಬಾಕಿ ಇರುವವರೆಗೆ ತೆರೆದಿರುತ್ತದೆ. ಈ ಅವಧಿಯಲ್ಲಿ, ಎಲ್ಲಾ ತಂಡಗಳು ತಮ್ಮ ಆಟಗಾರರನ್ನು ವಿನಿಮಯ ಮಾಡಿಕೊಳ್ಳಬಹುದು. ಆ ಪ್ರಕಾರ, ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆಗೆ ಕರೆತರಲು ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ಮುಂದಿನ ಸೀಸನ್‌ನಲ್ಲಿ ಅವರು ಸಿಎಸ್‌ಕೆ ತಂಡದ ಭಾಗವಾಗುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ಇದರ ಜೊತೆಗೆ ಕೆಲವು ನೆಟ್ಟಿಗರು, ರಾಜಸ್ಥಾನ್ ರಾಯಲ್ಸ್‌ನ ಡ್ರೆಸ್ಸಿಂಗ್ ಕೋಣೆಯಲ್ಲಿ ಎಲ್ಲವೂ ಸರಿಯಾಗಿಲ್ಲ, ಇದರಿಂದಾಗಿ ಸಂಜು ತಂಡವನ್ನು ತೊರೆಯಬೇಕಾಗಬಹುದು ಎಂದು ಹೇಳಿಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ಇತರ ತಂಡಗಳ ಪರ ಆಡಿದ್ದ ಸಂಜು, 2018 ರಲ್ಲಿ ಮತ್ತೆ ರಾಜಸ್ಥಾನ್ ತಂಡವನ್ನು ಸೇರಿಕೊಂಡರು. ಆ ಬಳಿಕ ಅವರನ್ನು 2021 ರಲ್ಲಿ ಈ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಅವರ ನಾಯಕತ್ವದಲ್ಲೇ 2022 ರಲ್ಲಿ ತಂಡ ಫೈನಲ್‌ಗೇರಿತ್ತು. ಹೀಗಾಗಿ ಸಂಜುರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳಲ್ಲ. ಆದಾಗ್ಯೂ ಈಗ ಹರಿದಾಡುತ್ತಿರುವ ಸುದ್ದಿಗಳನ್ನು ಸಹ ತಳ್ಳಿ ಹಾಕುವಂತಿಲ್ಲ.
ಸಧ್ಯಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಹರಿದಾಡುತ್ತಿದೆ. ಇದನ್ನು ಯಾವುದೇ ಅಧಿಕೃತ ಮೂಲ ಅಥವಾ ಫ್ರಾಂಚೈಸಿ ದೃಢಪಡಿಸಿಲ್ಲ. ಬಿಸಿಸಿಐ ಅಥವಾ ಐಪಿಎಲ್‌ನಿಂದ ಅಂತಹ ಯಾವುದೇ ಹೇಳಿಕೆ ಬಂದಿಲ್ಲ. ಹಾಗಾಗಿ, ಸದ್ಯಕ್ಕೆ ಇದು ಕೇವಲ ವದಂತಿಯಾಗಿದೆ.
IPL 2025: ನಾಯಕನಾಗಿ ಹೊಸ ದಾಖಲೆ ಬರೆದ ಸಂಜು ಸ್ಯಾಮ್ಸನ್
ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 10 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದರ ಜೊತೆಗೆ ನಾಯಕ ಸಂಜು ಸ್ಯಾಮ್ಸನ್ ಗಾಯದಿಂದಾಗಿ ಕೇವಲ 9 ಪಂದ್ಯಗಳನ್ನು ಮಾತ್ರ ಆಡಿದ್ದರು. ಆಡಿದ ಕೆಲವು ಪಂದ್ಯಗಳಲ್ಲಿ ಅವರು ಕೇವಲ ಬ್ಯಾಟಿಂಗ್ ಮಾತ್ರ ಮಾಡಿದ್ದರು. ಇದು ರಾಜಸ್ಥಾನದ ಆಟದ ಮೇಲೂ ಪರಿಣಾಮ ಬೀರಿತು. ಆದಾಗ್ಯೂ, ಆರ್‌ಆರ್ ತಂಡವು ಈಗ ಈ ಸೀಸನ್ನ ಸೋಲನ್ನು ಮರೆತು ಬಲವಾದ ಪುನರಾಗಮನ ಮಾಡಲು ಬಯಸುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ