‘ಐಪಿಎಲ್ ವೇಳೆ ದೈಹಿಕ ಕಿರುಕುಳ ನೀಡಿದ್ರು’; ಯಶ್ ದಯಾಳ್ ವಿರುದ್ಧ ದೂರು ನೀಡಿದ ಮತ್ತೋರ್ವ ಯುವತಿ

Yash Dayal: ಆರ್​ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಜೈಪುರದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದು ಎರಡನೇ ಪ್ರಕರಣವಾಗಿದ್ದು, ಮೊದಲ ಪ್ರಕರಣ ಗಾಜಿಯಾಬಾದ್‌ನಲ್ಲಿ ದಾಖಲಾಗಿತ್ತು. ಎರಡನೇ ಪ್ರಕರಣಗಳಲ್ಲಿ ಅಪ್ರಾಪ್ತೆ ದೌರ್ಜನ್ಯಕ್ಕೊಳಗಾಗಿರುವುದು ವರದಿಯಾಗಿದೆ. ಹೀಗಾಗಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ.

‘ಐಪಿಎಲ್ ವೇಳೆ ದೈಹಿಕ ಕಿರುಕುಳ ನೀಡಿದ್ರು’; ಯಶ್ ದಯಾಳ್ ವಿರುದ್ಧ ದೂರು ನೀಡಿದ ಮತ್ತೋರ್ವ ಯುವತಿ
Yash Dayal

Updated on: Jul 25, 2025 | 8:51 PM

ಆರ್​ಸಿಬಿ (RCB) ವೇಗಿ ಯಶ್ ದಯಾಳ್​ಗೆ (Yash Dayal) ದಿನೇ ದಿನೇ ಸಂಕಷ್ಟಗಳು ಹೆಚ್ಚಾಗುತ್ತಲೇ ಇವೆ. ವಾಸ್ತವವಾಗಿ ತಿಂಗಳ ಹಿಂದೆ ಯಶ್ ದಯಾಳ್ ವಿರುದ್ಧ ಯುವತಿಯೊಬ್ಬಳು ದೈಹಿಕ ಕಿರುಕುಳದ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರಿನನ್ವಯ ಪೊಲೀಸರು ಕೂಡ ದಯಾಳ್ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಿದ್ದರು. ಈ ಪ್ರಕರಣ ತಣ್ಣಗಾಗುವ ಮುನ್ನವೇ ಇದೀಗ ಯಶ್ ದಯಾಳ್ ವಿರುದ್ಧ ಮತ್ತೋರ್ವ ಯುವತಿ ದೈಹಿಕ ಕಿರುಕುಳದ ಆರೋಪ ಹೊರಿಸಿದ್ದು, ಈ ವಿಚಾರವಾಗಿ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ದಯಾಳ್ ಅವರ ವಿರುದ್ಧ ಮತ್ತೊಂದು ಎಫ್‌ಐಆರ್ ಕೂಡ ದಾಖಲಾಗಿದೆ.

ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ

ಕ್ರಿಕೆಟ್ ಬಗ್ಗೆ ಸಲಹೆಗಳನ್ನು ನೀಡುವುದಾಗಿ ತನ್ನೊಂದಿಗೆ ಆತ್ಮೀಯತೆ ಹೆಚ್ಚಿಸಿಕೊಂಡಿದ್ದ ದಯಾಳ್, ಎರಡು ವರ್ಷಗಳ ಕಾಲ ನನ್ನನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಿ ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಗಮನಿಸಬೇಕಾದ ಸಂಗತಿಯೆಂದರೆ, ಯಶ್ ದಯಾಳ್ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಂದರ್ಭದಲ್ಲಿ ಆಕೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇತ್ತು ಎಂದು ವರದಿಯಾಗಿದೆ. ಹೀಗಾಗಿ ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಯುವತಿ ದೂರು ನೀಡಿರುವ ಪ್ರಕಾರ, ಎರಡು ವರ್ಷಗಳ ಹಿಂದೆ ಐಪಿಎಲ್ ಪಂದ್ಯವನ್ನಾಡಲು ಯಶ್ ದಯಾಳ್ ಜೈಪುರಕ್ಕೆ ಬಂದಿದ್ದರು. ಆ ವೇಳೆ ನಾನು ಅಪ್ರಾಪ್ತ ವಯಸ್ಸಿನವಳಾಗಿದ್ದು ತನ್ನ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಲಹೆ ನೀಡುವ ನೆಪದಲ್ಲಿ ಯಶ್ ದಯಾಳ್ ತನ್ನನ್ನು ಸೀತಾಪುರದಲ್ಲಿರುವ ಹೋಟೆಲ್ ಇಂಟರ್ ಕಾಂಟಿನೆಂಟಲ್‌ಗೆ ಕರೆಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಮೊದಲ ಎಫ್‌ಐಆರ್‌ನಲ್ಲಿ ಏನಿದೆ?

ಜುಲೈ 6 ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಯಶ್ ದಯಾಳ್ ವಿರುದ್ಧ ಹುಡುಗಿಯೊಬ್ಬಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಳು. ಕ್ರಿಕೆಟಿಗ ಯಶ್ ದಯಾಳ್ ಮದುವೆಯ ಆಮಿಷವೊಡ್ಡುವ ಮೂಲಕ ತನ್ನನ್ನು ಲಿವ್-ಇನ್ ಸಂಬಂಧದಲ್ಲಿ ಇಟ್ಟುಕೊಂಡಿದ್ದರು ಎಂದು ಹುಡುಗಿ ಆರೋಪಿಸಿದ್ದಳು. ಸುಮಾರು ಐದು ವರ್ಷಗಳ ಕಾಲ ದಯಾಳ್ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದು, ಇದೀಗ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಳು.

Yash Dayal: ಲೈಂಗಿಕ ಕಿರುಕುಳ ಪ್ರಕರಣ; ಯುವತಿ ವಿರುದ್ಧ ಯಶ್ ದಯಾಳ್ ಪ್ರತಿ ದೂರು

ಯಶ್ ದಯಾಳ್ ಬಂಧನಕ್ಕೆ ತಡೆ

ಗಾಜಿಯಾಬಾದ್‌ನಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ಧ ಕ್ರಿಕೆಟಿಗ ಯಶ್ ದಯಾಳ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಯಶ್ ದಯಾಳ್ ಅವರ ವಾದವನ್ನು ಆಲಿಸಿದ ನಂತರ, ಅಲಹಾಬಾದ್ ಹೈಕೋರ್ಟ್ ಕ್ರಿಕೆಟಿಗ ಯಶ್ ದಯಾಳ್ ಬಂಧನಕ್ಕೆ ತಡೆ ನೀಡಿತು. ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವ ಹುಡುಗಿ ನನ್ನಿಂದ ಲಕ್ಷಗಟ್ಟಲೇ ಹಣವನ್ನು ಪಡೆದುಕೊಂಡಿದ್ದು, ಅದನ್ನು ವಾಪಸ್ ಕೇಳಿದಾಗ ಆಕೆ ನನ್ನ ವಿರುದ್ಧ ಈ ರೀತಿಯ ಆರೋಪಗಳನ್ನು ಹೊರಿಸುತ್ತಿದ್ದಾಳೆ ಎಂದು ಯಶ್ ದಯಾಳ್ ಸ್ಪಷ್ಟನೆ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Fri, 25 July 25