ಶಾಹಿದ್ ಅಫ್ರಿದಿಯ ಸೋದರ ಸಂಬಂಧಿಯನ್ನು ಗುಂಡಿಕ್ಕಿ ಕೊಂದಿದ್ದ ಬಿಎಸ್‌ಎಫ್
Shahid Afridi's Anti-India Stance: ಪಹಲ್ಗಾಮ್ ದಾಳಿಯ ನಂತರ ಶಾಹಿದ್ ಅಫ್ರೀದಿ ಅವರ ಭಾರತ ವಿರೋಧಿ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ. 2003ರಲ್ಲಿ ಅವರ ಸಂಬಂಧಿಯನ್ನು ಬಿಎಸ್ಎಫ್ ಹತ್ಯೆ ಮಾಡಿದ ಘಟನೆ ಇದರ ಹಿಂದಿನ ಕಾರಣವಾಗಿರಬಹುದು. ಅಫ್ರೀದಿ ಅವರ ಸಂಬಂಧಿ ಉಗ್ರವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದನೆಂದು ವರದಿಯಾಗಿದೆ. ಅಫ್ರೀದಿ ಈ ಸಂಬಂಧವನ್ನು ನಿರಾಕರಿಸಿದ್ದರೂ, ಈ ಘಟನೆಯು ಅವರ ಭಾರತ ವಿರೋಧಿ ಭಾವನೆಗಳಿಗೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam terror attack) 26 ಅಮಾಯಕರು ಪ್ರಾಣ ಕಳೆದುಕೊಂಡರು. ಈ ಪೈಶಾಚಿಕ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡವಿರುವುದು ಖಚಿತವಾದ ಬಳಿಕ ಭಾರತ,ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಲ್ಲೊಲ್ಲ ಕಲ್ಲೋಲ ಉಂಟಾಗಿದ್ದು, ಕೈಲಾಗದ ಪಾಕ್ ಮುಖ್ಯಸ್ಥರು ಭಾರತದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಇವರುಗಳಲ್ಲಿ ಕೆಲವು ಪಾಕಿಸ್ತಾನಿ ಮಾಜಿ ಕ್ರಿಕೆಟಿಗರೂ ಇದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಕೂಡ ಕಳೆದ ಕೆಲವು ದಿನಗಳಿಂದ ಭಾರತದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಭಾರತೀಯ ಸೇನೆಯನ್ನೂ ಗುರಿಯಾಗಿಸಿಕೊಂಡು ಈ ಕೃತ್ಯವನ್ನು ಭಾರತವೇ ನಡೆಸಿದೆ ಎಂದು ಆರೋಪಿಸಿದ್ದಾರೆ. ಅಷ್ಟಕ್ಕೂ ಅಫ್ರಿದಿ ಭಾರತದ ವಿರುದ್ಧ ಹೀಗೆ ಮುಗಿಬೀಳುವ ಕಾರಣ ಏನು ಎಂಬುದನ್ನು ಹುಡುಕತ್ತಾ ಹೋದಾಗ ಸಿಕ್ಕಿದ್ದು 22 ವರ್ಷಗಳ ಹಿಂದೆ ನಡೆದ ಅದೊಂದು ಘಟನೆ.
ಸೋದರಸಂಬಂಧಿಗೆ ಗುಂಡಿಕ್ಕಿದ್ದ ಬಿಎಸ್ಎಫ್
ಈ ಘಟನೆ 2003 ರ ವರ್ಷದ್ದು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಭಯೋತ್ಪಾದಕ ಸೋದರಸಂಬಂಧಿ ಶಕೀಬ್ ಅವರನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಬೆನ್ನಟ್ಟಿ ಗುಂಡು ಹಾರಿಸಿ ಕೊಂದಿತ್ತು. ಸೆಪ್ಟೆಂಬರ್ 7, 2023 ರಂದು ಅನಂತ್‌ನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಶಕೀಬ್ ಅವರನ್ನು ಬಿಎಸ್‌ಎಫ್ ಹತ್ಯೆ ಮಾಡಿತ್ತು. ಅಂದಿನಿಂದ ಶಾಹಿದ್ ಅಫ್ರಿದಿ ಭಾರತವನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಬಿಎಸ್ಎಫ್ ಈ ರೀತಿಯ ಕ್ರಮ ಕೈಗೊಳ್ಳಲು ಕಾರಣವು ಇದ್ದು, ಶಾಹಿದ್ ಅಫ್ರಿದಿ ಅವರ ಸೋದರಸಂಬಂಧಿ ಶಕೀಬ್ ಉಗ್ರ ಸಂಘಟನೆ ಹರ್ಕತ್-ಉಲ್-ಅನ್ಸಾರ್‌ನ ಬೆಟಾಲಿಯನ್ ಕಮಾಂಡರ್ ಆಗಿದ್ದರು. ಅಲ್ಲದೆ ಶಕೀಬ್ ಭಯೋತ್ಪಾದಕ ಹಫೀಜ್ ಸಯೀದ್ ಜೊತೆ ಸಂಬಂಧ ಹೊಂದಿದ್ದರು. ಹಾಗೆಯೇ ಶಕೀಬ್ ಬಳಿ ಸಿಕ್ಕ ಕೆಲವು ದಾಖಲೆಗಳು ಶಾಹಿದ್ ಅಫ್ರಿದಿಯೊಂದಿಗೆ ಅವರ ಸಂಪರ್ಕದಲ್ಲಿದ್ದರು ಎಂಬುದನ್ನು ಸಾಬೀತುಪಡಿಸುತ್ತವೆ ಎಂದು ಬಿಎಸ್‌ಎಫ್ ಆಗ ಹೇಳಿತ್ತು. ಆದರೆ ಆ ಸಮಯದಲ್ಲಿ ಶಾಹಿದ್ ಅಫ್ರಿದಿ ಇದನ್ನು ನಿರಾಕರಿಸಿದ್ದರು.
ಪೇಶಾವರ ನಿವಾಸಿಯಾಗಿದ್ದ ಶಕೀಬ್
ಶಕೀಬ್ ಪೇಶಾವರ ನಿವಾಸಿಯಾಗಿದ್ದು, ಕೊಲ್ಲಲ್ಪಡುವ ಮೊದಲು ಸುಮಾರು ಒಂದೂವರೆ ವರ್ಷಗಳ ಕಾಲ ಅನಂತನಾಗ್ ಪ್ರದೇಶದಲ್ಲಿ ಸಕ್ರಿಯನಾಗಿದ್ದ. ಆದರೆ ಆ ಸಮಯದಲ್ಲಿ ಶಾಹಿದ್ ಅಫ್ರಿದಿ, ಉಗ್ರ ಶಕೀಬ್ ಜೊತೆ ಯಾವುದೇ ರೀತಿಯ ಸಂಪರ್ಕವಿಲ್ಲ ಎಂದಿದ್ದರು. ಪಠಾಣ್ ಕುಟುಂಬ ತುಂಬಾ ದೊಡ್ಡದಾಗಿದ್ದು, ನಾನು ನನ್ನ ಅನೇಕ ಸೋದರಸಂಬಂಧಿಗಳನ್ನು ಮರೆತಿದ್ದೇನೆ. ನನ್ನ ಸೋದರಸಂಬಂಧಿ ಯಾರು ಮತ್ತು ಯಾರು ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ ಎಂದು ಶಾಹಿದ್ ಅಫ್ರಿದಿ ಹೇಳಿರುವುದಾಗಿ ಪತ್ರಿಕೆಗಳು ಉಲ್ಲೇಖಿಸಿದ್ದವು.
ಭಾರತದ ವಿರುದ್ಧ ವಿಷ ಕಾರಿದ್ದ ಶಾಹಿದ್ ಅಫ್ರಿದಿಗೆ ಬ್ಯಾನ್ ಶಾಕ್ ನೀಡಿದ ಭಾರತ ಸರ್ಕಾರ
ಭಾರತ ತನ್ನದೇ ಜನರನ್ನು ಕೊಲ್ಲುತ್ತಿದೆ
ಆದರೀಗ ಪಹಲ್ಗಾಮ್ ದಾಳಿಯಲ್ಲಿ ಭಾರತದ್ದೇ ಕೈವಾಡವಿದೆ ಎಂದು ಆರೋಪಿಸಿರುವ ಶಾಹಿದ್ ಅಫ್ರಿದಿ, ‘ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಒಂದು ಗಂಟೆ ಕಾಲ ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದರೂ 8 ಲಕ್ಷ ಸೈನಿಕರಲಿ ಒಬ್ಬನೇ ಒಬ್ಬ ಸೈನಿಕ ಕೂಡ ಬರಲಿಲ್ಲ. ಆದರೀಗ ಭಾರತ, ಪಾಕಿಸ್ತಾನವನ್ನು ದೂಷಿಸುತ್ತಿದೆ. ಭಾರತವೇ ಭಯೋತ್ಪಾದನೆಯಲ್ಲಿ ತೊಡಗಿದ್ದು, ತನ್ನದೇ ಆದ ಜನರನ್ನು ಕೊಲ್ಲುತ್ತಿದೆ. ಆದರೆ ಆ ನಂತರ ಪಾಕಿಸ್ತಾನವನ್ನು ದೂಷಿಸುತ್ತಿದೆ. ಯಾವುದೇ ದೇಶ ಅಥವಾ ಧರ್ಮ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ನಾವು ಯಾವಾಗಲೂ ಶಾಂತಿಯನ್ನು ಬೆಂಬಲಿಸುತ್ತೇವೆ. ಇಸ್ಲಾಂ ನಮಗೆ ಶಾಂತಿಯನ್ನು ಕಲಿಸುತ್ತದೆ, ಪಾಕಿಸ್ತಾನ ಅಂತಹ ಚಟುವಟಿಕೆಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಅಫ್ರಿದಿ ಹೇಳಿಕೆ ನೀಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Fri, 2 May 25
