Bangladesh vs England: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 50 ರನ್ಗಳ ಜಯ ಸಾಧಿಸಿದೆ. ಚತ್ತೊಗ್ರಾಮ್ನ ಝಹುರ್ ಅಹ್ಮದ್ ಚೌಧರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು 48.5 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿತ್ತು. 247 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಶಕೀಬ್ ಅಲ್ ಹಸನ್ (Shakib Al Hasan) ಅವರ ಸ್ಪಿನ್ ದಾಳಿಗೆ ತತ್ತರಿಸಿತು. ಪರಿಣಾಮ ಕೇವಲ 196 ರನ್ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ ತಂಡವು 50 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ 10 ಓವರ್ಗಳಲ್ಲಿ ಕೇವಲ 35 ರನ್ ನೀಡಿದ ಶಕೀಬ್ ಅಲ್ 4 ಪ್ರಮುಖ ವಿಕೆಟ್ಗಳನ್ನು ಉರುಳಿಸಿದ್ದರು. ಈ ನಾಲ್ಕು ವಿಕೆಟ್ಗಳೊಂದಿಗೆ ಬಾಂಗ್ಲಾದೇಶ್ ಆಲ್ರೌಂಡರ್ ಏಕದಿನ ಕ್ರಿಕೆಟ್ನಲ್ಲಿ 300 ವಿಕೆಟ್ ಸಾಧನೆ ಮಾಡಿದರು. ಈ ಮೂಲಕ 300 ವಿಕೆಟ್ ಕಬಳಿಸಿದ ಬಾಂಗ್ಲಾದೇಶದ ಮೊದಲ ಆಟಗಾರ ಎಂಬ ವಿಶೇಷ ದಾಖಲೆಯನ್ನು ಶಕೀಬ್ ಅಲ್ ಹಸನ್ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: WTC Final: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು..!
ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್ನಲ್ಲಿ 300 ವಿಕೆಟ್ ಹಾಗೂ 6 ಸಾವಿರಕ್ಕೂ ಅಧಿಕ ರನ್ಗಳಿಸಿದ ವಿಶ್ವದ ಮೂರನೇ ಆಲ್ರೌಂಡರ್ ಎಂಬ ಹೆಗ್ಗಳಿಕೆಗೂ ಶಕೀಬ್ ಅಲ್ ಹಸನ್ ಪಾತ್ರರಾದರು. ಇದಕ್ಕೂ ಮುನ್ನ ಶ್ರೀಲಂಕಾದ ಸನತ್ ಜಯಸೂರ್ಯ ಹಾಗೂ ಪಾಕಿಸ್ತಾನದ ಶಹೀದ್ ಅಫ್ರಿದಿ ಮಾತ್ರ ಈ ಸಾಧನೆ ಮಾಡಿದ್ದರು.