Umran Malik: ಉಮ್ರಾನ್ ಮಲಿಕ್ ಆ ದಾಖಲೆ ಮುರಿಯಬೇಕು; ಶೋಯಬ್ ಅಖ್ತರ್ ಹೇಳಿದ್ದು ಯಾವ ದಾಖಲೆಯ ಕುರಿತು?

| Updated By: shivaprasad.hs

Updated on: May 15, 2022 | 10:09 AM

Shoaib Akhtar: ಉಮ್ರಾನ್ ಮಲಿಕ್ ಪ್ರಸ್ತುತ ತಮ್ಮ ಬೆಂಕಿಯ ವೇಗದಿಂದ ಎಲ್ಲೆರ ಮನಗೆಲ್ಲುತ್ತಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲಿ ಮುರಿಯದ ದಾಖಲೆಯಾಗಿರುವ 100 ಮೈಲು ವೇಗದ ಎಸೆತವನ್ನು ಉಮ್ರಾನ್ ಮುರಿಯಬೇಕು ಎನ್ನುವ ಹಂಬಲ ಹೇಳಿಕೊಂಡಿದ್ದಾರೆ ಆ ದಾಖಲೆಯ ಒಡೆಯ ಶೋಯಬ್ ಅಖ್ತರ್.

Umran Malik: ಉಮ್ರಾನ್ ಮಲಿಕ್ ಆ ದಾಖಲೆ ಮುರಿಯಬೇಕು; ಶೋಯಬ್ ಅಖ್ತರ್ ಹೇಳಿದ್ದು ಯಾವ ದಾಖಲೆಯ ಕುರಿತು?
ಶೋಯಬ್ ಅಖ್ತರ್, ಉಮ್ರಾನ್ ಮಲಿಕ್
Follow us on

ಪ್ರಸ್ತುತ ಭಾರತದಲ್ಲಿ ಪ್ರತಿಭಾವಂತ ವೇಗಿಗಳದ್ದೇ ಸುದ್ದಿ. ಈ ಬಾರಿಯ ಐಪಿಎಲ್​ನಲ್ಲಂತೂ ವೇಗಿಗಳದ್ದೇ ಕಾರುಬಾರು. ಅದರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ (Umran Malik) ಪ್ರಮುಖ ಹೆಸರು. ತಮ್ಮ ಮಾರಕ ವೇಗದೊಂದಿಗೆ ವಿಕೆಟ್​​ಗಳನ್ನೂ ಪಡೆದಿರುವ ಜಮ್ಮುವಿನ ಈ ವೇಗಿ ಸದ್ಯ ದೇಶದ ಕಣ್ಮಣಿ. ಅದಾಗ್ಯೂ ಹಿಂದಿನ ಮೂರು ಪಂದ್ಯಗಳಲ್ಲಿ ಉಮ್ರಾನ್​ಗೆ ಅವರ ವೇಗವೇ ಮುಳುವಾಗಿತ್ತು. ಬ್ಯಾಟರ್​ಗಳು ಅವರ ಎಸೆತವನ್ನು ನಿರಾಯಾಸವಾಗಿ ಬೌಂಡರಿಗೆ ಅಟ್ಟುತ್ತಿದ್ದರು. ಈ ಕಾರಣ ಉಮ್ರಾನ್ ಪ್ರತಿಭೆಯ ಬಗ್ಗೆ ಹಲವರು ಸಂಶಯವನ್ನೂ ವ್ಯಕ್ತಪಡಿಸಿದ್ದರು. ಆದರೆ ಕೋಲ್ಕತ್ತಾ ನಡುವಿನ ಪಂದ್ಯದ ಮೂಲಕ 22ರ ಹರೆಯದ ಉಮ್ರಾನ್ ಭರ್ಜರಿ ಕಮ್​ಬ್ಯಾಕ್ ಮಾಡಿದ್ದಾರೆ. 4 ಓವರ್​ಗಳಲ್ಲಿ 33 ರನ್​ಗೆ 3 ವಿಕೆಟ್ ಕಬಳಿಸಿದ ಉಮ್ರಾನ್ ಮಲಿಕ್ ಮತ್ತೆ ಎಲ್ಲರ ಮನಗೆದ್ದಿದ್ದಾರೆ. ವಿಶೇಷವೆಂದರೆ ಉಮ್ರಾನ್ ಪಡೆದ ವಿಕೆಟ್​ಗಳೆಲ್ಲವೂ ವಿಶ್ವದರ್ಜೆ ಬ್ಯಾಟರ್​ಗಳದ್ದು. ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ ಉಮ್ರಾನ್​ಗೆ ವಿಕೆಟ್ ಒಪ್ಪಿಸಿದರು. ಸದ್ಯ ಈ ವೇಗಿಯ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಾಕ್​ ವೇಗಿ ಶೋಯಬ್ ಅಖ್ತರ್ (Shoaib Akhtar) ಮತ್ತೊಮ್ಮೆ ಭಾರತದ ವೇಗಿಯನ್ನು ಹೊಗಳಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ 157 ಕಿಮೀ ವೇಗದ ಎಸೆತ ಎಸೆದು ಎಲ್ಲರ ಹುಬ್ಬೇರಿಸಿದ್ದ ಉಮ್ರಾನ್ ಮಲಿಕ್​ ಮುಂಬರುವ ಟಿ20 ವಿಶ್ವಕಪ್​ಗೆ ಸ್ಥಾನ ಪಡೆಯಲಿದ್ದಾರೆಯೇ ಎಂಬುದು ಸದ್ಯದ ಕುತೂಹಲ. ಈಗಾಗಲೇ ದಿಗ್ಗಜ ಆಟಗಾರರು ಉಮ್ರಾನ್ ಪರ ಬ್ಯಾಟ್ ಬೀಸಿದ್ದಾರೆ. ಭಾರತದ ಪರ ಉಮ್ರಾನ್ ಅತ್ಯುತ್ತಮ ಪ್ರದರ್ಶನ ನೀಡಬೇಕಾದರೆ ಎಸ್​ಆರ್​ಹೆಚ್ ಉಮ್ರಾನ್​ರನ್ನು ಗಾಯಗಳಿಂದ ರಕ್ಷಿಬೇಕು ಎಂದಿದ್ದಾರೆ ಅಖ್ತರ್.

ವಿಶ್ವದಲ್ಲೇ ಮೊದಲ ಬಾರಿಗೆ 100 ಮೈಲು ವೇಗದಲ್ಲಿ (161.3 ಕಿಮೀ/ಗಂ) ಬೆಂಕಿಯ ಚೆಂಡೆಸೆದು ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದ ಶೋಯಬ್ ಅಖ್ತರ್, ಆ ದಾಖಲೆಯನ್ನು ಉಮ್ರಾನ್ ಮಲಿಕ್ ಮುರಿಯಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. ‘‘ಕೆಲವು ದಿನಗಳ ಹಿಂದೆ ನನಗೆ ಯಾರೋ 100 ಮೈಲಿ ವೇಗದಲ್ಲಿ ಚೆಂಡೆಸೆದು 20 ವರ್ಷಗಳು ತುಂಬಿದ್ದಕ್ಕೆ ಶುಭಾಶಯ ಹೇಳಿದ್ದರು. ಇದುವರೆಗೆ ಅದನ್ನು ಯಾರೂ ಬ್ರೇಕ್ ಮಾಡಿಲ್ಲ. ನನ್ನ ಪ್ರಕಾರ ಆ ದಾಖಲೆಯನ್ನು ಮುರಿಯುವವರು ಯಾರಾದರೂ ಇದ್ದೇ ಇರುತ್ತಾರೆ. ಉಮ್ರಾನ್ ಮಲಿಕ್ ಆ ಸಾದನೆ ಮಾಡಿದರೆ ನನಗೆ ಬಹಳ ಖುಷಿ. ಈ ನಡುವೆ ಅವರನ್ನು ಗಾಯದಿಂದ ರಕ್ಷಿಸಬೇಕು. ಈ ಮೂಲಕ ದೀರ್ಘಾವಧಿಯಲ್ಲಿ ಅವರು ಕ್ರಿಕೆಟ್ ಆಡುವಂತೆ ವೇದಿಕೆ ಕಲ್ಪಿಸಿಕೊಡಬೇಕು’’ ಎಂದಿದ್ದಾರೆ ಅಖ್ತರ್.

ಇದನ್ನೂ ಓದಿ
LSG vs RR: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರಾಜಸ್ಥಾನಕ್ಕೆ ಗೆದ್ದರಷ್ಟೆ ಉಳಿಗಾಲ
Andrew Symonds death: ದಾಖಲೆಗಳ ಸರದಾರ ಈ ಆಸೀಸ್ ಆಟಗಾರ; ಆಂಡ್ರ್ಯೂ ಸೈಮಂಡ್ಸ್ ವಿಶೇಷ​​ ರೆಕಾರ್ಡ್​​ಗಳು ಇಲ್ಲಿವೆ
SRH vs KKR: 15 ಸೆಕೆಂಡ್​ಗಳ ನಂತರ ಡಿಆರ್​ಎಸ್​; ಮನವಿಯನ್ನು ಒಪ್ಪದ ಅಂಪೈರ್ ಜತೆ ರಿಂಕು ಸಿಂಗ್ ವಾಗ್ವಾದ​
KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ

ಪ್ರಸ್ತುತ 150 ಕಿಮೀ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುವವರು ವಿರಳ ಎಂದಿರುವ ಅಖ್ತರ್, ‘‘ಉಮ್ರಾನ್ ಆ ವೇಗದಲ್ಲಿ ಸತತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ನನ್ನ ವಿಶ್ವದಾಖಲೆಯನ್ನು ಮುರಿಯಬೇಕು. 100 ಮೈಲು ವೇಗದಲ್ಲಿ ಬೌಲಿಂಗ್ ಮಾಡಿದ ಕ್ಲಬ್​ಗೆ ಅವರೂ ಸೇರಬೇಕು’’ ಎಂದಿದ್ದಾರೆ.

ಇಂತಹ ವಿಶೇಷ ಪ್ರತಿಭೆಯನ್ನು ಕಾಪಾಡಿಕೊಳ್ಳಬೇಕು ಎಂದು ಬಿಸಿಸಿಐಗೆ ಕಿವಿಮಾತನ್ನೂ ಹೇಳಿದ್ದಾರೆ ಶೋಯಬ್ ಅಖ್ತರ್. ‘ವೇಗವಾಗಿ ಓಡುವ ಕಾರು ಅಪಘಾತವಾಗಿ ಇಂಜಿನ್​ಗೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚು. ಅದನ್ನು ಸರಿಯಾಗಿ ನಿಯಂತ್ರಣ ಮಾಡಬೇಕು. ವೈಜ್ಞಾನಿಕವಾಗಿ ಉಮ್ರಾನ್​ಗೆ ಟ್ರೇನಿಂಗ್ ನೀಡಬೇಕು’’ ಎಂದಿದ್ದಾರೆ ಪಾಕ್ ವೇಗಿ.

ಮತ್ತಷ್ಟು ಐಪಿಎಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 am, Sun, 15 May 22