Shreyas Iyer: ಕ್ಯಾಚ್ ಹಿಡಿದ ಖುಷಿಯಲ್ಲಿ ಶ್ರೇಯಸ್ ಅಯ್ಯರ್ ಬೊಂಬಾಟ್ ಡ್ಯಾನ್ಸ್: ವಿಡಿಯೋ ವೈರಲ್
IND vs WI 1st ODI: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರು ಕ್ರೀಸ್ ಕಚ್ಚಿ ಆಡಿ ಭಾರತಕ್ಕೆ ಮಾರಕವಾಗಿದ್ದ ಶಮರ್ ಬ್ರೂಕ್ಸ್ ಅವರನ್ನು ಔಟ್ ಮಾಡಿದಾಗ ಖುಷಿಯಿಂದ ಡ್ಯಾನ್ಸ್ ಕೂಡ ಮಾಡಿದರು.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ರೋಚಕ ಜಯ ಸಾಧಿಸಿದೆ. ಕೊನೆಯ ಓವರ್ನಲ್ಲಿ ನಡೆದ ಹೈಡ್ರಾಮದಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿತು. ಅಂತಿಮ ಹಂತದ ವರೆಗೂ ಕೆರಿಬಿಯನ್ ಬ್ಯಾಟರ್ಗಳು ಗೆಲುವಿಗೆ ಕಠಿಣ ಹೋರಾಟ ನಡೆಸಿದರು. ಆದರೆ, ಮೊಹಮ್ಮದ್ ಸಿರಾಜ್ ಎಸೆತದ 50ನೇ ಓವರ್ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (Sanju Samson) ಅವರ ಚುರುಕುತನ ಪಂದ್ಯದ ಗತಿಯನ್ನೇ ಬದಲಾಯಿಸಿತು. ಶ್ರೇಯಸ್ ಅಯ್ಯರ್ (Shreyas Iyer) ಕೂಡ ಈ ಪಂದ್ಯದಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಬ್ಯಾಟಿಂಗ್ನಲ್ಲಿ 57 ಎಸೆತಗಳನ್ನು ಎದುರಿಸಿದ ಅಯ್ಯರ್ 5 ಫೋರ್ ಹಾಗೂ 2 ಸಿಕ್ಸರ್ ಸಿಡಿಸಿ 54 ರನ್‌ಗಳ ಕಾಣಿಕೆ ನೀಡಿದರು. ಜೊತೆಗೆ ಫೀಲ್ಡಿಂಗ್ನಲ್ಲೂ ಎರಡು ಕ್ಯಾಚ್ ಹಿಡಿದು ತಂಡಕ್ಕೆ ನೆರವಾದರು.
ಅದರಲ್ಲೂ ಅಯ್ಯರ್ ಅವರು ಕ್ರೀಸ್ ಕಚ್ಚಿ ಆಡಿ ಭಾರತಕ್ಕೆ ಮಾರಕವಾಗಿದ್ದ ಶಮರ್ ಬ್ರೂಕ್ಸ್ ಅವರನ್ನು ಔಟ್ ಮಾಡಿದಾಗ ಖುಷಿಯಿಂದ ಡ್ಯಾನ್ಸ್ ಕೂಡ ಮಾಡಿದರು. ಅರ್ಧಶತಕದ ಅಂಚಿನಲ್ಲಿ ಬ್ಯಾಟ್ ಬೀಸುತ್ತಿದ್ದ ಬ್ರೂಕ್ಸ್ 24ನೇ ಓವರ್ನ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಪುಲ್ ಶಾಟ್ ಹೊಡೆಯುವ ಪ್ರಯತ್ನ ಮಾಡಿದರು. ಆದರೆ, ಚೆಂಡು ಬ್ಯಾಟ್ಗೆ ಸರಿಯಾಗಿ ಟೈಮ್ ಆಗದ ಕಾರಣ ದೂರ ಸಾಗಲಿಲ್ಲ. ಡೀಪ್ ಸ್ಕ್ವೇರ್ ಲೆಗ್ನಲ್ಲಿ ನಿಂತಿದ್ದ ಅಯ್ಯರ್ ಕ್ಯಾಚ್ ಹಿಡಿದರು. ಈ ಸಂದರ್ಭ ಅಯ್ಯರ್ ಖುಷಿಯಿಂದ ನೃತ್ಯ ಮಾಡುತ್ತಾ ಸಂಭ್ರಮಾಚರಣೆ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— Guess Karo (@KuchNahiUkhada) July 23, 2022
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ 119 ರನ್ ಬಾರಿಸಿದರು. ಗಿಲ್ ಅರ್ಧಶತಕ ಸಿಡಿಸಿ ಔಟಾದರೆ, ನಂತರ ಶ್ರೇಯಸ್ ಅಯ್ಯರ್ ಜೊತೆಯಾದ ಧವನ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಧವನ್ 97 ರನ್ಗೆ ಬ್ಯಾಟ್ ಕೆಳಗಿಟ್ಟರು. ಇದರ ಬೆನ್ನಲ್ಲೆ ಅರ್ಧಶತಕ ಸಿಡಿಸಿ ಅಯ್ಯರ್ ಕೂಡ ನಿರ್ಗಮಿಸಿದರು. ಭಾರತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು.
309 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ನಂತರ ಖೈಲ್ ಮೇಯೆಯರ್ಸ್ (75) ಹಾಗೂ ಶಮರ್ ಬ್ರೂಕ್ಸ್ (46) ಭರ್ಜರಿ ಬ್ಯಾಟಿಂಗ್ ನಡೆಸಿದರು. ಬ್ರಾಂಡನ್ ಕಿಂಗ್ ಕೂಡ 66 ಎಸೆತಗಳಲ್ಲಿ 54 ರನ್ ಗಳಿಸಿದರು. ಅಖೆಲ್ ಹುಸೈನ್ (32*) ಹಾಗೂ ರೊಮಾರಿಯೊ ಶೆಫೆರ್ಡ್ (39*) ಕೊನೆ ಕ್ಷಣದಲ್ಲಿ ಜಯಕ್ಕೆ ಸಾಕಷ್ಟು ಹೋರಾಟ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ವಿಂಡೀಸ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿ ಸೋಲು ಕಂಡಿತು.
Published On - 10:34 am, Sat, 23 July 22