ಟೀಮ್ ಇಂಡಿಯಾಗೆ ಶ್ರೇಯಸ್ ಅಯ್ಯರ್ ಆಯ್ಕೆ ಬಹುತೇಕ ಖಚಿತ
Asia Cup 2023: ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳವನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.
ಏಷ್ಯಾಕಪ್ 2023 ಕ್ಕಾಗಿ ಸೋಮವಾರ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗುತ್ತದೆ. ಆದರೆ ಇದಕ್ಕೂ ಮುನ್ನ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಇದಕ್ಕಾಗಿ ಇಬ್ಬರು ಆಟಗಾರರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್ನಲ್ಲಿ ಪಾಲ್ಗೊಂಡಿದ್ದಾರೆ.
ಫಿಟ್ನೆಸ್ ಟೆಸ್ಟ್ನ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸಂಪೂರ್ಣ 50 ಓವರ್ಗಳವರೆಗೆ ಫೀಲ್ಡಿಂಗ್ ಮಾಡಿದ್ದಾರೆ. ಅಲ್ಲದೆ 38 ಓವರ್ಗಳವರೆಗೆ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ. ಅಂದರೆ ಯಾವುದೇ ಅಸ್ವಸ್ಥತೆ ಇಲ್ಲದೆ ಏಕದಿನ ಪಂದ್ಯವಾಡಲು ಅಯ್ಯರ್ ಸಜ್ಜಾಗಿರುವುದು ಇದರೊಂದಿಗೆ ಸ್ಪಷ್ಟವಾಗಿದೆ.
ಶ್ರೇಯಸ್ ಅಯ್ಯರ್ ಅವರ ಈ ಪ್ರದರ್ಶನವನ್ನು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಬ್ಯಾಟಿಂಗ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಸೂಕ್ಷ್ಮವಾಗಿ ಗಮನಿಸಿದ್ದು, ಹೀಗಾಗಿ ಏಷ್ಯಾಕಪ್ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಹೆಚ್ಚಿದೆ. ಅದರಂತೆ ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯಾಕಪ್ ತಂಡದಲ್ಲಿ ಅಯ್ಯರ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
ಕೆಎಲ್ ರಾಹುಲ್ ಕಥೆಯೇನು?
ಮೊದಲ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿದಿರಲಿಲ್ಲ. ಇನ್ನು ಭಾನುವಾರ ಎರಡನೇ ಅಭ್ಯಾಸ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಜೊತೆ ಕೆಎಲ್ ರಾಹುಲ್ ಕೂಡ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಅತ್ತ ಕೆಎಲ್ ರಾಹುಲ್ ಬ್ಯಾಟಿಂಗ್ನೊಂದಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಬೇಕಾಗಿ ಬರಬಹುದು. ಹೀಗಾಗಿ ಎರಡು ವಿಭಾಗಗಳಲ್ಲಿ ಸಂಪೂರ್ಣ ಫಿಟ್ನೆಸ್ ತೋರಿಸಬೇಕಿದೆ. ಈ ಫಿಟ್ನೆಸ್ ವರದಿಯನ್ನು ಭಾನುವಾರ ಸಂಜೆಯೊಳಗೆ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಬಿಸಿಸಿಐಗೆ ಸಲ್ಲಿಸಲಿದ್ದಾರೆ.
ಟೀಮ್ ಇಂಡಿಯಾ ಆಯ್ಕೆ ಯಾವಾಗ?
ಏಷ್ಯಾಕಪ್ಗಾಗಿ ಸೋಮವಾರ ಟೀಮ್ ಇಂಡಿಯಾವನ್ನು ಘೋಷಿಸಲಾಗುತ್ತದೆ. ಅಂದರೆ ಭಾನುವಾರ ಸಂಜೆಯೊಳಗೆ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಅವರ ಫಿಟ್ನೆಸ್ ವರದಿ ಬಿಸಿಸಿಐ ಆಯ್ಕೆ ಸಮಿತಿಯ ಕೈ ಸೇರಲಿದೆ. ಈ ವರದಿಯನ್ನು ಪರಿಶೀಲಿಸಿ ಇಬ್ಬರು ಆಟಗಾರರಿಗೆ ಸ್ಥಾನ ನೀಡಬೇಕಾ ಅಥವಾ ಬೇಡವಾ ಎಂಬುದು ನಿರ್ಧಾರವಾಗಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಶ್ರೇಯಸ್ ಅಯ್ಯರ್ ಅನಿವಾರ್ಯ..!
ಈಗಾಗಲೇ ಶ್ರೇಯಸ್ ಅಯ್ಯರ್ ಬಹುತೇಕ ಫಿಟ್ನೆಸ್ ಟೆಸ್ಟ್ನಲ್ಲಿ ತೇರ್ಗಡೆಯಾಗಿದ್ದು, ಹೀಗಾಗಿ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಕೆಎಲ್ ರಾಹುಲ್ ಅವರ ಏಷ್ಯಾಕಪ್ ಭವಿಷ್ಯ ನಾಳೆ ನಿರ್ಧಾರವಾಗಲಿದೆ.
ಏಷ್ಯಾಕಪ್ ಯಾವಾಗ ಶುರು?
ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳವನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ನಡೆಯಲಿದೆ.