
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 35ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ದಾಖಲಿಸಿದೆ. ಇದು ಅಂತಿಂಥ ಗೆಲುವಲ್ಲ. ಬದಲಾಗಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 264 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.5 ಓವರ್ಗಳಲ್ಲಿ 265 ರನ್ಗಳಿಸಿ 5 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಕಡು ಬಿಸಿಲಿನಲ್ಲಿ ಬೌಲರ್‌ಗಳು ಸಿಕ್ಸರ್-ಬೌಂಡರಿಗಳ ಸುರಿಮಳೆ ಎದುರಿಸುವಾಗ ಯಾವುದೇ ನಾಯಕನಿಗೆ ಗೊಂದಲ ಉಂಟಾಗುವುದು ಸಹಜ. ನಮ್ಮ ಬೌಲರ್‌ಗಳು ರನ್ ಬಿಟ್ಟುಕೊಡುತ್ತಿರುವಾಗ ಮಾನಸಿಕವಾಗಿ ಸ್ವಲ್ಪ ವಿಚಲಿತರಾಗುತ್ತೇವೆ. ಆದರೆ ಅಂತಹ ಸಂದರ್ಭದಲ್ಲೂ ಎದುರಾಳಿ ತಂಡ ಎಷ್ಟು ರನ್ ಗಳಿಸಿದರೂ ನಾವು ಅವರಿಗಿಂತ ಒಂದು ರನ್ ಹೆಚ್ಚು ಹೊಡೆಯಬೇಕು ಎಂಬ ಸರಳ ಮತ್ತು ದೃಢವಾದ ಮೈಂಡ್‌ಸೆಟ್ ಅಳವಡಿಸಿಕೊಂಡಿದ್ದಾಗಿ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ (152) ಅವರ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶ್ರೇಯಸ್ ಅಯ್ಯರ್, ರಾಹುಲ್ ಯಾವುದೇ ಒತ್ತಡವಿಲ್ಲದೆ, ಸುಲಭವಾಗಿ ಇಂಪ್ರೊವೈಸೇಶನ್ ಮಾಡುತ್ತಾ ಆಡಿದ ರೀತಿ ಕಣ್ಣಿಗೆ ಹಬ್ಬವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.
ಆದರೆ ಅವರಿಂದ ಸಾಧ್ಯವಾದರೆ ನಮ್ಮಿಂದಲೂ ಸಾಧ್ಯ ಎಂಬ ನಂಬಿಕೆ ನನ್ನಲ್ಲಿತ್ತು. ಹೀಗಾಗಿಯೇ ಚೇಸಿಂಗ್ ಆರಂಭಿಸುವ ಮುನ್ನ ಪಂಜಾಬ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಚರ್ಚೆ ತುಂಬಾ ಸರಳವಾಗಿತ್ತು. ಈ ಹಿಂದಿನ ಪಂದ್ಯಗಳಲ್ಲಿ 220-225 ರನ್‌ಗಳನ್ನು ಚೇಸ್ ಮಾಡಿದ ಅನುಭವ ತಂಡಕ್ಕಿತ್ತು. ಆದ್ದರಿಂದ ಪವರ್‌ಪ್ಲೇನಲ್ಲೇ ಗರಿಷ್ಠ ರನ್ ಗಳಿಸಿ ಅಡಿಪಾಯ ಹಾಕಿಕೊಡಲು ಬ್ಯಾಟರ್‌ಗಳಿಗೆ ಸೂಚಿಸಲಾಗಿತ್ತು. ಅದೇ ರೀತಿ ಆರಂಭಿಕ ಆಟಗಾರರು ಸ್ಫೋಟಕವಾಗಿ ಆಡಿ ಉಳಿದ ಬ್ಯಾಟರ್‌ಗಳಿಗೆ ಕೆಲಸವನ್ನು ಸುಲಭಗೊಳಿಸಿದರು.
ಅಷ್ಟೇ ಅಲ್ಲದೆ ನಮ್ಮ ಪ್ಲ್ಯಾನಿಂಗ್ ಕೂಡ ಸರಳವಾಗಿತ್ತು. ಅವರಿಗೆ ಸಾಧ್ಯವಾದರೆ, ನಮಗೂ ಸಾಧ್ಯವಾಗುತ್ತೆ. ಡೆಲ್ಲಿ ಕ್ಯಾಪಿಟಲ್ಸ್ ಹೊಡೆದಿದ್ದಾರೆ. ನಾವು ಕೂಡ ಹೊಡೆಯಬಲ್ಲೆವು. ಹೀಗಾಗಿ ನಾವು ತಿರುಗಿಸಿ ಹೊಡೆಯಬೇಕು ಎಂಬುದಷ್ಟೇ ನಮ್ಮ ದ್ಯೇಯವಾಗಿತ್ತು. ಅದರಂತೆ ನಮ್ಮ ಬ್ಯಾಟರ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಪ್ರಚಂಡ ಬ್ಯಾಟಿಂಗ್ನೊಂದಿಗೆ ಬೃಹತ್ ಮೊತ್ತ ಚೇಸ್ ಮಾಡಿರುವುದು ಖುಷಿ ಕೊಟ್ಟಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಇದನ್ನೂ ಓದಿ: VIDEO: ಅಭಿಷೇಕ್ ಶರ್ಮಾ ಕೈ ಹಿಡಿದು ಎಳೆದ ಯುವತಿ!
ಸದ್ಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಮೊದಲಾರ್ಧದಲ್ಲಿ 6 ಗೆಲುವುಗಳೊಂದಿಗೆ ಒಟ್ಟು 13 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಅಯ್ಯರ್ ನೇತೃತ್ವದ ಪಂಜಾಬ್ ಪಡೆಯು ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.