ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!

IPL 2026 Punjab Kings: ಈ ಬಾರಿಯ ಐಪಿಎಲ್​ನ ಮೊದಲಾರ್ಧದಲ್ಲಿ ಆಡಿದ 7 ಪಂದ್ಯಗಳ ಮೂಲಕ ಪಂಜಾಬ್ ಕಿಂಗ್ಸ್ ಒಟ್ಟು 13 ಅಂಕಗಳನ್ನು ಕಲೆಹಾಕಿದ್ದರು. ಇದಾದ ಬಳಿಕ ಪಡೆದಿದ್ದು ಕೇವಲ 2 ಅಂಕಗಳು ಮಾತ್ರ. ಅಂದರೆ ದ್ವಿತೀಯಾರ್ಧದಲ್ಲಿ ಪಂಜಾಬ್ ಕಿಂಗ್ಸ್ 7 ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಮ್ಯಾಚ್ ಮಾತ್ರ. ಈ ಮೂಲಕ ಒಟ್ಟು 15 ಅಂಕಗಳನ್ನು ಪಡೆದು ಪಂಜಾಬ್ ಕಿಂಗ್ಸ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ.

ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!
Shreyas Iyer - Shresta Iyer

Updated on: May 26, 2026 | 11:06 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಿಂದ ಪಂಜಾಬ್ ಕಿಂಗ್ಸ್ ತಂಡವು ಕೇವಲ ಒಂದು ಅಂಕದ ಅಂತರದಿಂದ ಹೊರಬಿದ್ದಿದೆ. ಅಂದರೆ ಪ್ಲೇಆಫ್​ಗೇರಿರುವ ರಾಜಸ್ಥಾನ್ ರಾಯಲ್ಸ್ 16 ಅಂಕಗಳಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡ 15 ಅಂಕಗಳೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಹೀಗೆ ಪಂಜಾಬ್ ಕಿಂಗ್ಸ್​ ಹೊರಬಿದ್ದ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್​ ಆನ್​ಲೈನ್​ನಲ್ಲಿ ತೀವ್ರ ಕಿರುಕುಳ ಎದುರಿಸಿದ್ದಾರೆ. ತಮ್ಮ ವಿರುದ್ಧ ಹರಿದುಬರುತ್ತಿರುವ ಈ ಅತಿರೇಕಕ್ಕೆ ಖುದ್ದು ಶ್ರೇಷ್ಠಾ ಅಯ್ಯರ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಖಡಕ್ ಆಗಿ ಉತ್ತರ ನೀಡಿದ್ದಾರೆ.

ವಿವಾದಕ್ಕೆ ಕಾರಣವೇನು?

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳಿಗೆ ಒಂದೊಂದು ಅಂಕಗಳನ್ನು ನೀಡಲಾಗಿತ್ತು.

ಇತ್ತ ಪಂದ್ಯ ರದ್ದಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಶ್ರೇಷ್ಠಾ ಅಯ್ಯರ್, “ನಾವು ಪಂಜಾಬಿಗಳು ಹೃದಯವಂತರು, ನಿಮಗೊಂದು ಪಾಯಿಂಟ್ ಬಿಟ್ಟುಕೊಟ್ಟೆವು” ಎಂದು ತಮಾಷೆಯ ರೀಲ್ಸ್​ ಒಂದನ್ನು ಶೇರ್ ಮಾಡಿದ್ದರು.

ಪ್ಲೇಆಫ್​ನಿಂದ ಪಂಜಾಬ್ ಕಿಂಗ್ಸ್ ಔಟ್:

ಮೊದಲು ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯ ಸುತ್ತಿನಲ್ಲಿ ಕೇವಲ 1 ಮ್ಯಾಚ್​ ಮಾತ್ರ ಗೆದ್ದಿದ್ದಾರೆ. ಈ ಮೂಲಕ ಪಡೆದ ಒಟ್ಟು ಅಂಕ 15, ಈ ಹದಿನೈದು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿ ಪಂಜಾಬ್ ಕಿಂಗ್ಸ್ ಹೊರಬಿದ್ದಿದೆ.

ಈ ಹೊರಬೀಳುವಿಕೆಯ ಬೆನ್ನಲ್ಲೇ, ಶ್ರೇಷ್ಠಾ ಅಯ್ಯರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅಂದರೆ ಈ ಹಿಂದೆ “ನಾವು ಪಂಜಾಬಿಗಳು ಹೃದಯವಂತರು, ನಿಮಗೊಂದು ಪಾಯಿಂಟ್ ಬಿಟ್ಟುಕೊಟ್ಟೆವು” ಎಂದು ಕೆಕೆಆರ್ ಅನ್ನು ಟ್ರೋಲ್ ಮಾಡಿದ್ದ ಶ್ರೇಷ್ಠಾ ಅವರನ್ನು ಇದೇ ಒಂದು ಅಂಕದ ವಿಡಿಯೋದೊಂದಿಗೆ ಕಾಲೆಳೆಯುತ್ತಿದ್ದಾರೆ.

ಇದರ ನಡುವೆ ಕೆಲವರು ಶ್ರೇಯಸ್ ಅಯ್ಯರ್ ಅವರ ಸಹೋದರಿಯನ್ನು ನಿಂದಿಸಿ ಕಮೆಂಟಿಸಿದ್ದಾರೆ. ಇನ್ನೂ ಕೆಲವರು ಕರ್ಮ ರಿಟರ್ನ್ಸ್, ನನಿಗೆ ಹೀಗೆ ಆಗಬೇಕು, ಯಾವತ್ತೂ ಮೊದಲೇ ಸಂಭ್ರಮಿಸಬೇಡ ಎಂದೆಲ್ಲಾ ಕಿಚಾಯಿಸಿದ್ದಾರೆ.

ಶ್ರೇಷ್ಠಾ ಆಕ್ರೋಶ:

ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಹಾಗೂ ಆಪ್ತರನ್ನು ಗುರಿಯಾಗಿಸಿ ನಡೆಯುತ್ತಿರುವ ಟ್ರೋಲ್ ವಿರುದ್ಧ ಪ್ರತಿಕ್ರಿಯಿಸಿರುವ ಶ್ರೇಷ್ಠಾ ಅಯ್ಯರ್, “ಆ ವಿಡಿಯೋ ಕೇವಲ ಒಂದು ತಮಾಷೆಯಾಗಿತ್ತು. ಕ್ರೀಡೆಯನ್ನು ಕ್ರೀಡೆಯಾಗಿ ನೋಡದ, ವಿಷಯಕ್ಕೆ ಸಂಬಂಧವೇ ಇಲ್ಲದ ನನ್ನ ವೃತ್ತಿಜೀವನ ಮತ್ತು ಕುಟುಂಬವನ್ನು ಮಧ್ಯೆ ಎಳೆದು ತರುತ್ತಿರುವ ನಿಮ್ಮ ಬುದ್ಧಿಹೀನ ನಡವಳಿಕೆಯನ್ನು ಕಂಡು ನನಗೆ ಅಯ್ಯೋ ಪಾಪ ಎನಿಸುತ್ತದೆ”.

“ನನ್ನ ಸಹೋದರ ಶ್ರೇಯಸ್ ಅಯ್ಯರ್ ಗೆಲ್ಲಲಿ ಅಥವಾ ಸೋಲಲಿ, ನಾನು ಸದಾ ಅವನ ಪರವಾಗಿ ನಿಲ್ಲುತ್ತೇನೆ. ಅವನ ಸಾಧನೆಯನ್ನು ಸಂಭ್ರಮಿಸುತ್ತೇನೆ. ಕೆಲಸ ಇಲ್ಲದ ನೀವುಗಳು ಹೀಗೆ ಟ್ರೋಲ್ ಮಾಡುತ್ತಿರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದರ ಜೊತೆಗೆ ಈ ಆನ್‌ಲೈನ್ ಟ್ರೋಲ್ ಕೇವಲ ಕಮೆಂಟ್‌ಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ತಿಳಿಸಿರುವ ಶ್ರೇಷ್ಠಾ ಅಯ್ಯರ್, ಟ್ರೋಲರ್‌ಗಳು ನನ್ನ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ಫೋನ್ ಮಾಡಿ ನಡುರಾತ್ರಿಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

“ನೀವು ನನ್ನ ಆಪ್ತರಿಗೆ ಮತ್ತು ಕಚೇರಿಗೆ ಫೋನ್ ಮಾಡಿ ತೊಂದರೆ ಕೊಡುತ್ತಿರುವುದು ನಿಮ್ಮ ಸಂಸ್ಕಾರವನ್ನು ತೋರಿಸುತ್ತದೆ. ಕೆಟ್ಟ ಕರ್ಮ ನಿಮಗೂ ಒಂದು ದಿನ ಹಿಂತಿರುಗುತ್ತದೆ” ಎಂದು ಶ್ರೇಷ್ಠಾ ಅಯ್ಯರ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್​ಗೆ ಗುಡ್ ಬೈ ಹೇಳಿದ RCB ಮಾಜಿ ಆಟಗಾರ!

ಇದೀಗ ಶ್ರೇಯಸ್ ಅಯ್ಯರ್ ಅವರ ಸಹೋದರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ವೈರಲ್ ಬೆನ್ನಲ್ಲೇ ಶ್ರೇಷ್ಠಾ ಅಯ್ಯರ್​ಗೆ ಪಂಜಾಬ್ ಕಿಂಗ್ಸ್​ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ ಸೋಷಿಯಲ್ ಮೀಡಿಯಾ ಬುಲ್ಲಿಂಗ್ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.

 

Published On - 11:04 am, Tue, 26 May 26

Loading...
Unable to load recommendations.
Follow Us