Shubman Gill: ಮುಂದುವರೆದ ಶುಭ್ಮನ್ ಗಿಲ್ ಫ್ಲಾಪ್ ಶೋ..!
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಎರಡು ಪಂದ್ಯಗಳಿಂದ ಕಿಂಗ್ ಕೊಹ್ಲಿ ಹಿಂದೆ ಸರಿದಿದ್ದು, ಮೂರನೇ ಪಂದ್ಯದ ವೇಳೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಶುಭ್ಮನ್ ಗಿಲ್ (Shubman Gill) ಶೂನ್ಯಕ್ಕೆ ಔಟಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್ ಕೇವಲ 2 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದ್ದರು. ಇದರ ಬೆನ್ನಲ್ಲೇ ಗಿಲ್ ಆಯ್ಕೆಯ ಬಗ್ಗೆ ಅಪಸ್ವರಗಳು ಕೇಳಿ ಬರಲಾಂಭಿಸಿದೆ.
ಏಕೆಂದರೆ ಕಳೆದ 10 ಇನಿಂಗ್ಸ್ಗಳಲ್ಲಿ ಶುಭ್ಮನ್ ಬ್ಯಾಟ್ನಿಂದ ಒಂದೇ ಒಂದು ಅರ್ಧಶತಕ ಮೂಡಿಬಂದಿಲ್ಲ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್ನಲ್ಲಿ 23 ರನ್ ಬಾರಿಸಲಷ್ಟೇ ಶಕ್ತರಾಗಿದ್ದ ಗಿಲ್ ಇದೀಗ ದ್ವಿತೀಯ ಇನಿಂಗ್ಸ್ನಲ್ಲೂ ವಿಫಲರಾಗಿದ್ದಾರೆ. ಹೀಗಾಗಿಯೇ ಮೂರನೇ ಕ್ರಮಾಂಕಕ್ಕೆ ಶುಭ್ಮನ್ ಗಿಲ್ ಸೂಕ್ತರೇ ಎಂಬ ಪ್ರಶ್ನೆಗಳೆದ್ದಿವೆ.
ಜುಲೈ 12, 2023 ರಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಶುಭ್ಮನ್ ಗಿಲ್ಗೆ ಕೊನೆಯ 10 ಇನಿಂಗ್ಸ್ಗಳಲ್ಲಿ ಒಂದೇ ಹಾಫ್ ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ. ಇದುವರೆಗೆ ಕ್ರಮವಾಗಿ 47, 6, 10, 29*, 2, 26, 36, 10, 23, 0 ರನ್ ಬಾರಿಸಿ ನಿರ್ಗಮಿಸಿದ್ದಾರೆ.
ಅಂದರೆ ಗಿಲ್ ಬ್ಯಾಟ್ನಿಂದ ಕೊನೆಯ ಟೆಸ್ಟ್ ಶತಕ ಮೂಡಿಬಂದಿರುವುದು 2023 ರ ಮಾರ್ಚ್‌ನಲ್ಲಿ. ಅಹಮದಾಬಾದ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗಿಲ್ 128 ರನ್ ಬಾರಿಸಿದ್ದರು. ಇದಾದ ಬಳಿಕ ಗಿಲ್ ಟೀಮ್ ಇಂಡಿಯಾ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಶುಭ್ಮನ್ ಸತತ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿಯೇ 3ನೇ ಕ್ರಮಾಂಕಕ್ಕೆ ಗಿಲ್ ಆಯ್ಕೆ ಬಗ್ಗೆ ಇದೀಗ ಅಪಸ್ವರಗಳು ಕೇಳಿ ಬರುತ್ತಿವೆ.
ಏಕೆಂದರೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾ ಪರ ಅವಕಾಶಕ್ಕಾಗಿ ಸರ್ಫರಾಝ್ ಖಾನ್, ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ ಪೂಜಾರ ತುದಿಗಾಲಲ್ಲಿ ನಿಂತಿದ್ದು, ಇದಾಗ್ಯೂ ಶುಭ್ಮನ್ ಗಿಲ್ಗೆ ಸತತ ಅವಕಾಶ ನೀಡುತ್ತಿರುವುದೇಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸದ್ಯ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ಉಳಿದ ಮೂರು ಪಂದ್ಯಗಳಿಗೆ 2ನೇ ಟೆಸ್ಟ್ ಪಂದ್ಯದ ಬಳಿಕ ಭಾರತ ತಂಡವನ್ನು ಘೋಷಿಸಲಾಗುತ್ತದೆ. ಈ ಮೂರು ಪಂದ್ಯಗಳಿಗಾಗಿ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ದ್ವಿತೀಯ ಟೆಸ್ಟ್ನಲ್ಲಿ ಶುಭ್ಮನ್ ಗಿಲ್ ಮಿಂಚಲೇಬೇಕು. ಅಂದರಂತೆ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಗಿಲ್ ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ಕೆಎಲ್ ರಾಹುಲ್ , ಶ್ರೇಯಸ್ ಅಯ್ಯರ್ , ರವೀಂದ್ರ ಜಡೇಜಾ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: Ravindra Jadeja: ಜಡ್ಡು ಜಾದೂ…ರೂಟ್ ಕ್ಲಿಯರ್ ದಾಖಲೆ
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲೀ ಪೋಪ್ , ಜೋ ರೂಟ್ , ಜಾನಿ ಬೈರ್ಸ್ಟೋವ್ , ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್) , ರೆಹಾನ್ ಅಹ್ಮದ್ , ಟಾಮ್ ಹಾರ್ಟ್ಲಿ , ಮಾರ್ಕ್ ವುಡ್ , ಜ್ಯಾಕ್ ಲೀಚ್.