SL vs AFG: ವನಿಂದು ಹಸರಂಗಗೆ ನಿಷೇಧದ ಬರೆ ಎಳೆದ ಐಸಿಸಿ; ಅಫ್ಘಾನ್ ಆಟಗಾರನಿಗೂ ಶಿಕ್ಷೆ

SL vs AFG: ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ವೇಳೆ ಉಭಯ ತಂಡಗಳ ಆಟಗಾರರಾದ ವನಿಂದು ಹಸರಂಗ ಹಾಗೂ ರಹಮಾನುಲ್ಲಾ ಗುರ್ಬಾಜ್‌ ತೋರಿದ ದುರ್ವತನೆಗೆ ಅಸಮಾಧಾನಗೊಂಡಿರುವ ಐಸಿಸಿ, ಇಬ್ಬರೂ ಆಟಗಾರರನ್ನು ಶಿಕ್ಷೆಗೆ ಗುರಿಪಡಿಸಿದೆ.

SL vs AFG: ವನಿಂದು ಹಸರಂಗಗೆ ನಿಷೇಧದ ಬರೆ ಎಳೆದ ಐಸಿಸಿ; ಅಫ್ಘಾನ್ ಆಟಗಾರನಿಗೂ ಶಿಕ್ಷೆ
ವನಿಂದು ಹಸರಂಗ, ರಹಮಾನುಲ್ಲಾ ಗುರ್ಬಾಜ್‌
Follow us
ಪೃಥ್ವಿಶಂಕರ
|

Updated on: Feb 24, 2024 | 9:54 PM

ಶ್ರೀಲಂಕಾದಲ್ಲಿ ನಡೆದ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ (Afghanistan vs Sri Lanka) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಶ್ರೀಲಂಕಾ 2-1 ಅಂತರದಲ್ಲಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ತೋರಿದ ದುರ್ವತನೆಗೆ ಅಸಮಾಧಾನಗೊಂಡಿರುವ ಐಸಿಸಿ, ಇಬ್ಬರೂ ಆಟಗಾರರನ್ನು ಶಿಕ್ಷೆಗೆ ಗುರಿಪಡಿಸಿದೆ. ಅದರಂತೆ ಶನಿವಾರ ಸಂಜೆ ಮಹತ್ವದ ನಿರ್ಧಾರ ಕೈಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ವನಿಂದು ಹಸರಂಗ (Wanindu Hasaranga) ಅವರನ್ನು ಎರಡು ಪಂದ್ಯಗಳಿಂದ ಅಮಾನತುಗೊಳಿಸಲು ನಿರ್ಧರಿಸಿದೆ. ಹಾಗೆಯೇ ಅಫ್ಘಾನಿಸ್ತಾನ ತಂಡದ ಆಟಗಾರ ರಹಮಾನುಲ್ಲಾ ಗುರ್ಬಾಜ್‌ಗೂ (Rahmanullah Gurbaz) ಐಸಿಸಿ ಶಿಕ್ಷೆ ವಿಧಿಸಿದ್ದು, ಪಂದ್ಯ ಶುಲ್ಕ ಮತ್ತು ಡಿಮೆರಿಟ್ ಪಾಯಿಂಟ್‌ಗಳನ್ನು ದಂಡವಾಗಿ ವಿಧಿಸಿದೆ.

ಹಸರಂಗಗ್ಯಾಕೆ ಶಿಕ್ಷೆ?

ಐಸಿಸಿ ವಿಧಿಸಿರುವ ಶಿಕ್ಷೆಯ ಅನುಸಾರ ಲಂಕಾ ನಾಯಕ ವನಿಂದು ಹಸರಂಗ ಇಡೀ ಸರಣಿಯಲ್ಲಿ ಒಟ್ಟು 5 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ, ಒಬ್ಬ ಆಟಗಾರ ಕಳೆದ ಎರಡು ವರ್ಷಗಳಲ್ಲಿ ಐದು ಡಿಮೆರಿಟ್ ಅಂಕಗಳನ್ನು ಪಡೆದರೆ, ಆತನಿಗೆ ಪಂದ್ಯದ ಶುಲ್ಕದ 50 ಪ್ರತಿಶತವನ್ನು ದಂಡವಾಗಿ ವಿಧಿಸಲಾಗುತ್ತದೆ ಮತ್ತು ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗುತ್ತದೆ. ಅದರಂತೆ ಐದು ಡಿಮೆರಿಟ್ ಅಂಕ ಪಡೆದಿರುವ ಹಸರಂಗಗೆ ಎರಡು ಪಂದ್ಯಗಳಿಂದ ನಿಷೇಧ ಹಾಗೂ ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ.

ವಾಸ್ತವವಾಗಿ ವನಿಂದು ಹಸರಂಗ ಹಾಗೂ ರಹಮಾನುಲ್ಲಾ ಗುರ್ಬಾಜ್‌ ಐಸಿಸಿಯಿಂದ ದಂಡನೆಗೆ ಗುರಿಯಾಗಲು ಕಾರಣವೆಂದರೆ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಹಸರಂಗ ಅಂಪೈರ್ ಲಿಂಡನ್ ಹ್ಯಾನಿಬಲ್ ಬಳಿಗೆ ಹೋಗಿ ಫುಲ್ ಟಾಸ್​ಗೆ ನೋ ಬಾಲ್ ನೀಡದಿದ್ದಕ್ಕಾಗಿ ಅಸಮಾಧಾನ ಹೊರಹಾಕಿದ್ದರು. ಈ ಕಾರಣಕ್ಕಾಗಿ ಅವರನ್ನು ದಂಡನೆಗೆ ಗುರಿ ಮಾಡಲಾಗಿದೆ. ಇದೀಗ ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧ ನಡೆಯಲ್ಲಿರುವ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಂದ ಹಸರಂಗ ಹೊರಗುಳಿಯಲಿದ್ದಾರೆ.

ರಹಮಾನುಲ್ಲಾ ಗುರ್ಬಾಜ್ ಮಾಡಿದ್ದೇನು?

ಇನ್ನು ಅಫ್ಘಾನಿಸ್ತಾನದ ಆಟಗಾರ ರಹಮಾನುಲ್ಲಾ ಗುರ್ಬಾಜ್ ಬಗ್ಗೆ ಹೇಳುವುದಾದರೆ ಗುರ್ಬಾಜ್, ಐಸಿಸಿ ನೀತಿ ಸಂಹಿತೆಯ ಲೆವೆಲ್ 1ರಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಅವರು ಈ ಸಂಹಿತೆಯ ಆರ್ಟಿಕಲ್ 2.4 ರ ನಿಯಮವನ್ನು ಉಲ್ಲಂಘಿಸಿದ್ದಾರೆ. ಅದರಲ್ಲೂ ಅಂಪೈರ್ ಮಾತನ್ನು ಕಡೆಗಣಿಸಿದಕ್ಕಾಗಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಅದರಂತೆ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ವಿಧಿಸಲಾಗಿದ್ದು, ದಂಡದ ಹೊರತಾಗಿ 1 ಡಿಮೆರಿಟ್ ಪಾಯಿಂಟ್ ಅನ್ನು ಪಡೆದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇದು ಗುರ್ಬಾಜ್ ಅವರ ಎರಡನೇ ತಪ್ಪಾಗಿದ್ದು, ಅವರ ಖಾತೆಯಲ್ಲಿ ಇದೀಗ ಒಟ್ಟು 2 ಡಿಮೆರಿಟ್ ಪಾಯಿಂಟ್‌ಗಳಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ