ಗಂಗೂಲಿ, ದ್ರಾವಿಡ್ ಕೂಡ ವಿಶ್ವಕಪ್ ಗೆದ್ದಿಲ್ಲ: ಕೊಹ್ಲಿಯನ್ನು ಟೀಕಿಸುವವರಿಗೆ ಖಡಕ್ ಉತ್ತರ
Team India: ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿಯೇ ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಟೀಮ್ ಇಂಡಿಯಾ ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. ಇದಕ್ಕೂ ಮುನ್ನ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವರು ಕೂಡ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಟೀಮ್ ಇಂಡಿಯಾದ ಯಶಸ್ವಿ ಜೋಡಿ ಎನಿಸಿಕೊಂಡಿದ್ದ ರವಿ ಶಾಸ್ತ್ರಿ-ಕೊಹ್ಲಿ ಅವರ ಅವಧಿಯಲ್ಲಿ ಭಾರತ ತಂಡವು ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ತಂಡವು ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಇದಾಗ್ಯೂ ವಿರಾಟ್ ಕೊಹ್ಲಿ ನಾಯಕನಾಗಿ ಐಸಿಸಿ ಟೂರ್ನಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೇ ಕಾರಣದಿಂದಾಗಿ ಯಶಸ್ವಿ ನಾಯಕ ಎನಿಸಿಕೊಂಡರೂ ಕೊಹ್ಲಿ ವಿರುದ್ದ ಟೀಕೆಗಳು ಕೇಳಿ ಬಂದಿದ್ದವು.
ಹೀಗೆ ಐಸಿಸಿ ಟ್ರೋಫಿ ಗೆಲ್ಲದ ಮಾತ್ರಕ್ಕೆ ನಾಯಕತ್ವನ್ನು ಟೀಕಿಸುವವರಿಗೆ ಇದೀಗ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ ಯಾವ ತಂಡ ಇಷ್ಟು ದಿನ ಅತ್ಯುತ್ತಮ ಪ್ರದರ್ಶನ ನೀಡಿದೆ ಹೇಳಿ, ಕಳೆದ ಹಲವಾರು ವರ್ಷಗಳಲ್ಲಿ ನಮ್ಮ ತಂಡವೇ ಅತ್ಯುತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಗೆಲುವುಗಳನ್ನು ದಾಖಲಿಸಿದೆ. ಇದಾಗ್ಯೂ ವಿಶ್ವಕಪ್ ಗೆಲ್ಲದ ಮಾತ್ರಕ್ಕೆ ಟೀಕಿಸುವುದು ಸರಿಯಲ್ಲ. ದೊಡ್ಡ ಆಟಗಾರರು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಕೂಡ ನೆನಪಿರಲಿ ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ.
ನೀವೇ ನೋಡಿ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಮತ್ತು ರೋಹಿತ್ ಶರ್ಮಾ ಕೂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಅಂದರೆ ಅವರೆಲ್ಲಾ ಕೆಟ್ಟ ಆಟಗಾರರು ಎಂದರ್ಥವಲ್ಲ. ಸಚಿನ್ ತೆಂಡೂಲ್ಕರ್ ಕೂಡ ವಿಶ್ವಕಪ್ ಗೆಲ್ಲುವ ಮೊದಲು 6 ವಿಶ್ವಕಪ್‌ಗಳನ್ನು ಆಡಿದ್ದರು ಎಂದು ರವಿ ಶಾಸ್ತ್ರಿ ತಿಳಿಸಿದರು.
ನಮ್ಮಲ್ಲಿ ಕೇವಲ 2 ವಿಶ್ವಕಪ್ ವಿಜೇತ ನಾಯಕರಿದ್ದಾರೆ. ಇದರ ಹೊರತಾಗಿ ಯಾರು ಕೂಡ ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲ. ಇವರೆಲ್ಲರೂ ಉತ್ತಮ ಕ್ರಿಕೆಟಿಗರಲ್ಲವೇ?. ವಿಶ್ವಕಪ್ ಗೆಲ್ಲದ ಮಾತ್ರಕ್ಕೆ ಅವರೆಲ್ಲಾ ಕೆಟ್ಟ ಆಟಗಾರರು ಎಂದರ್ಥವಲ್ಲ ಎಂದು ರವಿ ಶಾಸ್ತ್ರಿ ಅವರು ಟೀಕಾಗಾರರಿಗೆ ಉತ್ತರ ನೀಡಿದ್ದಾರೆ.
ಇನ್ನು ಕೊಹ್ಲಿ ಅವಧಿಯಲ್ಲಿ ಟೀಮ್ ಇಂಡಿಯಾ 5 ವರ್ಷಗಳ ಕಾಲ ಟೆಸ್ಟ್‌ನ ನಂಬರ್-1 ತಂಡವಾಗಿತ್ತು. ಇತ್ತೀಚೆಗೆ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ವರದಿಯಾಗಿತ್ತು. ಟೆಸ್ಟ್ ತಂಡದ ನಾಯಕತ್ವವನ್ನು ಮಂಡಳಿಯು ತನ್ನಿಂದ ಕಸಿದುಕೊಳ್ಳಬಹುದು ಎಂಬ ಭಯ ಕೊಹ್ಲಿಗೆ ಇದೆ ಎಂದು ಮಾಜಿ ಅನುಭವಿ ಸುನಿಲ್ ಗವಾಸ್ಕರ್ ಹೇಳಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು.
ರಾ-ರೋ ಜೋಡಿ ಮೇಲೆ ಎಲ್ಲರ ಕಣ್ಣು: ಸದ್ಯ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಇದ್ದಾರೆ. ರೋಹಿತ್ ಶರ್ಮಾ ಏಕದಿನ ಮತ್ತು ಟಿ20 ತಂಡದ ನಾಯಕತ್ವ ಹೊಂದಿದ್ದಾರೆ. ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿಯೇ ಕೋಚ್ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಏಕೆಂದರೆ 2013 ರ ಬಳಿಕ ಭಾರತ ತಂಡ ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಈ ಬಾರಿ ಭಾರತಕ್ಕೆ ರಾ-ರೋ ಜೋಡಿ ವಿಶ್ವಕಪ್ ಗೆದ್ದು ಕೊಡಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Sourav Ganguly Rahul Dravid never won World Cup Ravi Shastri got furious)