Virat Kohli Resigns: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಸೌರವ್ ಗಂಗೂಲಿ ಮಾತು: ಏನಂದ್ರು ಕೇಳಿ

| Updated By: Vinay Bhat

Updated on: Jan 16, 2022 | 9:48 AM

Virat Kohli resigns as Test captain: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ ಅವರ ಈ ನಿರ್ಧಾರ ಅವರ ವೈಯಕ್ತಿಕವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Virat Kohli Resigns: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಸೌರವ್ ಗಂಗೂಲಿ ಮಾತು: ಏನಂದ್ರು ಕೇಳಿ
Sourav Ganguly and Virat Kohli
Follow us on

ವಿರಾಟ್ ಕೊಹ್ಲಿ (Virat Kohli) ಅವರು ಯಾವುದೇ ಮುನ್ಸೂಚನೆ ನೀಡಿದೆ ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ದಿಢೀರ್ ವಿದಾಯ ಹೇಳಿದ್ದು ಕ್ರಿಕೆಟ್ ಜಗತ್ತಿಗೇ ಆಘಾತ ಉಂಟುಮಾಡಿತು. ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಶಾಕ್ ನಿಂದ ಚೇತರಿಸಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಬರಸಿಡಿಲಿನಂತೆ ಮತ್ತೊಂದು ಸುದ್ದಿ ಬಂತು. ಕೊಹ್ಲಿಯ ಹಠಾತ್‌ ರಾಜಿನಾಮೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಕೊಹ್ಲಿ ರಾಜಿನಾಮೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ (BCCI) ನೇರ ಕಾರಣ ಎಂದು ಕೆಲವರು ಆರೋಪಿಸಿದ್ದು, ಬಿಸಿಸಿಐ ವಿರುದ್ಧ ಆಕ್ರೋಶ ಹೆಚ್ಚುತ್ತಿದೆ. ಹೀಗಿರುವಾಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ ಅವರ ಈ ನಿರ್ಧಾರ ಅವರ ವೈಯಕ್ತಿಕವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೌರವ್ ಗಂಗೂಲಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, “ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್‌ ತಂಡ ಎಲ್ಲ ಮಾದರಿಗಳಲ್ಲಿ ವೇಗವಾಗಿ ಬಹು ಎತ್ತರಕ್ಕೆ ದಾಪುಗಾಲು ಇಟ್ಟಿದೆ. ಟೆಸ್ಟ್‌ ತಂಡಕ್ಕೆ ರಾಜೀನಾಮೆ ಘೋಷಣೆ ಮಾಡಿರುವುದು ಅವರ ವೈಯಕ್ತಿಕ ನಿರ್ಧಾರದೆ. ಕೊಹ್ಲಿ ಅವರ ಈ ನಿರ್ಧಾರವನ್ನು ಬಿಸಿಸಿಐ ಗೌರವಿಸುತ್ತದೆ. ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ವೆಲ್‌ ಡನ್‌,” ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಟ್ವೀಟ್‌ ಮಾಡಿದ್ದಾರೆ.

 

ಬಿಸಿಸಿಐ ಕೂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿ ರಾಜಿನಾಮೆ ನೀಡಿರುವ ಟ್ವೀಟನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದು, “ಅಭಿನಂದನಾರ್ಹ, ನಾಯಕತ್ವದ ಗುಣಗಳಿಂದಾಗಿ ವಿರಾಟ್‌ ಕೊಹ್ಲಿ ಟೆಸ್ಟ್ ತಂಡವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಬಿಸಿಸಿಐ ಅವರನ್ನು ಅಭಿನಂದಿಸುತ್ತದೆ. ಅವರು 68 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ,” ಎಂದು ಬರೆದುಕೊಂಡಿದೆ.

7 ವರ್ಷಗಳ ಕಾಲ ಟೀಮ್ ಇಂಡಿಯಾ ನಾಯಕತ್ವ ಜವಾಬ್ದಾರಿವಹಿಸಿಕೊಂಡಿದ್ದ ವಿರಾಟ್, ಈಗ ಎಲ್ಲಾ ರೀತಿ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ. “ಇನ್ಮುಂದೆ ತಂಡದಲ್ಲಿ ಒಬ್ಬ ಸದಸ್ಯನಾಗಿಯಷ್ಟೇ ಆಡಲಿದ್ದೇನೆ. ತಂಡವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದಗಳು. ನಾನು ಪ್ರಾಮಾಣಿಕವಾಗಿ ತಂಡವನ್ನು ಮುನ್ನಡೆಸಿದ್ದೇನೆ. ಸೋಲಿರಲಿ, ಗೆಲುವಿರಲಿ ತಂಡವಾಗಿ ನಾವು ಶೇ.120ರಷ್ಟು ಶ್ರಮ ಹಾಕಿದ್ದೇವೆ. ಆ ಬಗ್ಗೆ ನನಗೆ ತೃಪ್ತಿ ಇದೆ,” ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಟ್ಟು 68 ಟೆಸ್ಟ್ ಪಂದ್ಯಗಳನ್ನಾಡಿದ್ದು, 40 ಟೆಸ್ಟ್ ಪಂದ್ಯಗಳಲ್ಲಿ ಗೆದ್ದು, 17 ಟೆಸ್ಟ್ ಪಂದ್ಯಗಳಲ್ಲಿ ಸೋತು, 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದ ಶೇಕಡಾ 58.82 ರಷ್ಟು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದ್ದರೆ, 25ರಷ್ಟು ಪಂದ್ಯಗಳಲ್ಲಿ ಸೋತಿದೆ.

U19 World Cup 2022: ಯಶ್ ಧುಲ್ ಭರ್ಜರಿ ಆಟ: ಅಂಡರ್-19 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಭಾರತಕ್ಕೆ ಗೆಲುವು

Published On - 9:46 am, Sun, 16 January 22