ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಸು ಮೂಡಿದೆ ಎಂದು ಈ ಹಿಂದೆಯೇ ಸುದ್ದಿಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದು. ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ವಜಾಗೊಳಿಸಲಾಗಿತ್ತು. ಇದಕ್ಕೂ ಮುನ್ನ ಕೊಹ್ಲಿ ಟಿ20 ನಾಯಕತ್ವ ತ್ಯಜಿಸಿದ್ದರು. ಆದರೆ ವಿರಾಟ್ ಕೊಹ್ಲಿ ಟಿ20 ನಾಯಕತ್ವವನ್ನು ತ್ಯಜಿಸಿದ ಕಾರಣ ಅವರನ್ನು ಏಕದಿನ ತಂಡದ ಕಪ್ತಾನನ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು. ಅಲ್ಲದೆ ಈ ವೇಳೆ ಗಂಗೂಲಿ ನಾನು ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮನವಿ ಮಾಡಿದ್ದೆ ಎಂದು ತಿಳಿಸಿದ್ದರು. ಆದರೆ ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೊಹ್ಲಿ, ಟಿ20 ನಾಯಕತ್ವವನ್ನು ಬಿಟ್ಟುಕೊಡದಂತೆ ಯಾರೂ ಕೂಡ ನನಗೆ ಹೇಳಿಲ್ಲ ಎಂದಿದ್ದರು. ನನ್ನೊಂದಿಗೆ ಈ ಬಗ್ಗೆ ಯಾರು ಕೂಡ ಚರ್ಚಿಸಿಲ್ಲ. ಏಕದಿನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸುವ ಗಂಟೆಗೂ ಮೊದಲು ನನಗೆ ಕರೆ ಮಾಡಿ ತಿಳಿಸಿದ್ದರು ಎಂದು ಕೊಹ್ಲಿ ಹೇಳಿದ್ದರು.
ಇದರೊಂದಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳುತ್ತಿರುವುದು ಸುಳ್ಳಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇತ್ತ ಕೊಹ್ಲಿಯ ಬಹಿರಂಗ ಹೇಳಿಕೆಯಿಂದ ಗಂಗೂಲಿ ಕೂಡ ಮುಜುಗರಕ್ಕೊಳಗಾಗಿದ್ದರು. ಹೀಗಾಗಿ ವಿರಾಟ್ ಕೊಹ್ಲಿಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದ್ದರು ಎಂದು ವರದಿಯಾಗಿದೆ.
”ಬಿಸಿಸಿಐ ಅಧ್ಯಕ್ಷರು ಕೊಹ್ಲಿಯ ಹೇಳಿಕೆಯ ನಂತರ ಶೋಕಾಸ್ ನೋಟಿಸ್ ಜಾರಿ ಮಾಡಲು ಮುಂದಾಗಿದ್ದರು. ಆದರೆ, ಮಂಡಳಿಯ ಇತರ ಸದಸ್ಯರ ಮನವೊಲಿಸಿದ ನಂತರ ಅವರು ಹಾಗೆ ಮಾಡಲಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತೊರೆಯುವ ಮೊದಲು ಗಂಗೂಲಿಗೆ ತಿಳಿದಿರಲಿಲ್ಲ. ಈ ಕುರಿತು ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರಿಗೆ ಮಾತ್ರ ತಿಳಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-2 ಅಂತರದಿಂದ ಸೋಲುತ್ತಿದ್ದಂತೆ ಇತ್ತ ವಿರಾಟ್ ಕೊಹ್ಲಿ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಬಿಸಿಸಿಐ ಮುಂದೊಂದು ದಿನ ಟೆಸ್ಟ್ ತಂಡದ ನಾಯಕನ ಸ್ಥಾನದಿಂದಲೂ ಕೆಳಗಿಳಿಸಲಿದೆ ಎಂಬ ಸೂಚನೆ ಕೊಹ್ಲಿಗೆ ಸಿಕ್ಕಿರುವುದೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಇದೀಗ ಕೊಹ್ಲಿಗೆ ಸೌರವ್ ಗಂಗೂಲಿ ಶೋಕಾಸ್ ನೋಟಿಸ್ ಜಾರಿ ಮಾಡಲು ಮುಂದಾಗಿರುವ ವಿಚಾರ ಕೂಡ ಬಹಿರಂಗವಾಗಿದ್ದು, ಟೆಸ್ಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವ ಕೊಹ್ಲಿ ದಿಢೀರ್ ನಿರ್ಧಾರಕ್ಕೆ ಇದೆಲ್ಲವೂ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Sourav Ganguly wanted to issue show cause notice to Virat Kohli)