Champions Trophy 2025: ಪಂದ್ಯ ಪೂರ್ಣಗೊಳ್ಳುವ ಮುನ್ನವೇ ಸೆಮೀಸ್ ಟಿಕೆಟ್ ಪಡೆದ ಆಫ್ರಿಕಾ; ಅಫ್ಘಾನ್ ಔಟ್
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ಗೆ ನಾಲ್ಕು ತಂಡಗಳು ಅರ್ಹತೆ ಪಡೆದಿವೆ. ಭಾರತ ಮತ್ತು ನ್ಯೂಜಿಲೆಂಡ್ (ಗುಂಪು A) ಹಾಗೂ ಆಸ್ಟ್ರೇಲಿಯಾ (ಗುಂಪು B) ಈಗಾಗಲೇ ಅರ್ಹತೆ ಪಡೆದಿದ್ದರೆ, ಇದೀಗ ದಕ್ಷಿಣ ಆಫ್ರಿಕಾ ಬಿ ಗುಂಪಿನಿಂದ ಅರ್ಹತೆ ಪಡೆದುಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ಫಲಿತಾಂಶಕ್ಕೂ ಮೊದಲೇ ದಕ್ಷಿಣ ಆಫ್ರಿಕಾದ ಅರ್ಹತೆ ಖಚಿತವಾಗಿದೆ. ಇದರೊಂದಿಗೆ ಅಫ್ಘಾನಿಸ್ತಾನದ ಸೆಮಿಫೈನಲ್ ಆಸೆಗಳು ಭಗ್ನಗೊಂಡಿವೆ.

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಸೆಮಿಫೈನಲ್‌ಗೆ 4 ತಂಡಗಳು ಅಧಿಕೃತವಾಗಿ ಎಂಟ್ರಿಕೊಟ್ಟಿವೆ. ಎ ಗುಂಪಿನಲ್ಲಿ ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ತಲುಪಿದ್ದವು. ಇತ್ತ ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಕೂಡ ಸೆಮೀಸ್ಗೆ ಅರ್ಹತೆ ಗಳಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ (South Africa) ಕೂಡ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಅಚ್ಚರಿಯ ಸಂಗತಿಯೆಂದರೆ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದ ಫಲಿತಾಂಶ ಪ್ರಕಟವಾಗುವ ಮೊದಲೇ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಟಿಕೆಟ್ ಪಡೆದುಕೊಂಡಿದೆ. ಆಫ್ರಿಕಾ ಸೆಮೀಸ್ಗೇರುತ್ತಿದ್ದಂತೆ, ಅಫ್ಘಾನಿಸ್ತಾನದ ಭರವಸೆಯೂ ಭಗ್ನಗೊಂಡಿದೆ. ಇದೀಗ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಸೋತರೂ ಸೆಮಿಫೈನಲ್ ಆಡಲಿದೆ.
ಸೆಮಿಫೈನಲ್ಗೇರಿದ ಆಫ್ರಿಕಾ
ಮಾರ್ಚ್ 1 ರ ಶನಿವಾರ ಕರಾಚಿಯಲ್ಲಿ ನಡೆದ ಗ್ರೂಪ್ ಬಿ ನ ಕೊನೆಯ ಪಂದ್ಯದ ಮೇಲೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸೆಮೀಸ್ ಹಾದಿ ನಿರ್ಧಾರವಾಗುತ್ತಿತ್ತು. ನಿನ್ನೆ ನಡೆದ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರಿಂದಾಗಿ, ಸೆಮಿಫೈನಲ್ ತಲುಪುವ ಅಫ್ಘನ್ ತಂಡದ ಆಸೆಗೆ ದೊಡ್ಡ ಹೊಡೆತ ಬಿದ್ದಿತ್ತು. ಆದಾಗ್ಯೂ ಅಫ್ಘನ್ ತಂಡಕ್ಕೆ ಕೊನೆಯ ಅವಕಾಶವಿತ್ತು. ಅದೆನೇಂದರೆ ಇಂದು ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಫ್ರಿಕಾ 210 ಕ್ಕೂ ಹೆಚ್ಚು ರನ್ಗಳಿಂದ ಹೀನಾಯವಾಗಿ ಸೋತರೆ ಮಾತ್ರ ಅಫ್ಘಾನಿಸ್ತಾನ ನೆಟ್ ರನ್ರೇಟ್ ಆದಾರದ ಮೇಲೆ ಸೆಮಿಫೈನಲ್ ತಲುಪಬಹುದಿತ್ತು.
200 ರ ಗಡಿ ದಾಟದ ಇಂಗ್ಲೆಂಡ್
ವಾಸ್ತವವಾಗಿ ಈ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಲಾ 3 ಅಂಕಗಳನ್ನು ಹೊಂದಿದ್ದವು. ಆದರೆ ನೆಟ್ ರನ್ ರೇಟ್ನಲ್ಲಿ ದಕ್ಷಿಣ ಆಫ್ರಿಕಾ ಬಹಳ ಮುಂದಿತ್ತು. ಅಂತಹ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತವಾಗಿತ್ತು. ಆದಾಗ್ಯೂ ಇಂದಿನ ಪಂದ್ಯದಲ್ಲಿ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ 207 ರನ್ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ ಸೋತಿದ್ದರೆ ಮಾತ್ರ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್ ಆಡುವ ಅವಕಾಶ ಸಿಗುತ್ತಿತ್ತು, ಆದರೆ ಇದಕ್ಕೆ ಅವಕಾಶ ನೀಡದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡವನ್ನು 200 ರ ಗಡಿ ದಾಟಲು ಅವಕಾಶ ನೀಡಲಿಲ್ಲ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಕದನಕ್ಕೆ ಮಳೆ ಅಡ್ಡಿ; ವರ್ಷಧಾರೆಯಿಂದ ಟಾಸ್ ಕೂಡ ನಡೆದಿಲ್ಲ
ಸೆಮಿಫೈನಲ್‌ನಲ್ಲಿ ಯಾರು ಎದುರಾಳಿ?
ಈಗ ಪ್ರಶ್ನೆ ಏನೆಂದರೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಯಾರನ್ನು ಎದುರಿಸಲಿದೆ? ಎಂಬುದು. ಇದರ ಸ್ಪಷ್ಟ ಚಿತ್ರಣ ಸಿಗಬೇಕೆಂದರೆ ಮಾರ್ಚ್ 2 ರ ಭಾನುವಾರದಂದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಹೊರಬೀಳಬೇಕು. ಇದೀಗ ನಡೆಯುತ್ತಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ, ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, ಗ್ರೂಪ್ ಬಿ ನಲ್ಲಿ 5 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆಯಲಿದೆ. ಇದು ಸಾಧ್ಯವಾದರೆ, ಮಾರ್ಚ್ 5 ರಂದು ನಡೆಯುವ 2ನೇ ಸೆಮಿಫೈನಲ್‌ನಲ್ಲಿ ಆಫ್ರಿಕಾ, ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಿದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೋತರೆ ಕೇವಲ 3 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲಿದೆ. ಆಗ ಮಾರ್ಚ್ 4 ರಂದು ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ಎದುರಿಸಬೇಕಾಗುತ್ತದೆ. ಆದರೆ ಇದೆಲ್ಲವೂ ಭಾರತ-ನ್ಯೂಜಿಲೆಂಡ್ ಪಂದ್ಯದ ನಂತರವೇ ನಿರ್ಧಾರವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:36 pm, Sat, 1 March 25
