IND vs SA 1st Test: ಭಾರತಕ್ಕೆ ಆಘಾತಕಾರಿ ಸೋಲು: ಇತಿಹಾಸ ಸೃಷ್ಟಿಸುವ ಕನಸು ನುಚ್ಚುನೂರು
South Africa vs India 1st Test: ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಭಾರತ ತಂಡದ ಕನಸು ನುಚ್ಚುನೂರಾಗಿದೆ. ಸೆಂಚುರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಆಫ್ರಿಕಾ ಇನ್ನಿಂಗ್ಸ್ ಮತ್ತು 32 ರನ್ಗಳಿಂದ ಗೆದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ (India vs South Africa) ಹೀನಾಯ ಸೋಲು ಕಂಡಿದೆ. ಆಫ್ರಿಕನ್ ಬೌಲಿಂಗ್ ದಾಳಿಗೆ ನಲುಗಿದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 131 ರನ್ಗಳಿಗೆ ಆಲೌಟ್ ಆಗುವ ಮೂಲಕ ಹರಿಣಗಳ ನಾಡಲ್ಲಿ ಸರಣಿ ಗೆದ್ದು ಇತಿಹಾಸ ಸೃಷ್ಟಿಸುವ ಅವಕಾಶವನ್ನು ಕೈಚೆಲ್ಲಿದೆ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಮತ್ತು 32 ರನ್ಗಳಿಂದ ಗೆದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಸರಣಿ ಸಮಬಲಕ್ಕೆ ಭಾರತ ಉಳಿದಿರುವ ಒಂದು ಪಂದ್ಯವನ್ನು ಗೆಲ್ಲಲೇ ಬೇಕು.
ಈ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. 107 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆಯಾಗಿ ನಿಂತರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ ಶತಕ ಸಿಡಿಸಿದರು. ರಾಹುಲ್ 137 ಎಸೆತಗಳಲ್ಲಿ 14 ಫೋರ್ ಹಾಗೂ 4 ಸಿಕ್ಸ್ನೊಂದಿಗೆ 101 ರನ್ ಬಾರಿಸಿ ಔಟಾದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 245 ರನ್ಗಳಿಸಿ ಆಲೌಟ್ ಆಯಿತು. ಸೌತ್ ಆಫ್ರಿಕಾ ಪರ ಕಗಿಸೊ ರಬಾಡ 5 ವಿಕೆಟ್ ಪಡೆದರೆ, ನಾಂಡ್ರೆ ಬರ್ಗರ್ 3 ವಿಕೆಟ್ ಕಬಳಿಸಿದರು.
ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ತಂಡ ಖರೀದಿಸಿದ ನಟ ಸೂರ್ಯ
ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ (5) ಬೇಗನೆ ಔಟ್ ಆದರು. ಆದರೆ ಮತ್ತೋರ್ವ ಆರಂಭಿಕ ಡೀನ್ ಎಲ್ಗರ್ ಟೀಮ್ ಇಂಡಿಯಾ ಬೌಲರ್ಗಳ ಬೆಂಡೆತ್ತಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಎಲ್ಗರ್ ಟೋನಿ ಝೋರ್ಝಿ (28) ಜೊತೆಗೂಡಿ 2ನೇ ವಿಕೆಟ್ಗೆ 93 ರನ್ಗಳ ಜೊತೆಯಾಟವಾಡಿದರು. ಕೀಗನ್ ಪೀಟರ್ಸನ್ (2) ಕ್ಲೀನ್ ಬೌಲ್ಡ್ ಆದರು. ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಡೀನ್ ಎಲ್ಗರ್ ಆಕರ್ಷಕ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು. ಎಲ್ಗರ್ಗೆ ಉತ್ತಮ ಸಾಥ್ ನೀಡಿದ ಡೇವಿಡ್ ಬೆಂಡಿಂಗ್ಯಾಮ್ 56 ರನ್ಗಳ ಕೊಡುಗೆ ನೀಡಿದರು.
3ನೇ ದಿನ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ ಎಲ್ಗರ್ 287 ಎಸೆತಗಳನ್ನು ಎದುರಿಸಿ 28 ಫೋರ್ಗಳೊಂದಿಗೆ 185 ರನ್ ಬಾರಿಸಿದರು. ಮಾರ್ಕೊ ಯಾನ್ಸೆನ್ ಅಜೇಯ 84 ರನ್ ಗಳಿಸಿದರು. ಆಫ್ರಿಕಾ 108.4 ಓವರ್ಗಳಲ್ಲಿ 408 ರನ್ಗೆ ಆಲೌಟ್ ಆಯಿತು. 163 ರನ್ಗಳ ಮುನ್ನಡೆ ಪಡೆದುಕೊಂಡಿತು.
ಬಳಿಕ ಎರಡನೇ ಇನ್ನಿಂಗ್ಸ್ ಶುರುಮಾಡಿದ ಭಾರತ ಮತ್ತೊಮ್ಮೆ ಆಫ್ರಿಕನ್ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ರೋಹಿತ್ ಸೊನ್ನೆ ಸುತ್ತಿದರೆ ಜೈಸ್ವಾಲ್ 5, ಗಿಲ್ 26, ಅಯ್ಯರ್ 6, ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಕೆಎಲ್ ರಾಹುಲ್ 4, ಅಶ್ವಿನ್ 0 ಗೆ ಔಟಾದರು. ಆದರೆ, ಮತ್ತೊಂದು ತುದಿಯಲ್ಲಿ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಆದರೆ, ಕೊಹ್ಲಿ 82 ಎಸೆತಗಳಲ್ಲಿ 76 ರನ್ ಗಳಿಸಿ ಔಟ್ ಆಗುತ್ತಿದ್ದಂತೆ ಭಾರತ ಕೂಡ 131 ರನ್ಗಳಿಗೆ ಆಲೌಟ್ ಆಯಿತು. ಆಫ್ರಿಕಾ ಪರ ಬರ್ಗರ್ 4, ಜಾನ್ಸೆನ್ 3 ಹಾಗೂ ರಬಾಡ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ