South Africa vs India: ಸೆಂಚುರಿಯನ್ನಲ್ಲಿ ಇತಿಹಾಸ ಸೃಷ್ಟಿಸುತ್ತಾ ಭಾರತ: ರೋಚಕತೆ ಪಡೆದುಕೊಂಡ ಐದನೇ ದಿನದಾಟ
India vs South Africa, Day 5: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಐದನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಬ್ಯಾಟಿಂಗ್‌ನಲ್ಲಿ ಕೊಂಚ ಎಡವಿದರೂ ವೇಗಿಗಳ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಂಚೂರಿಯನ್‌ನಲ್ಲಿ ಮೊಟ್ಟ ಮೊದಲ ಟೆಸ್ಟ್ ಗೆದ್ದು ಇತಿಹಾಸ ಸೃಷ್ಟಿಸುತ್ತಾ ಎಂಬುದು ನೋಡಬೇಕಿದೆ.
ಸೆಂಚುರಿಯನ್ನ ಸೂಪರ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯ (1st Test) ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇನ್ನು ಒಂದು ದಿನದ ಆಟ ಬಾಕಿ ಉಳಿದಿದ್ದು, ಟೀಮ್ ಇಂಡಿಯಾ ಗೆಲುವಿಗೆ ಆಫ್ರಿಕಾನ್ನರ 6 ವಿಕೆಟ್ಗಳು ಬೇಕಾಗಿದ್ದರೆ, ಇತ್ತ ಹರಿಣಗಳಿಗೆ ಗೆಲ್ಲಲು 211 ರನ್‌ಗಳ ಅವಶ್ಯತೆಯಿದೆ. ಆಫ್ರಿಕಾಕ್ಕೆ ಗೆಲುವು ದೂರದ ಮಾತಾಗಿದ್ದು ಕ್ರೀಸ್ ಕಚ್ಚಿ ನಿಂತಿರುವ ಡೇನ್ ಎಲ್ಗರ್ (Dean Elgar) ಪಂದ್ಯವನ್ನು ಕನಿಷ್ಠ ಡ್ರಾ ಮಾಡುವತ್ತ ಗಮನ ಹರಿಸಬಹುದು. ಟೀಮ್ ಇಂಡಿಯಾ (Team India) ನೀಡಿರುವ 305 ರನ್‌ಗಳ ಗುರಿ ಬೆನ್ನತ್ತಿರುವ ಆಫ್ರಿಕಾನ್ನರು ನಾಲ್ಕನೇ ದಿನದಾಟದ ಅಂತ್ಯಕ್ಕೆ 40.5 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 94 ರನ್ ಬಾರಿಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 18 ರನ್ ಕಲೆಹಾಕಿದ್ದ ಭಾರತವು ನಾಲ್ಕನೇ ದಿನದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ನೈಟ್ ವಾಚ್‌ಮನ್ ಆಗಿ ಬಂದಿದ್ದ ಶಾರ್ದೂಲ್ ಠಾಕೂರ್ 10 ರನ್‌ಗಳಿಸಿ ರಬಾಡ ಬೌಲಿಂಗ್‌ನಲ್ಲಿ ಔಟಾದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಕೆ. ಎಲ್ ರಾಹುಲ್ 23 ರನ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ (18) ಆಟ ಕೂಡ ಹೆಚ್ಚು ಹೊತ್ತು ನಡೆಯಲಿಲ್ಲ. ತಾಳ್ಮೆಯ ಆಟವಾಡುತ್ತಿದ್ದ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲೂ ತಂಡದ ಕೈ ಹಿಡಿಯಲಿಲ್ಲ. 64 ಎಸೆತಗಳಲ್ಲಿ 16 ರನ್ ಕಲೆಹಾಕಿ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದರು.
ಅತ್ಯಂತ ದೃಢ ವಿಶ್ವಾಸದಿಂದ ಆಡುತ್ತಿದ್ದ ಅಜಿಂಕ್ಯಾ ರಹಾನೆ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ತಂಡಕ್ಕೆ ಆಧಾರವಾದರೂ ಎನ್ನುವಷ್ಟರಲ್ಲಿ, ಕೆಟ್ಟ ಹೊಡೆತಕ್ಕೆ ಕೈ ಹಾಕಿ 20 ರನ್‌ಗೆ ನಿರ್ಗಮಿಸಿದರು. ಆರ್. ಅಶ್ವಿನ್ 14ರನ್‌ಗೆ ಇನ್ನಿಂಗ್ಸ್ ಮುಗಿಸಿದರೆ, ಶೇಕಡಾ 100ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್ 34 ಎಸೆತಗಳಲ್ಲಿ 34ರನ್ ಗಳಿಸಿದರು. ಅಂತಿಮವಾಗಿ ಭಾರತ 10 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ 130ರನ್ ಮುನ್ನಡೆ ಸಾಧಿಸಿದರ ಪರಿಣಾಮ ಭಾರತ 304 ರನ್‌ಗಳ ಮುನ್ನಡೆ ಪಡೆದುಕೊಂಡಿತು.
305 ರನ್‌ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಆಫ್ರಿಕಾ ಪರ ನಾಯಕ ಡೀನ್ ಎಲ್ಗರ್ (52*) ಬಿಟ್ಟರೆ, ಏಡೆನ್ ಮಾರ್ಕ್ರಮ್(1), ಕೀಗನ್ ಪೀಟರ್ಸನ್(17), ರಾಸಿ ವ್ಯಾನ್ ಡೆರ್ ಡುಸೆನ್(11) ಹಾಗೂ ಕೇಶವ್ ಮಹರಾಜ್ (8) ಭಾರತದ ಮಾರಕ ಬೌಲಿಂಗ್ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಭಾರತದ ಪರ ಜಸ್‌ಪ್ರಿತ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಒಟ್ಟಾರೆ ಇಂದಿನ ಅಂತಿಮ ಐದನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಬ್ಯಾಟಿಂಗ್‌ನಲ್ಲಿ ಕೊಂಚ ಎಡವಿದರೂ ವೇಗಿಗಳ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಸೆಂಚೂರಿಯನ್‌ನಲ್ಲಿ ಮೊಟ್ಟ ಮೊದಲ ಟೆಸ್ಟ್ ಗೆದ್ದು ಇತಿಹಾಸ ಸೃಷ್ಟಿಸುತ್ತಾ ಎಂಬುದು ನೋಡಬೇಕಿದೆ.
ಸ್ಕೋರು ವಿವರ (4ನೇ ದಿನಾಂತ್ಯಕ್ಕೆ):
ಭಾರತ ಮೊದಲ ಇನ್ನಿಂಗ್ಸ್ 105.3 ಓವರ್ 327/10
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 62.3 ಓವರ್ 197/10
ಭಾರತ ಎರಡನೇ ಇನ್ನಿಂಗ್ಸ್ 50.3 ಓವರ್ 174/10
ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ 40.5 ಓವರ್ 94/4
(South Africa vs India India making history in the Centurion All eyes on IND vs SA 1st Test Day 5)