Asia Cup 2022: ಶ್ರೀಲಂಕಾದಲ್ಲಿ ಬಗೆಹರಿಯದ ಬಿಕ್ಕಟ್ಟು; ಏಷ್ಯಾ ಕಪ್ ಬೇರೆಡೆ ಆಯೋಜಿಸಲು ಎಸಿಸಿ ಚಿಂತನೆ

| Updated By: ಪೃಥ್ವಿಶಂಕರ

Updated on: Jul 13, 2022 | 6:16 PM

Asia Cup 2022: ಶ್ರೀಲಂಕಾ ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಾಂಗ್ಲಾದೇಶವನ್ನು ಏಷ್ಯಾಕಪ್ ಆಯೋಜಿಸಲು ಸದ್ಯಕ್ಕೆ ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ ಎಂಬ ಸುದ್ದಿ ಹರಿದಾಡಲು ಆರಂಭಿಸಿದೆ.

Asia Cup 2022: ಶ್ರೀಲಂಕಾದಲ್ಲಿ ಬಗೆಹರಿಯದ ಬಿಕ್ಕಟ್ಟು; ಏಷ್ಯಾ ಕಪ್ ಬೇರೆಡೆ ಆಯೋಜಿಸಲು ಎಸಿಸಿ ಚಿಂತನೆ
ಪ್ರಾತಿನಿಧಿಕ ಚಿತ್ರ
Follow us on

ಈ ವರ್ಷದ ಏಷ್ಯಾ ಕಪ್ (Asia Cup 2022) ಅನ್ನು ಶ್ರೀಲಂಕಾ ಕ್ರಿಕೆಟ್ ತಂಡ (SriLanka Cricket team ) ಆಯೋಜಿಸುವ ಜವಬ್ದಾರಿ ವಹಿಸಿಕೊಂಡಿದೆ. ಆದರೆ ಶ್ರೀಲಂಕಾ ಪ್ರಸ್ತುತ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಬಾಂಗ್ಲಾದೇಶವನ್ನು ಏಷ್ಯಾಕಪ್ ಆಯೋಜಿಸಲು ಸದ್ಯಕ್ಕೆ ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ ಎಂಬ ಸುದ್ದಿ ಹರಿದಾಡಲು ಆರಂಭಿಸಿದೆ. ಶ್ರೀಲಂಕಾದಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ, ಬಾಂಗ್ಲಾದೇಶ ಈ ಬಾರಿಯ ಏಷ್ಯಾ ಕಪ್ ಅನ್ನು ಆಗಸ್ಟ್‌ನಲ್ಲಿ ಆಯೋಜಿಸುವ ನಿರೀಕ್ಷೆಗಳಿವೆ. ಹೀಗಾಗಿ ಪಂದ್ಯಾವಳಿ ಶ್ರೀಲಂಕಾದಿಂದ ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಶ್ರೀಲಂಕಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ, ಆದರೆ ಎಸಿಸಿ ಈ ತಿಂಗಳ ಕೊನೆಯಲ್ಲಿ ತನ್ನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಸ್ಪೋರ್ಟ್ಸ್‌ಕೀಡಾ ವರದಿಯ ಪ್ರಕಾರ ಶ್ರೀಲಂಕಾದಲ್ಲಿ ಪ್ರಸ್ತುತ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಎಸಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದಿದ್ದರೂ, ಆಸ್ಟ್ರೇಲಿಯಾ ಇತ್ತೀಚೆಗೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದರೆ, ಭಾರತೀಯ ಮಹಿಳಾ ಕ್ರಿಕೆಟ್ ತಂಡವೂ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದೆ. ಆದರೆ ಶ್ರೀಲಂಕಾ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಕ್ರಿಕೆಟ್ ಪಂದ್ಯಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಾಗಾಗಿ ಎಸಿಸಿ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ.

ಬಾಂಗ್ಲಾದೇಶ 2016 ರ ಏಷ್ಯಾ ಕಪ್ ಮತ್ತು 2014 ರ ಟಿ 20 ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಅಲ್ಲಿ ಶ್ರೀಲಂಕಾ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇತರ ಏಷ್ಯಾದ ರಾಷ್ಟ್ರಗಳು ಅರ್ಹತಾ ಪಂದ್ಯಾವಳಿಗಳ ಮೂಲಕ ಭಾಗವಹಿಸುತ್ತವೆ. ಈ ಪಂದ್ಯಾವಳಿಗೆ ಎಂಟ್ರಿಕೊಡಲು ಸೆಣಸಾಡಲಿರುವ ಇತರ ತಂಡಗಳೆಂದರೆ, ಯುಎಇ, ಕುವೈತ್, ಸಿಂಗಾಪುರ್ ಮತ್ತು ಹಾಂಗ್ ಕಾಂಗ್‌. ಪ್ರಸ್ತುತ, ಅರ್ಹತಾ ಪಂದ್ಯಾವಳಿಯ ವೇಳಾಪಟ್ಟಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ.

ರಾಜೀನಾಮೆ ಘೋಷಿಸಿದ್ದಾರೆ

ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಬುಧವಾರ ಸೇನಾ ವಿಮಾನದಲ್ಲಿ ದೇಶದಿಂದ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಜೊತೆಗೆ ದೇಶದ ಆರ್ಥಿಕತೆಯನ್ನು ನಿರ್ವಹಿಸದ ತಮ್ಮ ಮತ್ತು ಅವರ ಕುಟುಂಬದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವ ನಡುವೆ ರಾಜಪಕ್ಸೆ ಬುಧವಾರ ರಾಜೀನಾಮೆ ಘೋಷಿಸಿದ್ದಾರೆ. ದ್ವೀಪ ರಾಷ್ಟ್ರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಕೋಪದ ನಡುವೆ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ, ನಿವಾಸವನ್ನು ದ್ವಂಸಗೊಳಿಸಿದ್ದಾರೆ. ಇದರ ನಂತರ ಗೋತಬಯ ರಾಜಪಕ್ಸೆ ಈ ಘೋಷಣೆ ಮಾಡಿದರು.

Published On - 6:15 pm, Wed, 13 July 22