
ಸಹ ಆತಿಥೇಯ ರಾಷ್ಟ್ರ ಶ್ರೀಲಂಕಾ 2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಪಂದ್ಯಾವಳಿಯ 16ನೇ ಪಂದ್ಯದಲ್ಲಿ ಓಮನ್ ತಂಡವನ್ನು ಎದುರಿಸಿದ್ದ ಶ್ರೀಲಂಕಾ (Sri Lanka vs Oman) ಬರೋಬ್ಬರಿ 105 ರನ್‌ಗಳ ಅಂತರದ ಗೆಲುವು ದಾಖಲಿಸಿತು. ಈ ಮೂಲಕ ಲಂಕಾ ತಂಡ ಈ ಆವೃತ್ತಿಯಲ್ಲಿ ಅತಿ ದೊಡ್ಡ ಅಂತರದಿಂದ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಂಕಾಗೂ ಮೊದಲು ಯಾವುದೇ ತಂಡ ಈ ಆವೃತ್ತಿಯಲ್ಲಿ 100 ಕ್ಕೂ ಅಧಿಕ ರನ್‌ಗಳಿಂದ ಗೆದ್ದಿರಲಿಲ್ಲ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 225 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಓಮನ್ ಕೇವಲ 120 ರನ್‌ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಮೂವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿದರು. ಆದಾಗ್ಯೂ ತಂಡದ ಆರಂಭ ಕಳಪೆಯಾಗಿತ್ತು. ಕಾಮಿಲ್ ಮಿಶ್ರಾ ಕೇವಲ 8 ರನ್‌ಗಳಿಗೆ ಔಟಾದರೆ, ಪಾಥುಮ್ ನಿಸ್ಸಂಕಾ ಕೂಡ ಕೇವಲ 13 ರನ್ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಆ ನಂತರ ಬಂದ ಮೂರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಬಾರಿಸಿ ಓಮನ್ ತಂಡದ ಭರವಸೆಯನ್ನು ನುಚ್ಚುನೂರು ಮಾಡಿದರು. ಕುಸಲ್ ಮೆಂಡಿಸ್ 45 ಎಸೆತಗಳಲ್ಲಿ 61 ರನ್ ಗಳಿಸಿದರೆ, ಪವನ್ ರತ್ನಾಯಕೆ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 19 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಶ್ರೀಲಂಕಾ ಪರ ದಸುನ್ ಶನಕ ಅತಿ ವೇಗದ ಟಿ20 ವಿಶ್ವಕಪ್ ಅರ್ಧಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು.
ಈ ಬೃಹತ್ ಗುರಿ ಬೆನ್ನಟ್ಟಿದ ಓಮನ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ 6 ಓವರ್‌ಗಳಲ್ಲಿಯೇ ಓಮನ್‌ನ ಮೂರು ವಿಕೆಟ್‌ಗಳು ಪತನಗೊಂಡವು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನೀಡಿದ ಮೊಹಮ್ಮದ್ ನದೀಮ್ 56 ಎಸೆತಗಳಲ್ಲಿ 53 ರನ್ ಬಾರಿಸಿದರು. ಅವರನ್ನು ಹೊರತುಪಡಿಸಿ, ಓಮನ್‌ನ ಬೇರೆ ಯಾವುದೇ ಬ್ಯಾಟ್ಸ್ಮನ್ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಜತಿಂದರ್ ಸಿಂಗ್ 1, ಹಮದ್ ಮಿರ್ಜಾ 9, ವಿನಾಯಕ ಶುಕ್ಲಾ 1 ರನ್ ಗಳಿಸಲಷ್ಟೇ ಶಕ್ತರಾದರು. ಶ್ರೀಲಂಕಾ ಪರ ದುಷ್ಮಂತ ಚಮೀರ ಮತ್ತು ಮಹೀಶ್ ತೀಕ್ಷಣ ತಲಾ 2 ವಿಕೆಟ್ ಪಡೆದರೆ, ದುನಿತ್ ವೆಲಲಗೆ 1, ದುಷ್ಮನ್ ಹೇಮಂತ ಮತ್ತು ಕಾಮಿಂದು ಮೆಂಡಿಸ್ ಕೂಡ ತಲಾ 1 ವಿಕೆಟ್ ಪಡೆದರು.
ಶ್ರೀಲಂಕಾ ತಂಡದ ಈ ಗೆಲುವಿನ ವಿಶೇಷವೆಂದರೆ ಟಿ20 ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ 100 ಕ್ಕೂ ಹೆಚ್ಚು ರನ್‌ಗಳಿಂದ ಪಂದ್ಯ ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮೊದಲು ಲಂಕಾ ಪಡೆ 2007 ರಲ್ಲಿ ಕೀನ್ಯಾ ತಂಡವನ್ನು 172 ರನ್‌ಗಳಿಂದ ಸೋಲಿಸಿತ್ತು. ಇದೀಗ ಶ್ರೀಲಂಕಾ 19 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ 100 ಕ್ಕೂ ಹೆಚ್ಚು ರನ್‌ಗಳಿಂದ ಜಯ ಸಾಧಿಸಿದೆ. ಕುತೂಹಲಕಾರಿಯಾಗಿ, ಭಾರತ ತಂಡ ಇದುವರೆಗೆ ಟಿ20 ವಿಶ್ವಕಪ್‌ನಲ್ಲಿ 100 ರನ್ ಅಥವಾ ಅದಕ್ಕಿಂತ ಹೆಚ್ಚು ಅಂತರದಿಂದ ಗೆದ್ದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ