ರೋಚಕ ಕ್ರಿಕೆಟ್ ಪಂದ್ಯ: ಗಳಿಸಿದ್ದೇ 30 ರನ್..ಆದರೂ ಪಂದ್ಯ ಟೈ ಆಯ್ತು..!
ಸಾಮಾನ್ಯವಾಗಿ ಟಿ20 ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ ಈ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಸೂಪರ್ ಓವರ್ ನಿಯಮವಿಲ್ಲ.
ಸಾಮಾನ್ಯವಾಗಿ T20 ಕ್ರಿಕೆಟ್‌ನಲ್ಲಿ ಪಂದ್ಯಗಳು ಬಹಳ ರೋಚಕವಾಗಿರುತ್ತವೆ. ಕೆಲವೊಮ್ಮೆ ಕೊನೆಯ ಎಸೆತದವರೆಗೂ ಪಂದ್ಯವನ್ನು ಯಾರು ಗೆಲ್ಲುತ್ತಾರೆ ಎಂಬುದು ತಿಳಿದಿರುವುದಿಲ್ಲ. ಆದರೆ ತಂಡವೊಂದು 30 ರನ್‌ಗಳಿಗೆ ಆಲೌಟ್ ಆಗಿದ್ದರೆ, ಸೋಲು ಕಟ್ಟಿಟ್ಟ ಬುತ್ತಿ ಎನ್ನಬಹುದು. ಆದರೆ ಶ್ರೀಲಂಕಾದಲ್ಲಿ ನಡೆದ ಟಿ20 ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶವೊಂದು ಮೂಡಿಬಂದಿದೆ. ಲಂಕಾದಲ್ಲಿ ನಡೆಯುತ್ತಿರುವ ಮೇಜರ್ ಕ್ಲಬ್ ಟಿ20 ಟೂರ್ನಿಯಲ್ಲಿ ಕಲುತಾರಾ ಟೌನ್ ಕ್ಲಬ್ ಮತ್ತು ಗಾಲೆ ಕ್ರಿಕೆಟ್ ಕ್ಲಬ್ ಮುಖಾಮುಖಿಯಾಗಿತ್ತು. ಆದರೆ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ಓವರ್ಗಳನ್ನು ಕಡಿತಗೊಳಿಸಲಾಯಿತು.
ಅದರಂತೆ 6 ಓವರ್ಗಳ ಪಂದ್ಯ ನಡೆಸಲಾಯಿತು. ಮೊದಲು ಬ್ಯಾಟ್ ಮಾಡಿದ ಕಲುತಾರಾ ಟೌನ್ ಕ್ಲಬ್ ತಂಡವು 30 ರನ್ಗಳಿಸಲಷ್ಟೇ ಶಕ್ತರಾದರು. ಈ ಗುರಿಯನ್ನು ಬೆನ್ನತ್ತಿದ ಗಾಲೆ ಕ್ರಿಕೆಟ್ ಕ್ಲಬ್ ಕೂಡ 30 ರನ್ಗೆ ಇನಿಂಗ್ಸ್ ಅಂತ್ಯಗೊಳಿಸುವ ಮೂಲಕ ಪಂದ್ಯವು ರೋಚಕ ಟೈನಲ್ಲಿ ಅಂತ್ಯ ಕಂಡಿತು.
ಈ ಪಂದ್ಯದಲ್ಲಿ ಬೌಲ್ ಮಾಡಿದ 12 ಓವರ್‌ಗಳಲ್ಲಿ, ಕೇವಲ ಎರಡು ಓವರ್‌ಗಳು ಮಾತ್ರ ವಿಕೆಟ್‌ರಹಿತವಾಗಿದ್ದವು. ಅಂದರೆ ಎರಡೂ ತಂಡಗಳ ಉಳಿದ 10 ಓವರ್‌ಗಳಲ್ಲಿ ವಿಕೆಟ್ ಸಿಕ್ಕಿದ್ದವು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಎಡಗೈ ಸ್ಪಿನ್ನರ್‌ಗಳು ಒಟ್ಟು 15 ವಿಕೆಟ್‌ಗಳನ್ನು ಕಬಳಿಸಿ ಮಿಂಚಿರುವುದು ವಿಶೇಷ.
ಸ್ಪಿನ್ನರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಎಡಗೈ ಸ್ಪಿನ್ನರ್‌ಗಳು ಆಟದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರಿಂದ ಒಟ್ಟು 15 ವಿಕೆಟ್‌ಗಳನ್ನು ಉರುಳಿಸಿದ್ದರು. ಇನ್ನು ನಾಲ್ಕು ರನ್ ಔಟ್ ಮತ್ತು ಎರಡು ಸ್ಟಂಪಿಂಗ್‌ಗಳು ಕೂಡ ಮೂಡಿಬಂದಿದ್ದವು.
ಕಲುತಾರಾ ಟೌನ್ ಕ್ಲಬ್ ಸ್ಪಿನ್ನರ್ ಇನ್ಶಾಕ ಸಿರಿವರ್ಧನ ಎರಡು ಓವರ್‌ಗಳಲ್ಲಿ 5 ರನ್ಗೆ 5 ವಿಕೆಟ್‌ಗಳನ್ನು ಉರುಳಿಸಿ ಮಿಂಚಿದರು. ಮತ್ತೊಂದೆಡೆ, ಗಾಲೆ ಬ್ಯಾಟರ್ ಕೌಸಿತ ಕೊಡಿತುವಕ್ಕು (12 ರನ್) ಮಾತ್ರ ಈ ಪಂದ್ಯದಲ್ಲಿ ಎರಡಂಕಿ ಮೊತ್ತ ಕಲೆಹಾಕಿದ್ದರು. ಪಂದ್ಯವು ಟೈನಲ್ಲಿ ಅಂತ್ಯ ಕಂಡರೂ ಸೂಪರ್ ಓವರ್ ಆಡಿಸಿರಲಿಲ್ಲ.
ಸಾಮಾನ್ಯವಾಗಿ ಟಿ20 ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ ಈ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಸೂಪರ್ ಓವರ್ ನಿಯಮವಿಲ್ಲ. ಆದ್ದರಿಂದ ಕಲುತಾರಾ ಟೌನ್ ಕ್ಲಬ್ ಮತ್ತು ಗಾಲೆ ಕ್ರಿಕೆಟ್ ಕ್ಲಬ್ಗಳಿಗೆ ಸಮಾನ ಅಂಕ ನೀಡಲಾಯಿತು. ಗಾಲೆ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಕಲುತಾರಾ ತಂಡ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:22 pm, Mon, 6 June 22