Asia Cup 2025: ಸಂಜು ಬದಲಿಗೆ ವೈಭವ್​ಗೆ ಆರಂಭಿಕ ಜವಾಬ್ದಾರಿ ನೀಡಿ ಎಂದ 1983 ವಿಶ್ವಕಪ್ ಹೀರೋ

Asia Cup 2025: ಕೃಷ್ಣಮಾಚಾರಿ ಶ್ರೀಕಾಂತ್ ಅವರು 2025ರ ಏಷ್ಯಾಕಪ್‌ಗಾಗಿ ತಮ್ಮ ಆರಂಭಿಕ ಜೋಡಿಯನ್ನು ಘೋಷಿಸಿದ್ದು, ಅದರಲ್ಲಿ ಸಂಜು ಸ್ಯಾಮ್ಸನ್ ಇಲ್ಲದಿರುವುದು ಆಶ್ಚರ್ಯಕರ ಸಂಗತಿ. ಅವರು ಅಭಿಷೇಕ್ ಶರ್ಮಾ ಅವರನ್ನು ಮೊದಲ ಆಯ್ಕೆಯಾಗಿ ಮತ್ತು ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ ಅಥವಾ ಸಾಯಿ ಸುದರ್ಶನ್ ಅವರಲ್ಲಿ ಒಬ್ಬರನ್ನು ಎರಡನೇ ಆಯ್ಕೆಯಾಗಿ ಆಯ್ಕೆ ಮಾಡುವಂತೆ ಸಲಹೆ ನೀಡಿದ್ದಾರೆ ವೈಭವ್ ಸೂರ್ಯವಂಶಿ ಅವರನ್ನು ತಮ್ಮ 15 ಸದಸ್ಯರ ತಂಡದಲ್ಲಿ ಸೇರಿಸಿಕೊಳ್ಳುವುದಾಗಿ ಶ್ರೀಕಾಂತ್ ಹೇಳಿದ್ದಾರೆ.

Asia Cup 2025: ಸಂಜು ಬದಲಿಗೆ ವೈಭವ್​ಗೆ ಆರಂಭಿಕ ಜವಾಬ್ದಾರಿ ನೀಡಿ ಎಂದ 1983 ವಿಶ್ವಕಪ್ ಹೀರೋ
Vaibhav, Sanju

Updated on: Aug 18, 2025 | 7:16 PM

2025 ರ ಏಷ್ಯಾಕಪ್‌ಗೆ (Asia Cup 2025) ಭಾರತ ತಂಡವನ್ನು ಇನ್ನೂ ಘೋಷಿಸಲಾಗಿಲ್ಲ. ಆದಾಗ್ಯೂ ಈ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ತೀರ್ವ ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ ಒಂದು ಸ್ಥಾನಕ್ಕೆ ಹಲವು ಆಟಗಾರರು ಸ್ಪರ್ಧೆಯಲ್ಲಿರುವುದು. ಟೀಂ ಇಂಡಿಯಾದಲ್ಲಿ (Team India) ಸ್ಥಾನ ಪಡೆಯಲು ಪ್ರತಿಯೊಂದು ಕ್ರಮಾಂಕಕ್ಕೂ ಏನಿಲ್ಲವೆಂದರೂ ಮೂರು ಮೂರು ಆಟಗಾರರು ಪೈಪೋಟಿಯಲ್ಲಿದ್ದಾರೆ. ಹೀಗಾಗಿ ಆಯ್ಕೆ ಮಂಡಳಿ ಯಾರ್ಯಾರಿಗೆ ಮಣೆ ಹಾಕುತ್ತೆ ಎಂಬುದು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ. ಆದರೆ ಈ ಟೂರ್ನಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಮೊದಲೇ, 1983 ರ ವಿಶ್ವಕಪ್ ವಿಜೇತ ಮತ್ತು ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು 2025 ರ ಏಷ್ಯಾಕಪ್‌ಗಾಗಿ ತಮ್ಮ ನೆಚ್ಚಿನ ಆರಂಭಿಕ ಜೋಡಿಯನ್ನು ಹೆಸರಿಸಿದ್ದಾರೆ. ಅಚ್ಚರಿಯೆಂದರೆ ಅವರ ಆಯ್ಕೆಯಲ್ಲಿ ಸಂಜು ಸ್ಯಾಮ್ಸನ್ ಅವರ ಹೆಸರಿಲ್ಲ.

ವೈಭವ್ ಪರ ಬ್ಯಾಟ್ ಬೀಸಿದ ಶ್ರೀಕಾಂತ್

ಕೃಷ್ಣಮಾಚಾರಿ ಶ್ರೀಕಾಂತ್ ಅವರು ಯುವ ತಾರೆಯರಾದ ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ ಮತ್ತು ಸಾಯಿ ಸುದರ್ಶನ್ ಅವರನ್ನು ಭಾರತದ ಆರಂಭಿಕ ಜೋಡಿಯಾಗಿ ಬೆಂಬಲಿಸಿದ್ದಾರೆ. ಅದೇ ಸಮಯದಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕ ಪಾತ್ರದಿಂದ ದೂರವಿಡುವಂತೆ ಅವರು ಸಲಹೆ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿರುವ ಶ್ರೀಕಾಂತ್, ‘ಅಭಿಷೇಕ್ ಶರ್ಮಾ ನನ್ನ ಮೊದಲ ಆಯ್ಕೆ ಮತ್ತು ಅವರನ್ನು ಖಂಡಿತವಾಗಿಯೂ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಬೇಕು. ಹಾಗೆಯೇ ಅವರ ಜೊತೆಗಾರರಾಗಿ ಯಶಸ್ವಿ ಜೈಸ್ವಾಲ್ , ಸಾಯಿ ಸುದರ್ಶನ್ ಅಥವಾ ವೈಭವ್ ಸೂರ್ಯವಂಶಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕೆಂದು ಶ್ರೀಕಾಂತ್ ಸೂಚಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಾರ್ಟ್ ಬಾಲ್‌ಗಳ ವಿರುದ್ಧ ಆಡಲು ಸ್ಯಾಮ್ಸನ್ ಸ್ವಲ್ಪ ಕಷ್ಟಪಟ್ಟರು ಎಂಬ ಕಾರಣಕ್ಕಾಗಿ ಕೃಷ್ಣಮಾಚಾರಿ ಶ್ರೀಕಾಂತ್ ಸಂಜು ಸ್ಯಾಮ್ಸನ್ ಅವರನ್ನು ಆರಂಭಿಕ ಸ್ಪರ್ಧಿಯಾಗಿ ಪರಿಗಣಿಸಿಲ್ಲ. ‘ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶಾರ್ಟ್ ಬಾಲ್ ವಿರುದ್ಧ ಸಂಜು ಸ್ಯಾಮ್ಸನ್ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ . ನನ್ನ ಪ್ರಕಾರ, ಅವರಿಗೆ ಆರಂಭಿಕ ಸ್ಥಾನ ಸೂಕ್ತವಲ್ಲ. ನಾನು ಆಯ್ಕೆದಾರನಾಗಿದ್ದರೆ , ಅಭಿಷೇಕ್ ಶರ್ಮಾ ನನ್ನ ಮೊದಲ ಆಯ್ಕೆಯಾಗುತ್ತಿದ್ದರು. ಎರಡನೇ ಆಯ್ಕೆಯಾಗಿ, ನಾನು ವೈಭವ್ ಸೂರ್ಯವಂಶಿ ಅಥವಾ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡುತ್ತೇನೆ’ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಅಂಡರ್ -19 ತಂಡ ಪ್ರಕಟ; ವೈಭವ್​ಗೆ ಅವಕಾಶ

ವೈಭವ್​ಗೆ ಅವಕಾಶ ನೀಡುವಂತೆ ಆಗ್ರಹ

ವೈಭವ್ ಸೂರ್ಯವಂಶಿ ಬಗ್ಗೆಯೂ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್, ‘ನನ್ನ 15 ಸದಸ್ಯರ ತಂಡದಲ್ಲಿ ವೈಭವ್ ಸೂರ್ಯವಂಶಿಯನ್ನೂ ಸೇರಿಸಿಕೊಳ್ಳುತ್ತೇನೆ . ಅವರು ಅದ್ಭುತವಾಗಿ ಆಡುತ್ತಿದ್ದಾರೆ. ಇವರಲ್ಲದೆ ಸಾಯಿ ಸುದರ್ಶನ್ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದವರು. ಅವರು ಮತ್ತು ಯಶಸ್ವಿ ಜೈಸ್ವಾಲ್ ತುಂಬಾ ಚೆನ್ನಾಗಿ ಪ್ರದರ್ಶನ ನೀಡುತ್ತಿದ್ದಾರೆ. ಆದ್ದರಿಂದ, ಸುದರ್ಶನ್, ಸೂರ್ಯವಂಶಿ ಅಥವಾ ಜೈಸ್ವಾಲ್ ಅವರಲ್ಲಿ ಒಬ್ಬರು ಅಭಿಷೇಕ್ ಅವರೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಬೇಕು. ಇದು ನನ್ನ ಆಯ್ಕೆಯಾಗಿದೆ. ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ಅವರಲ್ಲಿ ಒಬ್ಬರನ್ನು ವಿಕೆಟ್ ಕೀಪರ್ -ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಬಹುದು’ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ