ಏಷ್ಯಾಕಪ್ 2022 ರಲ್ಲಿ (Asia Cup 2022) ಭಾರತ ತಂಡ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಬುಧವಾರ ಹಾಂಗ್ ಕಾಂಗ್ ವಿರುದ್ಧ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ (India vs Hong Kong) 40 ರನ್‌ಗಳ ಅಮೋಘ ಗೆಲುವು ಕಂಡಿತು. ಬೌಲರ್ಗಳ ಸಂಘಟಿತ ಪ್ರದರ್ಶನ ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav), ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದೆ. ಸೂರ್ಯ ಕೇವಲ 26 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಸಿಡಿಸಿ ಅಜೇಯ 68 ರನ್ ಚಚ್ಚಿದರು. ಈ ಮೂಲಕ ನೂತನ ದಾಖಲೆ ಕೂಡ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಭಾರತದ ನಾಯಕ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕೆಎಲ್ ರಾಹುಲ್ ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇದರ ಫಲವಾಗಿ ಕೇವಲ 22 ಎಸೆತಗಳಲ್ಲೇ ಅರ್ಧಶತಕದ ಗಡಿ ಮುಟ್ಟಿದರು. ಡೀಪ್ ಎಕ್ಸ್ಟ್ರಾ ಕವರ್ನಲ್ಲಿ ಸಿಕ್ಸ್ ಸಿಡಿಸುವ ಮೂಲಕ ಸೂರ್ಯ ಅರ್ಧಶತಕ ಪೂರೈಸಿದರು. ಈ ಮೂಲಕ ನೂತನ ದಾಖಲೆ ಕೂಡ ಮಾಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತ ಒಂಬತ್ತನೆ ಬ್ಯಾಟರ್ ಇವರಾಗಿದ್ದಾರೆ. ಅಲ್ಲದೆ 22 ಎಸೆತಗಳಲ್ಲೇ ಅರ್ಧಶತಕ ಬಾರಿಸಿರುವ ರೋಹಿತ್ ಶರ್ಮಾ ದಾಖಲೆಯನ್ನೂ ಸರಿಗಟ್ಟಿದ್ದಾರೆ.
ಪಂದ್ಯದ 20ನೇ ಓವರ್ನ ಸಂಪೂರ್ಣ 6 ಎಸೆತವನ್ನೂ ಎದುರಿಸಿದ ಸೂರ್ಯಕುಮಾರ್ ಬರೋಬ್ಬರಿ 26 ರನ್ ಕಲೆಹಾಕಿದರು. ಈ ಓವರ್ನಲ್ಲಿ ಬರೋಬ್ಬರಿ 4 ಸಿಕ್ಸರ್ ಸಿಡಿಸಿ ಪರಾಕ್ರಮ ಮೆರೆದರು. ಮೊದಲ ಎಸೆತದಲ್ಲಿ ಫುಲ್ಟಾಸ್ ಬಾಲ್ಗೆ ಕವರ್ನಲ್ಲಿ ಸ್ವೀಪ್ ಶಾಟ್ ಹೊಡೆದರು. 2ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ ಸಿಕ್ಸ್, ಮೂರನೇ ಎಸೆತದಲ್ಲಿ ನೇರವಾಗಿ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. 4ನೇ ಎಸೆತ ಡಾಟ್ ಆದರೆ, 5ನೇ ಎಸೆತದಲ್ಲಿ ಫೈನ್ಲೆಗ್ ಮೂಲಕ ಮತ್ತೊಂದು ಸಿಕ್ಸ್ ಮೂಡಿಬಂತು. ಕೊನೆಯ ಎಸೆತದಲ್ಲಿ 2 ರನ್ ಕಲೆಹಾಕಿದರು.
Suryakumar Yadav 4 sixes back to back #INDvsHK #Surya pic.twitter.com/AOVt6T1wPc
— DD Sports (@Mahesh13657481) August 31, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ ವಿಕೆಟ್ ಕೂಡ ಕಳೆದುಕೊಂಡಿತು. ರೋಹಿತ್ ಶರ್ಮಾ 13 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರು. ಆದರೆ ಕೆಎಲ್ ರಾಹುಲ್ ಆಮೆಗತಿಯ ಬ್ಯಾಟಿಂಗ್‌ನಿಂದ ಭಾರತ ಮಧ್ಯಮ ಓವರ್ನಲ್ಲಿ ರನ್ ಗಳಿಸಲು ಪರದಾಡಿತು. ರಾಹುಲ್ 39 ಎಸೆಗಳಲ್ಲಿ 2 ಸಿಕ್ಸರ್ ಸಿಡಿಸಿ 36 ರನ್ ಗಳಿಸಿ ಔಟಾದರು. ನಂತರ ಶುರುವಾಗಿದ್ದು ವಿರಾಟ್–ಸೂರ್ಯ ಆಟ.
ಕೇವಲ 22 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಸೂರ್ಯ, ಒಟ್ಟು 26 ಎಸೆತಗಳಲ್ಲಿ ತಲಾ 6 ಫೋರ್ ಮತ್ತು ಸಿಕ್ಸರ್‌ಗಳೊಂದಿಗೆ ಅಜೇಯ 68 ರನ್‌ಗಳ ಕೊಡುಗೆ ಕೊಟ್ಟರು. ಇತ್ತ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 1 ಫೋರ್ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 59 ರನ್ ಸಿಡಿಸಿದರು. ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192ರನ್ ಕಲೆಹಾಕಿತು.
ಟಾರ್ಗೆಟ್ ಬೆನ್ನತ್ತಿದ್ದ ಹಾಂಗ್ ಕಾಂಗ್ ತಂಡ ಕೂಡ ಸ್ಪೋಟಕ ಆರಂಭ ಪಡೆದುಕೊಳ್ಳುವ ಜೊತೆ ವಿಕೆಟ್ ಕಳೆದುಕೊಂಡಿತು. ನಾಯಕ ನಿಜಕತ್ ಖಾನ್ 10 ರನ್ ಗಳಿಸಿದ್ದಾಗ ಜಡೇಜಾ ಅವರ ರನೌಟ್ಗೆ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಬಾಬರ್ ಹಯಾತ್, 33 ಎಸೆತಗಳಲ್ಲಿ 3 ಫೋರ್ ಮತ್ತು 2 ಸಿಕ್ಸರ್‌ನೊಂದಿಗೆ 41 ರನ್ ಬಾರಿಸಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹಾಂಗ್ ಕಾಂಗ್ 20 ಓವರ್‌ಗಳಲ್ಲಿ 152/5 ರನ್ ಗಳಿಸಿತಷ್ಟೆ. ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ತಲಾ 1 ವಿಕೆಟ್ ಪಡೆದರು.
Published On - 7:59 am, Thu, 1 September 22