Suryakumar Yadav: ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ಹೋಲಿಕೆ, ನಾನು ನಾನಾಗಿಯೇ ಇರ್ತೀನಿ ಎಂದ ಸೂರ್ಯಕುಮಾರ್ ಯಾದವ್​

| Updated By: ಝಾಹಿರ್ ಯೂಸುಫ್

Updated on: Feb 08, 2022 | 6:33 PM

India vs West Indies: ನಾನಂತು ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ದನಿದ್ದೇನೆ ಎಂದು ತಿಳಿಸಿರುವ ಸೂರ್ಯಕುಮಾರ್, ಟೀಮ್ ಮ್ಯಾನೇಜ್‌ಮೆಂಟ್ ನನ್ನನ್ನು ಬ್ಯಾಟಿಂಗ್‌ಗೆ ಕಳುಹಿಸುವ ಕ್ರಮಾಂಕದಲ್ಲಿ ಆಡುತ್ತೇನೆ.

Suryakumar Yadav: ಆಸ್ಟ್ರೇಲಿಯಾ ಕ್ರಿಕೆಟಿಗನಿಗೆ ಹೋಲಿಕೆ, ನಾನು ನಾನಾಗಿಯೇ ಇರ್ತೀನಿ ಎಂದ ಸೂರ್ಯಕುಮಾರ್ ಯಾದವ್​
Suryakumar Yadav
Follow us on

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ತಂಡ ಮೊದಲ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದು, ಇದೀಗ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಗೆಲ್ಲುವ ಇರಾದೆಯಲ್ಲಿದೆ. ಇನ್ನು ಎರಡನೇ ಏಕದಿನ ಪಂದ್ಯಕ್ಕೆ ಕೆಎಲ್ ರಾಹುಲ್ ಕೂಡ ತಂಡಕ್ಕೆ ಮರಳಿದ್ದು, ಮಯಾಂಕ್ ಅಗರ್ವಾಲ್ ಕೂಡ ಆಯ್ಕೆಗೆ ಲಭ್ಯವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಏಕೆಂದರೆ ಮೊದಲ ಏಕದಿನದಲ್ಲಿ ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಇಶಾನ್ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಜೊತೆ ಮೊದಲ ವಿಕೆಟ್‌ಗೆ 84 ರನ್ ಜೊತೆಯಾಟವನ್ನು ಆಡಿದ್ದರು. ಈ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 36 ಎಸೆತಗಳಲ್ಲಿ 28 ರನ್‌ಗಳನ್ನು ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 2 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದ್ದರು. ಇದೀಗ ಕೆಎಲ್ ರಾಹುಲ್ ತಂಡಕ್ಕೆ ಮರಳಿರುವ ಕಾರಣ ತಂಡದಿಂದ ಯಾರನ್ನು ಕೈ ಬಿಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಈ ಬಗ್ಗೆ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್, ತಂಡದ ಪ್ಲ್ಯಾನ್ ಅನ್ನು ಬಹಿರಂಗಪಡಿಸಲು ನಿರಾಕರಿಸಿದರು. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಜೊತೆಗಾರ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್, “ನೀವು ತಪ್ಪಾದ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಅವರು (ರಾಹುಲ್ ಮತ್ತು ಮಯಾಂಕ್ ಅಗರ್ವಾಲ್) ಅಭ್ಯಾಸ ನಡೆಸಿದ್ದಾರೆ. ಇದೀಗ ರಾಹುಲ್ ಮತ್ತು ಮಯಾಂಕ್ ಆಗಮನ ನಮ್ಮ ತಂಡವನ್ನು ಬಲಪಡಿಸುತ್ತದೆ. ಕೊನೆಯಲ್ಲಿ ಯಾರು ಆಡುತ್ತಾರೆ ಮತ್ತು ಯಾರು ಆಡಬಾರದು ಎಂಬುದನ್ನು ತಂಡದ ಮ್ಯಾನೇಜ್ಮೆಂಟ್ ನಿರ್ಧರಿಸುತ್ತದೆ ಎಂದು ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ.

ಇದೇ ವೇಳೆ ನಾನಂತು ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ದನಿದ್ದೇನೆ ಎಂದು ತಿಳಿಸಿರುವ ಸೂರ್ಯಕುಮಾರ್,
ಟೀಮ್ ಮ್ಯಾನೇಜ್‌ಮೆಂಟ್ ನನ್ನನ್ನು ಬ್ಯಾಟಿಂಗ್‌ಗೆ ಕಳುಹಿಸುವ ಕ್ರಮಾಂಕದಲ್ಲಿ ಆಡುತ್ತೇನೆ. ನಾನು 3, 4 ಮತ್ತು 5 ರಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಹೀಗಾಗಿ ನನಗೆ ಯಾವುದೇ ಕ್ರಮಾಂಕ ವಿಷಯವಲ್ಲ ಎಂದು ತಿಳಿಸಿದರು.

ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಆಡುತ್ತಿರುವ ಬಗ್ಗೆ ಪ್ರಶಂಸಿದ ಪತ್ರಕರ್ತರೊಬ್ಬರು, ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯಾದ ಶ್ರೇಷ್ಠ ಮೈಕೆಲ್ ಬೆವನ್ ಅವರೊಂದಿಗೆ ಹೋಲಿಸಿದರು. ಇದಕ್ಕೆ ಉತ್ತರಿಸಿದ ಸೂರ್ಯ, “ನಾನು ಇದೀಗ ಸೂರ್ಯಕುಮಾರ್ ಯಾದವ್ ಆಗಿರುತ್ತೀನಿ. ನಾನು ಭಾರತಕ್ಕಾಗಿ 5 ರಿಂದ 7 ಪಂದ್ಯಗಳನ್ನು ಮಾತ್ರ ಆಡಿದ್ದೇನೆ. ದೊಡ್ಡ ಮಟ್ಟದಲ್ಲೇನು ಆಡಿಲ್ಲ. ಹಾಗಾಗಿ ನಾನು ಸೂರ್ಯಕುಮಾರ್ ಆಗಿಯೇ ಇರುತ್ತೀನಿ ಎಂದರು.

ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ಸೂರ್ಯಕುಮಾರ್ 5ನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಅಜೇಯ 62 ರನ್ ಜೊತೆಯಾಟವಾಡಿದರು. ಅಲ್ಲದೆ 36 ಎಸೆತಗಳಲ್ಲಿ ಸೂರ್ಯ 34 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(Suryakumar Yadav’s epic reply to journalist’s Michael Bevan comparison)