AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂತಹ ದಿನ ಬಂದಾಗ ಐಪಿಎಲ್​ಗೆ ವಿದಾಯ ಹೇಳ್ತೀನಿ’; ಕೊಹ್ಲಿ ಮನದಾಳ ತೆರೆದಿಟ್ಟ ಸಹ ಆಟಗಾರ

Virat Kohli's IPL Retirement Plan Revealed: ವಿರಾಟ್ ಕೊಹ್ಲಿ ಐಪಿಎಲ್​ನಿಂದ ನಿವೃತ್ತಿಯಾಗುವ ಬಗ್ಗೆ ಆರ್‌ಸಿಬಿ ಆಟಗಾರ ಸ್ವಸ್ತಿಕ್ ಚಿಕಾರ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಪೂರ್ಣ ಪ್ರಮಾಣದ ಆಟಗಾರರಾಗಿ ಉಳಿಯುವವರೆಗೂ ಆಡುವ ಬಯಕೆ ಹೊಂದಿದ್ದಾರೆ ಮತ್ತು "ಇಂಪ್ಯಾಕ್ಟ್ ಪ್ಲೇಯರ್" ಆಗಿ ಆಡುವ ದಿನವೇ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಹೇಳಿದ್ದಾರೆ.

‘ಅಂತಹ ದಿನ ಬಂದಾಗ ಐಪಿಎಲ್​ಗೆ ವಿದಾಯ ಹೇಳ್ತೀನಿ’; ಕೊಹ್ಲಿ ಮನದಾಳ ತೆರೆದಿಟ್ಟ ಸಹ ಆಟಗಾರ
Virat Kohli, Swastik Chikara
ಪೃಥ್ವಿಶಂಕರ
|

Updated on:Aug 23, 2025 | 7:23 PM

Share

ಐಪಿಎಲ್‌ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ಮಡದಿ ಮಕ್ಕಳೊಂದಿಗೆ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಆದಾಗ್ಯೂ ಕೊಹ್ಲಿ ಏಕದಿನ ಮಾದರಿಯಲ್ಲಿ ಆಡುತ್ತಿರುವ ಕಾರಣ, ಅಲ್ಲಿಯೇ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಕೊಹ್ಲಿಯ ಫಿಟ್ನೆಸ್ ನೋಡಿದರೆ ಅವರು ಇನ್ನು ಕೆಲವು ವರ್ಷ ಕ್ರಿಕೆಟ್ ಆಡುವುದು ಖಚಿತ. ಆದಾಗ್ಯೂ ಕೊಹ್ಲಿ ಐಪಿಎಲ್​ನಿಂದ ಯಾವಾಗ ನಿವೃತ್ತಿಯಾಗುತ್ತೇನೆ ಎಂಬ ಮಾಹಿತಿಯನ್ನು ತಂಡದ ಸಹ ಆಟಗಾರ ಸ್ವಸ್ತಿಕ್ ಚಿಕಾರ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇದೀಗ ಆ ಮಾಹಿತಿಯನ್ನು ಚಿಕಾರ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಹೇಳಿದ್ದೇನು?

ರೆವ್‌ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆರ್‌ಸಿಬಿ ಪರ ಆಡುವ ಸ್ವಸ್ತಿಕ್ ಚಿಕಾರ, ‘2025 ರ ಐಪಿಎಲ್  ಸಮಯದಲ್ಲಿ, ವಿರಾಟ್ ಭಯ್ಯಾ ನಾನು ಸಂಪೂರ್ಣವಾಗಿ ಫಿಟ್ ಆಗಿರುವವರೆಗೆ ಕ್ರಿಕೆಟ್ ಆಡುತ್ತೇನೆ ಎಂದು ಹೇಳಿದ್ದರು. ನಾನು ಇಂಪ್ಯಾಕ್ಟ್ ಆಟಗಾರನಾಗಿ ಆಡುವುದಿಲ್ಲ, ಬದಲಿಗೆ ಸಿಂಹದಂತೆ ಆಡುತ್ತೇನೆ. ನಾನು ಸಂಪೂರ್ಣ 20 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿ ನಂತರ ಬ್ಯಾಟಿಂಗ್‌ಗೆ ಬರುತ್ತೇನೆ. ನಾನು ಇಂಪ್ಯಾಕ್ಟ್ ಆಟಗಾರನಾಗಿ ಆಡುವ ದಿನ, ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆ ಎಂದು ಹೇಳಿದ್ದರು ಎಂದು ಚಿಕಾರ ಹೇಳಿದ್ದಾರೆ.

ಈ ಆವೃತ್ತಿಯಲ್ಲಿ ಆರ್​ಸಿಬಿ ಚೊಚ್ಚಲ ಐಪಿಎಲ್ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಡೀ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಈ ಆವೃತ್ತಿಯಲ್ಲಿ ಕೊಹ್ಲಿ ಆಡಿದ 15 ಪಂದ್ಯಗಳಲ್ಲಿ 54.75ರ ಸರಾಸರಿಯಲ್ಲಿ 657 ರನ್ ಕಲೆಹಾಕಿದ್ದರು. ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ ಅಜೇಯ 73 ರನ್ ಆಗಿತ್ತು. ಇದರ ಫಲವಾಗಿ 18 ವರ್ಷಗಳಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು.

ಇಂಪ್ಯಾಕ್ಟ್ ಪ್ಲೇಯರ್ ನಿಯಮ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ 2023 ರಿಂದ ಪ್ರಾರಂಭವಾಯಿತು. ಈ ನಿಯಮದ ಪ್ರಕಾರ, ತಂಡವು 5 ಆಟಗಾರರನ್ನು ಬದಲಿ ಆಟಗಾರರಾಗಿ ಆಯ್ಕೆ ಮಾಡುತ್ತದೆ. ಆದಾಗ್ಯೂ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಲಾಗಿರುವುದಿಲ್ಲ. ಆದರೆ ತಂಡವು ಬಯಸಿದರೆ, ಪಂದ್ಯದ ಸಮಯದಲ್ಲಿ ಯಾವುದೇ ಸಮಯದಲ್ಲಿ ಈ ಐದು ಬದಲಿ ಆಟಗಾರರಲ್ಲಿ ಒಬ್ಬರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಅವರು ಬೌಲರ್, ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್ ಆಗಿರಬಹುದು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ

ವಿರಾಟ್ ಕೊಹ್ಲಿ ಐಪಿಎಲ್ ಅಂಕಿಅಂಶಗಳು

ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ 267 ಪಂದ್ಯಗಳನ್ನು ಆಡಿರುವ ಕೊಹ್ಲಿ 39.55 ಸರಾಸರಿ ಮತ್ತು 132.86 ಸ್ಟ್ರೈಕ್ ರೇಟ್‌ನಲ್ಲಿ 8661 ರನ್ ಗಳಿಸಿದ್ದಾರೆ. ಹಾಗೆಯೇ ವಿರಾಟ್ ಐಪಿಎಲ್‌ನಲ್ಲಿ ಎಂಟು ಶತಕಗಳು ಮತ್ತು 63 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Sat, 23 August 25