Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
Syed Mushtaq Ali Trophy 2021: 177 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವಿರ್ದಭ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಥರ್ವ ಥೈಡೆ ಹಾಗೂ ಗಣೇಶ್ ಸತೀಶ್ ಅಬ್ಬರಿಸಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy 2021) 2ನೇ ಸೆಮಿಫೈನಲ್ನಲ್ಲಿ ವಿದರ್ಭ ವಿರುದ್ದ ರೋಚಕ ಜಯ ಸಾಧಿಸಿ ಕರ್ನಾಟಕ (Karnataka) ತಂಡ ಫೈನಲ್ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ವಿದರ್ಭ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡರು. ಆದರೆ ಈ ನಿರ್ಧಾರವನ್ನು ತಲೆಕೆಳಗಾಗುವಂತೆ ಕರ್ನಾಟಕ ತಂಡ ಭರ್ಜರಿ ಆರಂಭ ಪಡೆಯಿತು. ಇಂದಿನ ಪಂದ್ಯದಲ್ಲಿ ರೋಹನ್ ಕದಮ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಮನೀಷ್ ಪಾಂಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ 132 ರನ್ ಕಲೆಹಾಕಿದ ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಅದರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೋಹನ್ ಕದಮ್ ವಿದರ್ಭ ಬೌಲರುಗಳ ಬೆಂಡೆತ್ತಿದರು. ಅದರಂತೆ 4 ಸಿಕ್ಸ್ ಹಾಗೂ 7 ಬೌಂಡರಿಯೊಂದಿಗೆ 56 ಎಸೆತಗಳಲ್ಲಿ 87 ರನ್ ಬಾರಿಸಿ ಕದಮ್ ಔಟಾದರು.
ಮತ್ತೊಂದೆಡೆ ಮನೀಷ್ ಪಾಂಡೆ ಕೂಡ ಅರ್ಧಶತಕ ಪೂರೈಸಿದರು. 3 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 42 ಎಸೆತಗಳಲ್ಲಿ 54 ರನ್ ಬಾರಿಸಿ ಪಾಂಡೆ ಕೂಡ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಕರ್ನಾಟಕ ತಂಡವು 17 ಓವರ್ನಲ್ಲಿ 150ರ ಗಡಿದಾಟಿತ್ತು. ಆ ಬಳಿಕ ಬಂದ ಅಭಿನವ್ ಮನೋಹರ್ 13 ಎಸೆತಗಳಲ್ಲಿ 2 ಸಿಕ್ಸ್, 2 ಫೋರ್ನೊಂದಿಗೆ 27 ರನ್ ಬಾರಿಸಿದರು. 18 ಓವರ್ ಮುಕ್ತಾಯದ ವೇಳೆಗೆ 174 ರನ್ಗಳಿಸಿದ್ದ ಕರ್ನಾಟಕ ನಾಟಕೀಯ ಕುಸಿತಕ್ಕೊಳಗಾಯಿತು.
ಕರುಣ್ ನಾಯರ್ (5), ಅನಿರುದ್ಧ್ ಜೋಶಿ (0), ಶರತ್ (0), ಸುಚಿತ್ (0) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಪರಿಣಾಮ ಕರ್ನಾಟಕ ತಂಡವು ಅಂತಿಮ ಓವರ್ನಲ್ಲಿ ಕಲೆಹಾಕಿದ್ದು ಕೇವಲ 1 ರನ್ ಮಾತ್ರ. ಅದರಂತೆ ಕರ್ನಾಟಕ ತಂಡವು ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ಗೆ ಇನಿಂಗ್ಸ್ ಅಂತ್ಯಗೊಳಿಸಿತು.
177 ರನ್ಗಳ ಬೃಹತ್ ಗುರಿ ಬೆನ್ನತ್ತಿದ ವಿರ್ದಭ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಥರ್ವ ಥೈಡೆ ಹಾಗೂ ಗಣೇಶ್ ಸತೀಶ್ ಅಬ್ಬರಿಸಿದ್ದರು. ಪರಿಣಾಮ ಮೊದಲ ವಿಕೆಟ್ಗೆ 5 ಓವರ್ನಲ್ಲಿ 46 ರನ್ ಮೂಡಿಬಂತು. ಈ ಹಂತದಲ್ಲಿ ಕೆಸಿ ಕಾರ್ಯಪ್ಪ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸುಚಿತ್ ಎಸೆತದಲ್ಲಿ ಗಣೇಶ್ ಸತೀಶ್ (31) ಕೂಡ ವಿಕೆಟ್ ಒಪ್ಪಿಸಿದರು. ಇದಾಗ್ಯೂ ವಿದರ್ಭ ರನ್ ಗತಿಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಮೊದಲ 10 ಓವರ್ನಲ್ಲಿ 81 ರನ್ ಕಲೆಹಾಕಿತು.
12ನೇ ಓವರ್ ಎಸೆದ ಕರುಣ್ ನಾಯರ್ ಕರ್ನಾಟಕಕ್ಕೆ ಮೂರನೇ ಯಶಸ್ಸು ತಂದುಕೊಟ್ಟರೆ, ಅದರ ಬೆನ್ನಲ್ಲೇ ಕೆಸಿ ಕಾರ್ಯಪ್ಪ ಮತ್ತೊಂದು ವಿಕೆಟ್ ಉರುಳಿಸಿದರು. ಅದರಂತೆ ಕೊನೆಯ 6 ಓವರ್ಗಳಲ್ಲಿ ವಿದರ್ಭ ತಂಡಕ್ಕೆ 64 ರನ್ಗಳ ಅವಶ್ಯಕತೆಯಿತ್ತು. ಇದೇ ದರ್ಶನ್ ಕೂಡ ಒಂದು ವಿಕೆಟ್ ಕಬಳಿಸಿದರು. ಅಂತಿಮ 4 ಓವರ್ಗಳಲ್ಲಿ ವಿದರ್ಭ ತಂಡವು 46 ರನ್ಗಳ ಟಾರ್ಗೆಟ್ ಪಡೆಯಿತು.
ದರ್ಶನ್ ಎಂಬಿ ಎಸೆದ 18ನೇ ಓವರ್ನಲ್ಲಿ 15 ರನ್ ಬಾರಿಸುವ ಮೂಲಕ ವಿದರ್ಭ ಬ್ಯಾಟರ್ಗಳು ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಕೊನೆಯ 2 ಓವರ್ಗಳಲ್ಲಿ 27 ರನ್ಗಳ ಗುರಿ ಪಡೆಯಿತು. ವಿಜಯಕುಮಾರ್ ವೈಶಾಖ್ ಎಸೆದ 19ನೇ ಓವರ್ನ ಮೊದಲ ಎಸೆತದಲ್ಲೇ ಅಕ್ಷಯ್ ಕರ್ನೆವಾರ್ ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ 13 ರನ್ ಕಲೆಹಾಕಿದರು.
ಕೊನೆಯ ಓವರ್ನಲ್ಲಿ ವಿದರ್ಭ ತಂಡಕ್ಕೆ ಗೆಲ್ಲಲು 14 ರನ್ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ನ ಮೊದಲ ಎಸೆತದಲ್ಲೇ ವಿದ್ಯಾಧರ್ ಪಾಟೀಲ್ ಅಕ್ಷಯ್ ಕರ್ನೆವಾರ್ (22) ವಿಕೆಟ್ ಪಡೆದರು. 2ನೇ ಎಸೆತದಲ್ಲಿ ಕೇವಲ 1 ರನ್ ನೀಡಿದರು. 3ನೇ ಎಸೆತದಲ್ಲಿ ವೈಡ್ ಎಸೆದರು. ಪರಿಣಾಮ ವಿದರ್ಭ ತಂಡಕ್ಕೆ ಕೊನೆಯ 4 ಎಸೆತಗಳಲ್ಲಿ 12 ರನ್ ಬೇಕಿತ್ತು. ಹೆಚ್ಚುವರಿ ಎಸೆತದಲ್ಲಿ 1 ರನ್ ನೀಡಿದರು. 4ನೇ ಎಸೆತದಲ್ಲಿ ಮತ್ತೆ 1 ರನ್. ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿತ್ತು. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ ಬೌಂಡರಿ ನೀಡಿದರೂ, ಕರ್ನಾಟಕ ತಂಡವು 4 ರನ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಫೈನಲ್ ಪ್ರವೇಶಿಸಿದೆ. ಫೈನಲ್ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ತಂಡಗಳು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
Published On - 4:25 pm, Sat, 20 November 21