USA vs BAN: ಐತಿಹಾಸಿಕ ಗೆಲುವು: ಬಾಂಗ್ಲಾ ತಂಡವನ್ನು ಬಗ್ಗು ಬಡಿದ ಯುಎಸ್ಎ
USA vs Bangladesh: ಯುಎಸ್ಎ ತಂಡವು ಬಲಿಷ್ಠ ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ ಗೆದ್ದ ಹಿರಿಮೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಯುಎಸ್ಎ ತಂಡ ಏಕೈಕ ಬಾರಿ ಮಾತ್ರ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಟೀಮ್ ವಿರುದ್ಧ ಗೆದ್ದಿತ್ತು.

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್ಎ (USA) ತಂಡ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್ಗೂ ಮುನ್ನ ಯುಎಸ್ಎ ಕಠಿಣ ಪೈಪೋಟಿ ಒಡ್ಡುವ ಸೂಚನೆ ನೀಡಿದೆ. ಹೂಸ್ಟನ್ನ ಪ್ರೈರೀ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ತೌಹಿದ್ ಹೃದೋಯ್ 47 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 58 ರನ್ ಬಾರಿಸಿದರು. ಇನ್ನು ಅಂತಿಮ ಓವರ್ಗಳ ವೇಳೆ ಮಹಮದುಲ್ಲಾ 31 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು.
154 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯುಎಸ್ಎ ತಂಡಕ್ಕೆ ಆರಂಭಿಕ ಆಟಗಾರ ಸ್ಟೀವನ್ ಟೇಲರ್ (28) ಉತ್ತಮ ಆರಂಭ ಒದಗಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರಿಸ್ ಗೌಸ್ 23 ರನ್ಗಳನ್ನು ಬಾರಿಸಿದರು.
ಇದಾಗ್ಯೂ ಯುಎಸ್ಎ ತಂಡವು 94 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ ಕೋರಿ ಅ್ಯಂಡರ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಹರ್ಮೀತ್ ಸಿಂಗ್ ಜೊತೆಗೂಡಿ 6ನೇ ವಿಕೆಟ್ಗೆ ಉತ್ತಮ ಜೊತೆಯಾಟ ಪ್ರದರ್ಶಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಅಂತಿಮವಾಗಿ ಕೋರಿ ಅ್ಯಂಡರ್ಸನ್ ಅಜೇಯ 34 ರನ್ ಬಾರಿಸಿದರೆ, ಹರ್ಮೀತ್ ಸಿಂಗ್ ಅಜೇಯ 33 ರನ್ ಸಿಡಿಸಿದರು. ಈ ಮೂಲಕ 19.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ಮಟ್ಟುವ ಮೂಲಕ ಯುಎಸ್ಎ ತಂಡ ಭರ್ಜರಿ ಜಯ ಸಾಧಿಸಿದೆ.
ಐತಿಹಾಸಿಕ ಗೆಲುವು:
ಇದು ಯುಎಸ್ಎ ತಂಡ 2ನೇ ಐತಿಹಾಸಿಕ ಗೆಲುವು. ಅಂದರೆ ಐಸಿಸಿ ಖಾಯಂ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ ಯುಎಸ್ಎ ತಂಡ 2ನೇ ಬಾರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ 2021 ರಲ್ಲಿ ಐರ್ಲೆಂಡ್ ವಿರುದ್ಧ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿದು ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಯುಎಸ್ಎ ಪ್ಲೇಯಿಂಗ್ 11: ಮೊನಾಂಕ್ ಪಟೇಲ್ (ನಾಯಕ) , ಸ್ಟೀವನ್ ಟೇಲರ್ , ಆರನ್ ಜೋನ್ಸ್ , ಆಂಡ್ರೀಸ್ ಗೌಸ್ , ಕೋರಿ ಅ್ಯಂಡರ್ಸನ್ , ನಿತೀಶ್ ಕುಮಾರ್ , ಅಲಿ ಖಾನ್ , ಹರ್ಮೀತ್ ಸಿಂಗ್ , ಜಸ್ದೀಪ್ ಸಿಂಗ್ , ನೋಸ್ತುಶ್ ಕೆಂಜಿಗೆ , ಸೌರಭ್ ನೇತ್ರವಲ್ಕರ್.
ಇದನ್ನೂ ಓದಿ: IPL 2024: ಈ ಸಲ RCB ಕಪ್ ಗೆದ್ದೇ ಗೆಲ್ಲುತ್ತೆ ಎಂದ ವಿಜಯ ಮಲ್ಯ..!
ಬಾಂಗ್ಲಾದೇಶ್ ಪ್ಲೇಯಿಂಗ್ 11: ಲಿಟ್ಟನ್ ದಾಸ್ , ನಜ್ಮುಲ್ ಹೊಸೈನ್ ಶಾಂಟೋ (ನಾಯಕ) , ಸೌಮ್ಯ ಸರ್ಕಾರ್ , ಶಕೀಬ್ ಅಲ್ ಹಸನ್ , ತೌಹಿದ್ ಹೃದೋಯ್ , ಮಹಮದುಲ್ಲಾ , ಜೇಕರ್ ಅಲಿ, ಮಹೇದಿ ಹಸನ್ , ರಿಶಾದ್ ಹೊಸೈನ್ , ಮುಸ್ತಫಿಜುರ್ ರೆಹಮಾನ್ , ಶೋರಿಫುಲ್ ಇಸ್ಲಾಂ.
Published On - 12:07 pm, Wed, 22 May 24
