
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup 2026) ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಶತಕಗಳು ಮಾತ್ರ ದಾಖಲಾಗಿವೆ, ಆದರೆ ಪ್ರತಿ ಶತಕವೂ ಒಂದಲ್ಲ ಒಂದು ಕಾರಣಕ್ಕೆ ಐತಿಹಾಸಿಕವಾಗಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಟಾಜ್ಮಿನ್ ಬ್ರಿಟ್ಸ್ ಅಂತಹ ಒಂದು ಶತಕವನ್ನು ಬಾರಿಸುವ ಮೂಲಕ ತನ್ನ ತಂಡಕ್ಕೆ ದಾಖಲೆಯ ಗೆಲುವು ತಂದುಕೊಟ್ಟರು. ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದ್ದ ದಕ್ಷಿಣ ಆಫ್ರಿಕಾಕ್ಕೆ ಸೆಮಿಫೈನಲ್ ದೃಷ್ಟಿಯಿಂದ ದೊಡ್ಡ ಗೆಲುವಿನ ಅಗತ್ಯವಿತ್ತು. ಅಂತಹ ಸಂದರ್ಭದಲ್ಲಿ ತಂಡದ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದ ಟಾಜ್ಮಿನ್ ಬ್ರಿಟ್ಸ್ ಶತಕ ಬಾರಿಸುವ ಮೂಲಕ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು.
ಎ ಗುಂಪಿನಲ್ಲಿ ಸೆಮಿಫೈನಲ್ಗೇರಲು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ತಂಡಗಳು ಉಳಿದಿರುವ ಪಂದ್ಯಗಳನ್ನು ಗೆದ್ದರೂ ನೆಟ್ ರನ್ ರೇಟ್ ಆದಾರದ ಮೇಲೆ ಸೆಮಿಫೈನಲ್ಗೇರುವ ತಂಡವನ್ನು ನಿರ್ಧರಿಸಲಾಗುತ್ತದೆ. ಪ್ರಸ್ತುತ ನೆಟ್ ರನ್ ರೇಟ್ ವಿಚಾರದಲ್ಲಿ ಭಾರತ, ದಕ್ಷಿಣ ಆಫ್ರಿಕಾಕ್ಕಿಂತ ಮುಂದಿದೆ. ಅದರಲ್ಲೂ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಜಯಗಳಿಸಿದ ನಂತರ, ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲುವುದು ದಕ್ಷಿಣ ಆಫ್ರಿಕಾಕ್ಕೆ ಇನ್ನಷ್ಟು ನಿರ್ಣಾಯಕವಾಗಿತ್ತು.
ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ 208 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ತಂಡದ ಪರ ಇನ್ನಿಂಗ್ಸ್ ಪ್ರಾರಂಭಿಸಿದ ಬ್ರಿಟ್ಸ್ ಈ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಅನುಭವಿ ಬ್ಯಾಟರ್ ನೆದರ್‌ಲ್ಯಾಂಡ್ಸ್‌ನ ದುರ್ಬಲ ಬೌಲಿಂಗ್ನ ಲಾಭ ಪಡೆದು ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದರು.
ಬ್ರಿಟ್ಸ್ ಇನ್ನಿಂಗ್ಸ್‌ನ ವಿಶೇಷವೆಂದರೆ ಅದು ಅವರ ಟಿ20 ಅಂತರರಾಷ್ಟ್ರೀಯ ಪಂದ್ಯದ ಮೊದಲ ಶತಕವಾಗಿತ್ತು. ಅವರು ಈ ಹಿಂದೆ ಆಡಿದ 81 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 15 ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಎಂದಿಗೂ ಶತಕ ತಲುಪಿರಲಿಲ್ಲ. ಆದರೆ ಈ ಬಾರಿ ಬ್ರಿಟ್ಸ್ 69 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 114 ರನ್ ಬಾರಿಸಿ ಅಜೇಯರಾಗಿ ಉಳಿದರು.
ಈ ಗುರಿ ಬೆನ್ನಟ್ಟಿದ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ ಫೆಬೆ ಮೊಲ್ಕೆನ್‌ಬೋಯರ್ ಮತ್ತು ಸನ್ಯಾ ಖುರಾನಾ ಅವರೊಂದಿಗೆ ಸ್ಥಿರ ಆರಂಭ ಪಡೆಯಿತು. ಇವರಿಬ್ಬರು ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವನ್ನಾಡಿದರು. ಇವರಿಬ್ಬರ ವಿಕೆಟ್ಗಳ ನಂತರ ನೆದರ್ಲ್ಯಾಂಡ್ಸ್ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ತಂಡಕ್ಕೆ 100 ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಆಫ್ರಿಕಾ ತಂಡ 88 ರನ್ಗಳಿಂದ ಪಂದ್ಯವನ್ನು ಗೆದ್ದು ತನ್ನ ನೆಟ್ ರನ್ ರೇಟ್ ಅನ್ನು ಸುಧಾರಿಸಿಕೊಂಡಿತು.
IND vs BAN: ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕೆಟ್; ದಾಖಲೆ ಬರೆದ ಶ್ರೀ ಚರಣಿ
88 ರನ್‌ಗಳ ಬೃಹತ್ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್ಗೆ ಮತ್ತಷ್ಟು ಸನಿಹವಾಗಿದೆ. ಪ್ರಸ್ತುತ ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಲಾ ಆರು ಅಂಕಗಳನ್ನು ಹೊಂದಿವೆ. ಆದರೆ ಭಾರತದ ನೆಟ್ ರನ್ ರೇಟ್ ಆಫ್ರಿಕಾಕ್ಕಿಂತ ಹೆಚ್ಚಿರುವ ಕಾರಣ ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದ ನೆಟ್ ರನ್ ರೇಟ್ +2.268 ಆಗಿದ್ದರೆ, ಆಫ್ರಿಕಾದ ನೆಟ್ ರನ್ ರೇಟ್ +0.734 ಆಗಿದೆ. ಹೀಗಾಗಿ ಉಭಯ ತಂಡಗಳಲ್ಲಿ ಯಾವ ತಂಡ ಮುಂದಿನ ಪಂದ್ಯವನ್ನು ಗೆಲ್ಲುತ್ತದೋ ಆ ತಂಡಕ್ಕೆ ಸೆಮಿಸ್ ಟಿಕೆಟ್ ಸಿಗಲಿದೆ.
ಆದರೆ ಭಾರತದ ಮುಂದಿನ ಪಂದ್ಯ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧವಿದೆ. ಇತ್ತ ದಕ್ಷಿಣ ಆಫ್ರಿಕಾ ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಹೀಗಾಗಿ ಭಾರತ ತನ್ನ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು. ಅದು ಸಾಧ್ಯವಾಗದಿದ್ದರೆ, ಇತ್ತ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಸೋಲಲಿ ಎಂದು ಪ್ರಾರ್ಥಿಸಬೇಕು. ಒಂದು ವೇಳೆ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತು, ಇತ್ತು ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ ವಿರುದ್ಧ ಗೆದ್ದರೆ, ಭಾರತ ಸೆಮಿಫೈನಲ್ ರೇಸ್ನಿಂದ ಹೊರಬೀಳಲಿದೆ.
Published On - 2:51 pm, Fri, 26 June 26