AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಯುಎಇನಲ್ಲಿ ಟಾಸೇ ಬಾಸು: ಇದುವೇ ಕೊಹ್ಲಿಯ ದೊಡ್ಡ ಚಿಂತೆ

Virat Kohli: ಮೊದಲ ಪಂದ್ಯವನ್ನು ಗೆದ್ದಿರುವ ಅಫ್ಘಾನಿಸ್ತಾನ್, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟಾಸ್ ಗೆದ್ದು ಚೇಸಿಂಗ್ ಮೂಲಕ ಜಯ ಸಾಧಿಸಿತ್ತು ಎಂಬುದು ಇಲ್ಲಿ ವಿಶೇಷ.

T20 World Cup 2021: ಯುಎಇನಲ್ಲಿ ಟಾಸೇ ಬಾಸು: ಇದುವೇ ಕೊಹ್ಲಿಯ ದೊಡ್ಡ ಚಿಂತೆ
Virat Kohli
TV9 Web
| Edited By: |

Updated on: Oct 28, 2021 | 6:54 PM

Share

T20 World Cup 2021: ಟಿ20 ವಿಶ್ವಕಪ್​ನ ಸೂಪರ್ 12 ಪಂದ್ಯಗಳು ರಂಗೇರುತ್ತಿದೆ. ಈಗಾಗಲೇ 9 ಪಂದ್ಯಗಳು ಮುಗಿದಿದ್ದು, ಇದರಲ್ಲಿ ಟಾಸ್ ಗೆದ್ದಿರುವ ತಂಡಗಳೇ ವಿಜಯಿಶಾಲಿ ಆಗಿರುವುದು ವಿಶೇಷ. ಹೀಗಾಗಿ ಈ ಬಾರಿಯ ವಿಶ್ವಕಪ್​ನಲ್ಲಿ ಟಾಸ್ ಗೆದ್ದವರೇ ಬಾಸ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಟಾಸ್ ಗೆದ್ದಿರುವ ನಾಯಕರುಗಳು ಮೊದಲು ಬೌಲಿಂಗ್ ಆಯ್ದುಕೊಳ್ಳುತ್ತಿದ್ದು, ಆ ಮೂಲಕ ತಂಡಗಳು ಚೇಸಿಂಗ್​ನಲ್ಲಿ ಜಯ ಸಾಧಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮರಳುಗಾಡಿನ ಪಿಚ್​ನಲ್ಲಿ ರಾತ್ರಿ ವೇಳೆ ಇಬ್ಬನಿಯಾಗುತ್ತಿರುವುದು. ಇದರಿಂದಾಗಿ 2ನೇ ಇನಿಂಗ್ಸ್​ ವೇಳೆ ಬೌಲರುಗಳು ಪರಿಣಾಮಕಾರಿಯಾಗುತ್ತಿಲ್ಲ. ಈ ಕಾರಣದಿಂದಾಗಿ ಟಾಸ್ ಗೆಲ್ಲುವ ತಂಡಗಳ ನಾಯಕರುಗಳು ಮೊದಲು ಫೀಲ್ಡಿಂಡ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೆ ಉದಾಹರಣೆಯೆಂದರೆ ಭಾರತ ಹಾಗೂ ಪಾಕಿಸ್ತಾನ್ ನಡುವಣ ಪಂದ್ಯ. ಟೀಮ್ ಇಂಡಿಯಾ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಪಾಕ್ ತಂಡವು ಸುಲಭವಾಗಿ ಚೇಸ್ ಮಾಡಿತ್ತು. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ವಿರುದ್ದ ಕೂಡ ಪಾಕ್ ತಂಡ ಚೇಸಿಂಗ್ ಮೂಲಕ ಜಯ ಸಾಧಿಸಿತ್ತು. ಈ ಎರಡೂ ಪಂದ್ಯಗಳಲ್ಲೂ ಪಾಕ್ ನಾಯಕ ಬಾಬರ್ ಆಜಂ ಟಾಸ್ ಗೆದ್ದಿದ್ದರು. ಇನ್ನೊಂದೆಡೆ ಇಂಗ್ಲೆಂಡ್ ತಂಡ ಕೂಡ ಟಾಸ್ ಗೆದ್ದು 2 ಪಂದ್ಯಗಳನ್ನು ಚೇಸ್ ಮೂಲಕ ಗೆದ್ದುಕೊಂಡಿದೆ. ಇನ್ನು ಮೊದಲ ಪಂದ್ಯವನ್ನು ಗೆದ್ದಿರುವ ಅಫ್ಘಾನಿಸ್ತಾನ್, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟಾಸ್ ಗೆದ್ದು ಚೇಸಿಂಗ್ ಮೂಲಕ ಜಯ ಸಾಧಿಸಿತ್ತು ಎಂಬುದು ಇಲ್ಲಿ ವಿಶೇಷ. ಅಷ್ಟೇ ಅಲ್ಲದೆ ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದ ನಮೀಬಿಯಾ ಚೇಸ್ ಮಾಡಿ ರೋಚಕ ಜಯ ತನ್ನದಾಗಿಸಿಕೊಂಡಿತ್ತು. ಅಂದರೆ ಮೊದಲು ಫೀಲ್ಡಿಂಗ್​ ಮಾಡಿದ ತಂಡವು ಈ ಬಾರಿ ಗೆಲ್ಲುತ್ತಿದ್ದು, ಹೀಗಾಗಿ ಪಂದ್ಯದ ಗೆಲುವಿನಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸುತ್ತಿದೆ.

ಇನ್ನೊಂದೆಡೆ ಟಾಸ್​ ವಿಷಯದಲ್ಲಿ ನತದೃಷ್ಟ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿಗೆ ಇದುವೇ ಈಗ ದೊಡ್ಡ ಚಿಂತೆಯಾಗಿ ಮಾರ್ಪಟ್ಟಿದೆ. ಏಕೆಂದರೆ ಕೊಹ್ಲಿ ಟೀಮ್ ಇಂಡಿಯಾವನ್ನು 45 ಟಿ20 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಈ ವೇಳೆ ಟಾಸ್ ಗೆದ್ದಿದ್ದು ಕೇವಲ 18 ಬಾರಿ ಮಾತ್ರ. ಇನ್ನು ಏಕದಿನ ಪಂದ್ಯಗಳ ಅಂಕಿ ಅಂಶ ತೆಗೆದುಕೊಂಡರೂ ಕೊಹ್ಲಿ 95 ಪಂದ್ಯಗಳಲ್ಲಿ 40 ಬಾರಿ ಮಾತ್ರ ಟಾಸ್ ಗೆದ್ದಿದ್ದಾರೆ. ಹಾಗೆಯೇ 63 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಟಾಸ್ ಗೆದ್ದಿದ್ದು ಕೇವಲ 27 ಬಾರಿ ಮಾತ್ರ.

ಇತ್ತ ಯುಎಇನಲ್ಲಿ ಟಾಸ್ ಗೆಲ್ಲುವ ತಂಡಗಳು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಮೂಲಕ ಇಬ್ಬನಿಯ ಪ್ರಯೋಜನ ಪಡೆದು ಸುಲಭವಾಗಿ ಚೇಸ್ ಮಾಡುತ್ತಿದ್ದಾರೆ. ಆದರೆ ಟಾಸ್ ವಿಷಯದಲ್ಲಿ ಅನ್​ಲಕ್ಕಿ ಎನಿಸಿಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಈಗ ಟಾಸ್ ಗೆಲ್ಲೋದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?

ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ

ಇದನ್ನೂ ಓದಿ:  T20 World Cup 2021: ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದ ಪಾಕ್ ಕ್ರಿಕೆಟಿಗ

(T20 World Cup 2021: The dew factor and the toss)