ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾನುವಾರ ನಡೆದ ಸೂಪರ್-12 ಸುತ್ತಿನಲ್ಲಿ ಟೀಂ ಇಂಡಿಯಾ ಪಾಕಿಸ್ತಾವನ್ನು (India vs Pakistan) ಎದುರಿಸಿತ್ತು. ಈ ಪಂದ್ಯದಲ್ಲಿ ಬಾಬರ್ ಪಡೆಯನ್ನು 4 ವಿಕೆಟ್ಗಳಿಂದ ಮಣಿಸಿದ ರೋಹಿತ್ ಬಳಗ ತನ್ನ ವಿಶ್ವಕಪ್ ಅಭಿಯಾನವನ್ನು ಶುಭಾರಂಭ ಮಾಡಿತು. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಪ್ರಮುಖ ಪಾತ್ರ ವಹಿಸಿದ್ದರು. ಸೋಲಿನ ದವಡೆಯಲ್ಲಿದ್ದ ತಂಡವನ್ನು ಮೇಲೆತ್ತಿದ್ದಲ್ಲದೆ ಅಜೇಯ ಅರ್ಧಶತಕದ ಇನ್ನಿಂಗ್ಸ್ ಸಹ ಆಡಿದರು. ತನ್ನ ಸ್ಫೋಟಕ ಇನ್ನಿಂಗ್ಸ್ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇದು ಸಾಲದೆಂಬಂತೆ ದಶಕದ ಶ್ರೇಷ್ಠ ಇನ್ನಿಂಗ್ಸ್ ಆಡಿದ ಕೊಹ್ಲಿಗೆ ಐಸಿಸಿ (ICC) ಕೂಡ ವಿಶೇಷ ಗೌರವ ಸೂಚಿಸಿದೆ.
ದಿ ಕಿಂಗ್ ಈಸ್ ಬ್ಯಾಕ್
ಪಂದ್ಯದ ನಂತರ, ಕಿಂಗ್ ಕೊಹ್ಲಿಯ ಗ್ರಾಫಿಕ್ ಫೋಟೋವೊಂದನ್ನು ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿರುವ ಐಸಿಸಿ, “ದಿ ಕಿಂಗ್ ಈಸ್ ಬ್ಯಾಕ್” ಎಂಬ ಶೀರ್ಷಿಕೆಯೊಂದನ್ನು ನೀಡಿದೆ. ಐಸಿಸಿ ಪೋಸ್ಟ್ನಲ್ಲಿ ಇರುವ ವಿಶೇಷವೆಂದರೆ, ಈ ಗ್ರಾಫಿಕ್ ಫೋಟೋದಲ್ಲಿ ವಿರಾಟ್ ಕೊಹ್ಲಿ ಒಂದು ಕೋಟೆಯ ಮುಂದೆ ಸಿಂಹಾಸನದ ಮೇಲೆ ಕುಳಿತಿರುವುದಾಗಿ ಬಿಂಬಿಸಲಾಗಿದೆ. ಐಸಿಸಿ ಕೊಹ್ಲಿಗೆ ನೀಡಿರುವ ಗೌರವವನ್ನು ಕಂಡು ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಈ ಫೋಟೋ ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ.
The KING is back ?
Take a bow, Virat Kohli ?#T20WorldCup | #INDvPAK pic.twitter.com/OdAnbmso0h
— ICC (@ICC) October 23, 2022
ಪಂದ್ಯದ ಸಾರಾಂಶ ಹೀಗಿದೆ
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಬಾಬರ್ ಎರಡನೇ ಓವರ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ರಿಜ್ವಾನ್ 4 ರನ್ಗಳಿಸಿ ಅರ್ಷದೀಪ್ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಎರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ವೇಳೆ ಇಫ್ತಿಕರ್ 34 ಎಸೆತಗಳಲ್ಲಿ 51 ರನ್ ಗಳಿಸಿದರೆ, ಮಸೂದ್ ಅಜೇಯ 52 ರನ್ ಗಳಿಸಿದರು. ಇವರಿಬ್ಬರ 81 ರನ್ ಜೊತೆಯಾಟ ಪಾಕಿಸ್ತಾನವನ್ನು 150 ರ ಗಡಿ ದಾಟುವಂತೆ ಮಾಡಿತು.
ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗಿ, ರಾಮ ಮಂದಿರಕ್ಕೆ ಭೇಟಿ ನೀಡುವುದೇ ನನ್ನ ಗುರಿ ಎಂದ ಪಾಕ್ ಕ್ರಿಕೆಟರ್..!
160 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 31 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಂದ್ಯದ ಮೇಲಿನ ಭರವಸೆಯನ್ನು ಬಹುತೇಕ ಬಿಟ್ಟಿದ್ದರು. ಆದರೆ ಕೊಹ್ಲಿ, 37 ಎಸೆತಗಳಲ್ಲಿ 40 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ಅವರೊಂದಿಗೆ 113 ರನ್‌ಗಳ ಅದ್ಭುತ ಜೊತೆಯಾಟದೊಂದಿಗೆ ತಂಡವನ್ನು ಮತ್ತೆ ಗೆಲುವಿನ ಟ್ರ್ಯಾಕ್ಗೆ ತಂದರು.
ಅಂತಿಮವಾಗಿ ಟೀಂ ಇಂಡಿಯಾ ಗೆಲುವಿಗೆ ಮೂರು ಓವರ್‌ಗಳಲ್ಲಿ 48 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್ವರೆಗೂ ಭಾರತದ ಗೆಲುವು ಕಷ್ಟ ಎನಿಸಿತು. ಆದರೆ ಕೊಹ್ಲಿ ತಮ್ಮ ಅದ್ಭುತ ಹೊಡೆತಗಳಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:22 pm, Mon, 24 October 22