India vs Netherlands: ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯ ಟೀಮ್ ಇಂಡಿಯಾಗೆ ಏಕೆ ಬಹಳ ಮುಖ್ಯ? ಇಲ್ಲಿದೆ 4 ಕಾರಣಗಳು

| Updated By: ಝಾಹಿರ್ ಯೂಸುಫ್

Updated on: Oct 26, 2022 | 10:10 PM

India vs Netherlands: ನೆದರ್​ಲ್ಯಾಂಡ್ಸ್ ವಿರುದ್ಧ ತನ್ನೆಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.

India vs Netherlands: ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯ ಟೀಮ್ ಇಂಡಿಯಾಗೆ ಏಕೆ ಬಹಳ ಮುಖ್ಯ? ಇಲ್ಲಿದೆ 4 ಕಾರಣಗಳು
India vs Netherlands
Follow us on

T20 World Cup 2022: ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಗುರುವಾರ ಭಾರತ ತಂಡವು ನೆದರ್​ಲ್ಯಾಂಡ್ಸ್​ (India vs Netherlands) ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ರೋಚಕ ಜಯ ಸಾಧಿಸಿರುವ ಟೀಮ್ ಇಂಡಿಯಾಗೆ (Team India) ಈ ಪಂದ್ಯ ಕೂಡ ಬಹಳ ಮಹತ್ವದ್ದು. ಏಕೆಂದರೆ ಈ ಪಂದ್ಯದ ಬಳಿಕ ಭಾರತ ತಂಡವು ಕಣಕ್ಕಿಳಿಯಬೇಕಿರುವುದು ಸೌತ್ ಆಫ್ರಿಕಾ (South Africa) ವಿರುದ್ಧ. ಹೀಗಾಗಿ ನೆದರ್​ಲ್ಯಾಂಡ್ಸ್ ವಿರುದ್ಧ ತನ್ನೆಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಇದಲ್ಲದೆ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಹತ್ವದೆನಿಕೊಳ್ಳಲು ಇನ್ನೂ ಹಲವು ಕಾರಣಗಳಿವೆ….

1- ಗೆಲುವಿನ ಲಯ:

ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿ ಶುಭಾರಂಭ ಮಾಡಿದೆ. ಆದರೆ ಆ ಗೆಲುವಿನ ಲಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ಅದರಲ್ಲೂ ಏಕಪಕ್ಷೀಯ ಗೆಲುವಿನ ಮೂಲಕ ಟೀಮ್ ಇಂಡಿಯಾಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಿಕ್ಕ ಅತ್ಯುತ್ತಮ ಅವಕಾಶ ಎಂದರೆ ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯ. ಏಕೆಂದರೆ 3ನೇ ಪಂದ್ಯದಲ್ಲಿ ಭಾರತ ಎದುರಾಳಿ ಸೌತ್ ಆಫ್ರಿಕಾ ತಂಡ. ಹೀಗಾಗಿ ಅದಕ್ಕೂ ಮುನ್ನ ತನ್ನೆಲ್ಲಾ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ.

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

2- ಕೈ ಕೊಡುತ್ತಿರುವ ಹವಾಮಾನ:

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಇದೀಗ ವರುಣನ ಅವಕೃಪೆಗೆ ಒಳಗಾಗುತ್ತಿದೆ. ಈಗಾಗಲೇ 2 ಪಂದ್ಯಗಳು ರದ್ದಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ರದ್ದಾದ ಪಂದ್ಯಗಳಲ್ಲಿ ಉಭಯ ತಂಡಗಳಿಗೆ ಕೇವಲ 1 ಪಾಯಿಂಟ್ ಮಾತ್ರ ಸಿಗಲಿದೆ. ಒಂದು ವೇಳೆ ಟೀಮ್ ಇಂಡಿಯಾದ ಮುಂದಿನ ಯಾವುದಾದರೂ ಪಂದ್ಯ ಮಳೆಯಿಂದ ರದ್ದಾದರೆ ಸಂಕಷ್ಟಕ್ಕೆ ಸಿಲುಕಬಹುದು. ಹೀಗಾಗಿ ನೆದರ್​ಲ್ಯಾಂಡ್ಸ್​ ವಿರುದ್ಧ ಭರ್ಜರಿ ಜಯ ಸಾಧಿಸಿ ನೆಟ್​ ರನ್​ ರೇಟ್ ಹೆಚ್ಚಿಸಿಕೊಳ್ಳಬೇಕಿದೆ. ಏಕೆಂದರೆ ಮಳೆಯಿಂದ ಪಂದ್ಯಗಳು ರದ್ದಾಗಲು ಆರಂಭಿಸಿದರೆ ಅಂತಿಮವಾಗಿ ಸೆಮಿಫೈನಲ್​ ಪ್ರವೇಶಿಸಲು ನೆಟ್ ರನ್​ ರೇಟ್ ಮೊರೆ ಹೋಗಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಪ್ರತಿ ಪಂದ್ಯವನ್ನು ಗೆಲ್ಲುವುದು ಮುಖ್ಯ. ಅದರಲ್ಲೂ ಭಾರೀ ಅಂತರದಿಂದ ಗೆಲ್ಲುವುದು ಬಹಳ ಮುಖ್ಯ.

3- ಬ್ಯಾಟಿಂಗ್ ವೈಫಲ್ಯ:

ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಪತ್ಭಾಂಧವರಾಗಿದ್ದು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ. ಅದರಲ್ಲೂ ಅಗ್ರ ಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವಿಫಲರಾಗಿದ್ದರು. ಕೇವಲ 31 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ನೆದರ್​ಲ್ಯಾಂಡ್ಸ್​ ವಿರುದ್ಧ ಅಗ್ರ ಕ್ರಮಾಂಕದ ಆಟಗಾರರು ಫಾರ್ಮ್​ಗೆ ಮರಳಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಸ್ಪೋಟಕ ಆರಂಭ ಒದಗಿಸಿ ಉತ್ತಮ ಅಡಿಪಾಯ ಹಾಕಿಕೊಡಬೇಕಾದ ಅವಶ್ಯಕತೆಯಿದೆ.

4- ಡೆತ್ ಓವರ್​ಗಳ ಸುಧಾರಣೆ:

ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಗೆದ್ದಿರಬಹುದು. ಆದರೆ ಬೌಲಿಂಗ್ ಹೇಳಿಕೊಳ್ಳುವಂತಿರಲಿಲ್ಲ ಎಂಬುದಕ್ಕೆ ಭಾರತದ ಬೌಲರ್​ಗಳು ದ್ವಿತಿಯಾರ್ಧದಲ್ಲಿ ನೀಡಿದ ರನ್​ಗಳ ಸಾಕ್ಷಿ. ಅಂದರೆ ಮೊದಲ 10 ಓವರ್​ಗಳಲ್ಲಿ ಕೇವಲ 60 ರನ್​ ಬಿಟ್ಟುಕೊಟ್ಟಿದ್ದ ಟೀಮ್ ಇಂಡಿಯಾ ಬೌಲರ್​ಗಳು 2ನೇ 10 ಓವರ್​ಗಳಲ್ಲಿ 99 ರನ್ ನೀಡಿದ್ದರು. ಅದರಲ್ಲೂ ಡೆತ್​ ಓವರ್​ಗಳಲ್ಲಿ ರನ್ ಬಿಟ್ಟು ಕೊಟ್ಟ ಪರಿಣಾಮ ಪಾಕಿಸ್ತಾನ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. ಹೀಗಾಗಿ ಡೆತ್ ಓವರ್​ಗಳ ವೇಳೆ ರನ್ ನಿಯಂತ್ರಿಸುವುದು ಕೂಡ ಟೀಮ್ ಇಂಡಿಯಾ ಪಾಲಿಗೆ ಅತ್ಯಗತ್ಯ. ಹೀಗಾಗಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯ ಕೊನೆಯ ಅವಕಾಶ ಎಂದೇ ಹೇಳಬಹುದು.